ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇದು ರೆಗ್ಯುಲರ್ ಜಾಮೀನು ಅಲ್ಲ. 6 ವಾರ ಅಂದ್ರೆ 42 ದಿನ ಕಳೆದ ನಂತರ ದರ್ಶನ್ ಮತ್ತೆ ಜೈಲಿಗೆ ಹೋಗಬೇಕು. ಇದು ಸದ್ಯದ ಪರಿಸ್ಥಿತಿ. ಆದರೆ ದರ್ಶನ್ ಅವರೇನೋ ಸದ್ಯಕ್ಕೆ ಬಿಡುಗಡೆಯಾಗಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ದರ್ಶನ್‌ಗೆ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿತ್ತು. ಅದಾದ ನಂತರ ಅದೇ ದಿನ ಸಂಜೆ 6 ಗಂಟೆಯ ಹೊತ್ತಿಗೆಲ್ಲ ದರ್ಶನ್ ಹೊರಗೆ ಬಂದಿದ್ದರು.
2 ಲಕ್ಷದ ಬಾಂಡ್, ಇಬ್ಬರ ಶ್ಯೂರಿಟಿ, ಪಾಸ್ ಪೋರ್ಟ್ ಸರೆಂಡರ್.. ಹೀಗೆ ಎಲ್ಲವನ್ನೂ ಪೂರೈಸಿದ ದರ್ಶನ್ ಜಾಮೀನು ಸಿಕ್ಕ 7 ಗಂಟೆಯೊಳಗೆ ಬಿಡುಗಡೆಯಾದರು. ಅದರೆ ಅದೇ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ರವಿಶಂಕರ್ (ಈತ ದರ್ಶನ್ ಅಭಿಮಾನಿ) ಅವರಿಗೆ ಜಾಮೀನು ಸಿಕ್ಕರೂ ಬಿಡುಗಡೆ ಆಗೋದಕ್ಕೆ 17 ದಿನ ತೆಗೆದುಕೊಂಡಿದೆ.
ದರ್ಶನ್ ಅವರಿಗೆ 2 ಲಕ್ಷದ ಬಾಂಡ್ ಸಮಸ್ಯೆಯೇ ಅಲ್ಲ. ಇನ್ನು ಅವರಿಗೆ ಶ್ಯೂರಿಟಿ ಕೊಡುವುದಕ್ಕೆ ತಮ್ಮ ದಿನಕರ್ ತೂಗುದೀಪ ಇದ್ದರು. ಅವರು ತಮ್ಮ ಮಾಗಡಿಯಲ್ಲಿದ್ದ ಪ್ರಾಪರ್ಟಿಯನ್ನು ಶ್ಯೂರಿಟಿಯಾಗಿ ಕೊಟ್ಟರು. ಇನ್ನು ನಟ ಧನ್ವೀರ್ ಕೂಡಾ ತಮ್ಮ ಆಸ್ತಿಯನ್ನು ಶ್ಯೂರಿಟಿಯಾಗಿ ಕೊಟ್ಟರು. ಅವರ ತಂದೆಯೂ ಕುಬೇರರೇ. ಆದರೆ ಈ ಅದೃಷ್ಟ ರವಿಶಂಕರ್ ಅವರಿಗೆ ಇರಲಿಲ್ಲ.
ಆರೋಪಿ ನಂ.8 ರವಿಶಂಕರ್ ಅವರಿಗೆ ಜಾಮೀನು ಸಿಕ್ಕಿದ್ದು 17 ದಿನಗಳು ಕಳೆದ ನಂತರ ಬಿಡುಗಡೆಯಾಗಿದೆ. ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಗೆ ಹೋಗಲು ಇಬ್ಬರು ಶ್ಯೂರಿಟಿದಾರರು ಹಾಗೂ 2 ಲಕ್ಷ ರೂ. ಮೌಲ್ಯದ ಬಾಂಡ್ ಅನ್ನು ನೀಡುವಂತೆ ನ್ಯಾಯಾಲಯದಿಂದ ಷರತ್ತು ವಿಧಿಸಲಾಗಿತ್ತು. ಆದರೆ, 57 ನೇ ಸಿಸಿಎಚ್ ನ್ಯಾಯಾಲಯ ಕೇಳಿದ್ದ ಶ್ಯೂರಿಟಿಯನ್ನು ಪೂರೈಸಲಾಗದೇ ದರ್ಶನ್ ಗ್ಯಾಂಗ್‌ನ ಸಹಚರ ರವಿಕುಮಾರ್ ಕಳೆದ 16 ದಿನಗಳಿಂದ ಜಾಮೀನು ಸಿಕ್ಕಿದ್ದರೂ ಜೈಲಿನಲ್ಲಿಯೇ ಶಿಕ್ಷೆ ಅನುಭವಿಸುತ್ತಿದ್ದರು. ಇದಕ್ಕೆ ಕಾರಣ ಅವರಿಗೆ 2 ಲಕ್ಷ ರೂ. ಮೌಲ್ಯದ ಬಾಂಡ್ ಅನ್ನು ಕೊಡುವುದಕ್ಕೆ ಅವರ ಕುಟುಂಬದಲ್ಲಿ ಯಾರಿಗೂ ಆರ್ಥಿಕ ಶಕ್ತಿಯೇ ಇರಲಿಲ್ಲ. ಆದ್ದರಿಂದ ಜಾಮೀನು ಸಿಕ್ಕಿದರೂ ಅದರ ಪ್ರಕ್ರಿಯೆಗಳನ್ನು ಪೂರೈಸಲು ಬರೋಬ್ಬರಿ 17 ದಿನಗಳನ್ನು ತೆಗೆದುಕೊಂಡಿದ್ದಾರೆ. ಇಂದು 17ನೇ ದಿನ ಜಾಮೀನು ಪ್ರಕ್ರಿಯೆಗೆ ಬೇಕಾದ ಎಲ್ಲ ಷರತ್ತುಗಳನ್ನು ಪೂರೈಸಿದ ನಂತರ ನಂ-8ನೇ ಆರೋಪಿ ರವಿಶಂಕರ್ ಜೈಲಿನಿಂದ ಹೊರಗೆ ಬಂದಿದ್ದಾರೆ.
ಇವರಷ್ಟೇ ಅಲ್ಲ, ಈ ಹಿಂದೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಮೊದಲ ಬಾರಿ ಬಿಡುಗಡೆಯಾಗಿದ್ದ ಮೂವರು ಆರೋಪಿಗಳು ಕೂಡಾ ಅಷ್ಟೇ. 2 ಲಕ್ಷದ ಬಾಂಡ್ ಕೊಡುವುದಕ್ಕೆ ಸಾಧ್ಯವಾಗದೆ, 2 ಲಕ್ಷದ ಬಾಂಡ್ ಹೊಂದಿಸುವ ಶಕ್ತಿ ಇಲ್ಲದೆ ಜಾಮೀನು ಸಿಕ್ಕರೂ ವಾರಗಳ ಕಾಲ ಜೈಲಿನಲ್ಲಿಯೇ ಇದ್ದರು. ರವಿಶಂಕರ್ ಕೂಡಾ ಹಾಗೆಯೇ ಜೈಲು ಸೇರಿ, ಜಾಮೀನು ಪಡೆದು 17 ದಿನಗಳ ನಂತರ ಷರತ್ತು ಪೂರೈಸಿದ್ದಾರೆ.