ಕನ್ನಡದ ಚಿತ್ರಗಳನ್ನು ತೆಲುಗು, ತಮಿಳಿನಿಂದ ಕಾಪಿ ಮಾಡ್ತಾರೆ ಅನ್ನೋವ್ರ ಮಧ್ಯೆ ಆಗಾಗ್ಗೆ ತೆಲುಗು ಸಿನಿಮಾ ದೃಶ್ಯಗಳೂ ಕನ್ನಡದಲ್ಲಿ ಕಾಪಿ ಆಗುತ್ತವೆ. ಇದೀಗ ಪುಷ್ಪ-2 ಚಿತ್ರ ರಿಲೀಸ್ ಆಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ದರ್ಶನ್‌ರ ಕಾಟೇರ ಚಿತ್ರವನ್ನು ನೆನಪು ಮಾಡಿಕೊಳ್ತಿದ್ದಾರೆ. ಕಾರಣ, ಪುಷ್ಪದ ಚಿತ್ರದ ಕೆಲವು ದೃಶ್ಯಗಳನ್ನು ಕಾಟೇರ ಚಿತ್ರದ ಯಥಾವತ್ ಕಾಪಿಯಂತೆ ಮಾಡಲಾಗಿದೆ.
ಪುಷ್ಪ ಕರ್ನಾಟಕದಲ್ಲಿ ಪ್ರೇಕ್ಷಕರನ್ನು ʻದರೋಡೆʼ ಮಾಡುತ್ತಿರುವ ಬಿಗ್ ಸ್ಟಾರ್ ಸಿನಿಮಾ. ಭರ್ಜರಿ ಕಲೆಕ್ಷನ್ ಕೂಡಾ ಮಾಡುತ್ತಿದೆ. ಕರ್ನಾಟಕದ ಪ್ರೇಕ್ಷಕರು, ತೆಲುಗು, ತಮಿಳಿನವರ ಹಾಗಲ್ಲ, ಎಷ್ಟು ದುಡ್ಡು ಬೇಕಾದರೂ ಕೊಟ್ಟು ನೋಡ್ತಾರೆ. ಅದು ತೆಲುಗು, ತಮಿಳು ಚಿತ್ರತಂಡದವರಿಗೂ ಗೊತ್ತು. ಕನ್ನಡದವರು ಎಂತಹ ಸಿನಿಮಾ ಮಾಡಿದರೂ ನೋಡ್ತಾರೆ. ಇಲ್ಲಿ ಕನ್ನಡದಲ್ಲಿ ರಿಲೀಸ್ ಮಾಡದೆ, ತೆಲುಗು, ತಮಿಳಿನಲ್ಲಿ ಸಿನಿಮಾ ಹಾಕಿದರೂ ಪ್ರಸಾದ ಎಂಬಂತೆ ನೋಡುತ್ತಾರೆ. ಇಂತಹದರ ಮಧ್ಯೆ ಪುಷ್ಪ-2 ಅದ್ಧೂರಿಯಾಗಿಯೇ ಗೆದ್ದಿದೆ. ಇದರ ನಡುವೆ ಪುಷ್ಪ ಚಿತ್ರದಲ್ಲಿ ಕಾಟೇರ ಮತ್ತು ಭೈರತಿ ರಣಗಲ್ ದೃಶ್ಯಗಳ ಕಾಪಿ ಇದೆ ಎನ್ನುವುದು ಅಚ್ಚರಿ ಹುಟ್ಟಿಸುತ್ತಿದೆ.
ಕಾಟೇರ ಚಿತ್ರದ ಆ ದೃಶ್ಯ ಏನು..?
ಕಳೆದ ವರ್ಷದ ಕೊನೆಯಲ್ಲಿ ಬಂದಿದ್ದ ಕಾಟೇರ ಚಿತ್ರದಲ್ಲಿ ಕಾಟೇರ ಜೈಲಿನಿಂದ ಬಂದ ಕಾಟೇರನನ್ನು ಕೊಲ್ಲೋಕೆ ಒಂದು ತಂಡವೇ ಬರುತ್ತದೆ. ಆಗ ಪೊಲೀಸ್ ಅಚ್ಯುತ್ ಕುಮಾರ್ ದರ್ಶನ್ ಕೈಗೆ ಬೇಡಿ ಹಾಕಿರುತ್ತಾರೆ. ಆದರೂ ಶತ್ರುಗಳೊಂದಿಗೆ ಬಾಯಿಯಲ್ಲೇ ರಕ್ತ ಹೀರುವ ಕಾಟೇರ, ಬಾಯಲ್ಲಿ ಮಚ್ಚು ಹಿಡಿದುಕೊಂಡೇ ಶತ್ರುಗಳ ಎದೆಯನ್ನು ಬಗೆಯುತ್ತಾನೆ. ಆ ದೃಶ್ಯವಂತೂ ಪ್ರೇಕ್ಷಕರಿಗೆ ರೋಮಾಂಚನ ಸೃಷ್ಟಿಸಿತ್ತು. ಈಗ ಪುಷ್ಪದಲ್ಲಿಯೂ ಅದೇ ಮಾದರಿಯ ಸೀನ್ ಇದೆ. ಇಲ್ಲಿಯೂ ದರ್ಶನ್ ಅವರಂತೆಯೇ ಕೈಕಾಲು ಕಟ್ಟಿಕೊಂಡಿದ್ದ ವೇಳೆ ಅಟ್ಯಾಕ್ ಮಾಡುವ ವಿಲನ್ನುಗಳನ್ನು ಪುಷ್ಪ ಬಾಯಿಲ್ಲಿಯೇ ಕಚ್ಚಿ ಕಚ್ಚಿ ರಕ್ತ ಕುಡಿಯುವ ದೃಶ್ಯವಿದೆ. ಇದು ಕಾಟೇರ ಚಿತ್ರ ಕಾಪಿ ಎನ್ನುತ್ತಿದ್ದಾರೆ ಚಿತ್ರ ಪ್ರೇಕ್ಷಕರು.
ಭೈರತಿ ರಣಗಲ್ ಸೀನ್ ಏನು..?
ಇನ್ನು ಭೈರತಿ ರಣಗಲ್ ಸಿನಿಮಾದಲ್ಲಿ ಸಿಎಂ ಬದಲಾವಣೆ ಮಾಡುವ ರೀತಿಯ ದೃಶ್ಯವೂ ಪುಷ್ಪದಲ್ಲಿದೆ. ತನಗೆ ಬೆಂಬಲವಾಗಿದ್ದ ಎಂಪಿಯನ್ನು ಸಿಎಂ ಮಾಡಲು ಹೊರಡುತ್ತಾನೆ ಪುಷ್ಪ. ಜಸ್ಟ್ ಸಿಎಂ ತನ್ನ ಜೊತೆ ಒಂದು ಫೋಟೋ ತೆಗೆಸಿಕೊಳ್ಳೋಕೆ ಹಿಂದೆ ಮುಂದೆ ನೋಡಿದ ಎನ್ನುವ ಕಾರಣಕ್ಕೆ 500 ಕೋಟಿ ಖರ್ಚು ಮಾಡಿ ಸಿಎಂ ಬದಲಿಸ್ತಾನೆ ಪುಷ್ಪರಾಜ್. ಇಂಥಧ್ದೇ ದೃಶ್ಯ ಭೈರತಿ ರಣಗಲ್ ಚಿತ್ರದಲ್ಲೂ ಇತ್ತು.
ಇದೆಲ್ಲದರ ಮಧ್ಯೆ ಈ ಮುನ್ನ ಟೀಸರ್‌ನಲ್ಲಿ ತೋರಿಸಿದ್ದ, ರೋಮಾಂಚನ ಹುಟ್ಟಿಸಿದ್ದ ದೃಶ್ಯಗಳು ಸಿನಿಮಾದಲ್ಲಿಲ್ಲ ಎಂಬ ಆರೋಪವೂ ಇದೆ. ಪುಷ್ಪ-2 ಚಿತ್ರ ಕಥೆಗಿಂತ ಹೆಚ್ಚಾಗಿ ಪುಷ್ಪರಾಜ್ ವಿಜೃಂಭಣೆಯಲ್ಲೇ ಮೆರೆಯುತ್ತದೆ. ಕೊನೆಗೆ ಪುಷ್ಪ-3ಯ ಸುಳಿವು ಕೊಟ್ಟು ಸಿನಿಮಾ ಮುಗಿಸಿದ್ದಾರೆ ಡೈರೆಕ್ಟರ್ ಸುಕುಮಾರ್.
ಪುಷ್ಪ-2 ಚಿತ್ರ ಮೊದಲ ದಿನವೇ ಹೌಸ್ ಫುಲ್ ಆಗಿದೆ. ಹೀಗಿದ್ದರೂ ಬಹಳಷ್ಟು ಶೋಗಳಲ್ಲಿ ಥಿಯೇಟರ್ ಒಳಗೆ ಜನ ಇಲ್ಲ ಎಂಬುದೂ ಕೂಡಾ ಕಾಣಿಸಿದೆ. ಅದಕ್ಕೆಲ್ಲ ಕಾರಣ ಚಿತ್ರವನ್ನು ಜಾಸ್ತಿ ಸ್ಕ್ರೀನುಗಳಲ್ಲಿ ರಿಲೀಸ್ ಮಾಡಿರೋದು. ಅಂದಹಾಗೆ ಪುಷ್ಪ ಚಿತ್ರಕ್ಕಾಗಿ ಭೈರತಿ ರಣಗಲ್, ಬಘೀರ ಚಿತ್ರಗಳು ಎತ್ತಂಗಡಿಯಾಗಿವೆ. ತೆಲುಗು, ತಮಿಳು, ಮಲಯಾಳಂನಲ್ಲಿ ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಭೈರತಿ ರಣಗಲ್ ಚಿತ್ರ, ಈಗ ಅಲ್ಲಿ ಒಂದೇ ಒಂದು ಥಿಯೇಟರ್/ಸ್ಕ್ರೀನಿನಲ್ಲೂ ಇಲ್ಲ. ಅವರ ಸಿನಿಮಾಗೆ ಕರ್ನಾಟಕಕದಲ್ಲಿ ಬೇಕಾದಷ್ಟು ಸ್ಕ್ರೀನ್/ಥಿಯೇಟರ್ ಪಡೆದುಕೊಳ್ಳೋ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದವರು ಕನ್ನಡದ ಚಿತ್ರಗಳನ್ನು ಒಳಗೆ ಕೂಡಾ ಬಿಟ್ಟುಕೊಳ್ಳುತ್ತಿಲ್ಲ. ಅಂದಹಾಗೆ ಕನ್ನಡದವರು ಅಲ್ಲಿಗೆ ಹೋದಾಗ ಅಲ್ಲಿ ಜಾಹೀರಾತು ಕೊಡ್ತಾರೆ. ಪ್ರಚಾರ ಮಾಡ್ತಾರೆ. ಖರ್ಚೂ ಮಾಡ್ತಾರೆ. ಹೀಗಿದ್ದರೂ ಕನ್ನಡ ಸಿನಿಮಾಗಳಿಗೆ ಅಲ್ಲಿ ಶೋ ಸಿಕ್ಕಲ್ಲ. ಅವರದ್ದೆ ಭಾಷೆಗೆ ಡಬ್ ಆದರೂ ಶೋ ಕೊಡಲ್ಲ.
ಆದರೆ ಅವರು ಇಲ್ಲಿಗೆ ಬಂದಾಗ ಮಾತ್ರ ಅವರದ್ದೇ ಭಾಷೆಯಲ್ಲಿ ಸಿನಿಮಾ ತೋರಿಸ್ತಾರೆ. ಕನ್ನಡಕ್ಕೆ ಡಬ್ ಮಾಡಿದರೂ ಜಾಸ್ತಿ ಸ್ಕ್ರೀನ್ ಕೊಡಲ್ಲ. ಇಲ್ಲಿ ನಾಮಕಾವಸ್ತೆ ಪ್ರಚಾರವನ್ನೂ ಮಾಡಲ್ಲ. ಈಗ ರಿಲೀಸ್ ಆಗಿರೋ ಪುಷ್ಪ-2 ಚಿತ್ರತಂಡ ಪ್ರಚಾರಕ್ಕೇ ಬಂದಿಲ್ಲ. ಸಿನಿಮಾ ರಿಲೀಸ್ ಆಗಿದೆ. ಇಲ್ಲಿನ ಕನ್ನಡಿಗರೇ ಗೆಲ್ಲಿಸಿದ್ದಾರೆ.
ಅಷ್ಟೇ ಅಲ್ಲ, ಈ ಚಿತ್ರಕ್ಕಾಗಿ ಈಗಾಗಲೇ ಕೆಲವು ಬಲಿಗಳೂ ಆಗಿವೆ. ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಸಾವು ಬದುಕಿನ ಹೊಯ್ದಾಡುತ್ತಿದ್ಧಾರೆ. ಅಲ್ಲಿ ಅರ್ಜುನ್, ಪೊಲೀಸರಿಗೆ ಮಾಹಿತಿ ನೀಡದೆಯೇ ಥಿಯೇಟರಿಗೆ ಬಂದು ಅನಾಹುತ ಸೃಷ್ಟಿಸಿದ್ದಾರೆ ಅಲ್ಲು ಅರ್ಜುನ್.