ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಅವರಷ್ಟೇ ಅಲ್ಲದೆ, ಒಟ್ಟು 17 ಮಂದಿಯನ್ನು ಅರೆಸ್ಟ್ ಮಾಡಲಾಗಿತ್ತು. ಘಟನೆಯಲ್ಲಿ ಸದ್ಯಕ್ಕೆ ೫ ಮಂದಿಗೆ ಜಾಮೀನು ಸಿಕ್ಕಿದೆ. ದರ್ಶನ್ ಅವರ ಮಧ್ಯಂತರ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ. 42 ದಿನಗಳ ಮಧ್ಯಂತರ ಜಾಮೀನಿನಲ್ಲಿ ಈಗಾಗಲೇ 25 ದಿನಗಳು ಕಳೆದಿವೆ. ಈ ನಡುವೆ ದರ್ಶನ್ ಅವರು ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದು, ಆ ಅರ್ಜಿಯ ವಿಚಾರಣೆಯೂ ಹೈಕೋರ್ಟಿನಲ್ಲಿ ನಡೆಯುತ್ತಿದೆ.
ಇದಕ್ಕೂ, ದರ್ಶನ್ ಅವರು ಈಗಾಗಲೇ ಪಡೆದಿರುವ 6 ವಾರಗಳ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಗೂ ಸಂಬಂಧ ಇಲ್ಲ. ಈ ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರ ವಾದ ಮುಕ್ತಾಯವಾಗಿದೆ. ಅಲ್ಲಿ ನಾಗೇಶ್ ಅವರ ವಾದ ಕೇಳಿದರೆ ಕೇಸಿನಲ್ಲಿ ಇಷ್ಟೊಂದು ಲೂಪ್ ಹೋಲ್ಸ್ ಇವೆಯಾ ಎನ್ನುವ ಪ್ರಶ್ನೆ ಉದ್ಭವವಾದರೆ ಆಶ್ಚರ್ಯವಿಲ್ಲ.
ಸಿವಿ ನಾಗೇಶ್ ಅವರ ವಾದದ ಪ್ರಕಾರ ದರ್ಶನ್ ಕೊಲೆಗಾರನಲ್ಲ. ಪೊಲೀಸರೇ ದರ್ಶನ್ ಅವರನ್ನು ಕೇಸಿನಲ್ಲಿ ಫಿಟ್ ಮಾಡಲು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ.
ಸಿವಿ ನಾಗೇಶ್ ಅವರ ವಾದದಲ್ಲಿ ಕೆಲವು ಪ್ರಮುಖ ಪ್ರಶ್ನೆಗಳನ್ನೆತ್ತಿದ್ದಾರೆ.
ರೇಣುಕಾಸ್ವಾಮಿ ಸಾವಿನ ಸಮಯ ಯಾವುದು..?
ರೇಣುಕಾಸ್ವಾಮಿಯ ಕೊಲೆ ಆದ ಮೇಲೆ ಅಪಾರ್ಟ್ಮೆಂಟ್ ಕಾವಲುಗಾರ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಇಲ್ಲಿ ಮೃತದೇಹದ ಮಹಜರು, ಪೋಸ್ಟ್ ಮಾರ್ಟಂ ವಿಳಂಬ ಮಾಡಲಾಗಿದೆ. 1.5X2.5 ಸೆಂ.ಮೀ. ಗಾಯ ಬಿಟ್ಟರೆ ಉಳಿದವು ರಕ್ತದ ಗಾಯಗಳಲ್ಲ. ಅಲ್ಲದೆ ಶವವನ್ನು ಜೂ.9ರಂದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಜೂ.10 ಮತ್ತು 11ರಂದು ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಶವಪರೀಕ್ಷೆ ವರದಿಯಲ್ಲಿ ರೇಣುಕಾಸ್ವಾಮಿ ಯಾವಾಗ ಸತ್ತಿದ್ದಾರೆ ಎಂದು ವೈದ್ಯರು ಹೇಳಿಲ್ಲ. ಮೃತದೇಹವನ್ನು ಫ್ರೀಜರಿನಲ್ಲಿಟ್ಟ ಕಾರಣಕ್ಕೆ ಸಾವಿನ ನಿಖರ ಸಮಯ ಸಿಕ್ಕಿಲ್ಲ. ಶವದ ಫೋಟೋ ಆಧಾರದಲ್ಲಿ ಸಾವಿನ ಸಮಯ ಅಂದಾಜಿಸಲಾಗಿದೆ. ಈ ಶವಪರೀಕ್ಷೆ ವರದಿಯೂ ಒಂದು ತಿಂಗಳು ವಿಳಂಬವಾಗಿ ಬಂದಿದೆ ಎಂದು ವಾದಿಸಿದ್ದಾರೆ.
ಕಿಡ್ನಾಪ್ ಆಗಿಲ್ಲ
ಮೃತನ ತಂದೆಯ ಹೇಳಿಕೆಯ ಪ್ರಕಾರ ಜೂ.8ರಂದು ರೇಣುಕಾಸ್ವಾಮಿ ಎಂದಿನಂತೆ ಕೆಲಸಕ್ಕೆ ಹೋಗಿದ್ದಾನೆ. ಹಳೆಯ ನಾಲ್ವರು ಸ್ನೇಹಿತರೊಂದಿಗೆ ಹೋಗುತ್ತೇನೆಂದು ತಾಯಿ ಬಳಿ ಹೇಳಿದ್ದಾನೆ. ಯೂನಿಫಾರ್ಮ್ ಧರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲ ಎಂದ ಫೋನ್ ಮಾಡಿ ಹೇಳಿದ್ದಾನೆ. ಇದನ್ನು ಕಿಡ್ನ್ಯಾಪ್ ಎಂದು ಹೇಳಲು ಸಾಧ್ಯವಿಲ್ಲ.
ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗುವಾಗ ಬಾರ್ಗೆ ಹೋಗಿ, ಅಲ್ಲಿ ಫೋನ್ ಪೇ ಮೂಲಕ ಬಿಲ್ ಪಾವತಿ ಮಾಡಿದ್ದಾನೆ. ಕಿಡ್ನಾಪ್ ಆದವನು 640 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಹಣ ನೀಡಲು ಸಾಧ್ಯವೇ..?
ಕೊಲೆಯ ಉದ್ದೇಶದಿಂದ ಕಿಡ್ನಾಪ್ ಆಗಿಲ್ಲ :
ಕೊಲೆಯಾಗಿದೆಯೋ ಇಲ್ಲವೋ ಬೇರೆ ವಿಚಾರ. ಆದರೆ ಕೊಲೆಯ ಉದ್ದೇಶದಿಂದ ಕಿಡ್ನ್ಯಾಪ್ ಆಗಿಲ್ಲ. ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸಾಕ್ಷ್ಯನಾಶವಲ್ಲ. ಮೃತದೇಹವನ್ನು ಸುಟ್ಟುಹಾಕಿದ್ದರೆ ಸಾಕ್ಷ್ಯನಾಶ ಪರಿಗಣಿಸಬಹುದಿತ್ತು. ಆದರೆ ಆ ರೀತಿ ಆಗಿಲ್ಲ, ಕೇವಲ ಮೃತದೇಹ ಸ್ಥಳಾಂತರಿಸಲಾಗಿದೆ.
ರೇಣುಕಾಸ್ವಾಮಿ ಏನು ರಾಷ್ಟ್ರೀಯ ನಾಯಕನೇ..?
ನಮ್ಮ ಸಮಾಜದಲ್ಲಿ ದೇವತೆಯರನ್ನು ಸರಸ್ವತಿ, ಅನ್ನಪೂರ್ಣೇಶ್ವರಿ ಎನ್ನುತ್ತೇವೆ. ಆದರೆ, ಮೃತ ರೇಣುಕಾಸ್ವಾಮಿ ಪವಿತ್ರಾಗೌಡ ಅವರನ್ನು ಮಂಚಕ್ಕೆ ಕರೆದು, ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಾರೆ. ರೇಣುಕಾಸ್ವಾಮಿಯ ನಡತೆ, ವ್ಯಕ್ತಿತ್ವವನ್ನು ನೋಡದೆ ಆತನನ್ನು ರಾಷ್ಟ್ರೀಯ ನಾಯಕ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ದರ್ಶನ್ ಅವರನ್ನು ವಿಲನ್ ಆಗಿ ಚಿತ್ರಿಸಲಾಗುತ್ತಿದೆ. ಗೌತಮ್ ಹೆಸರಿನಲ್ಲಿ ರೇಣುಕಾಸ್ವಾಮಿ ಪವಿತ್ರಾಗೌಡಗೆ ಕಳುಹಿಸಿರುವ ಸಂದೇಶ ನೋಡಿದರೆ ಆತನ ವ್ಯಕ್ತಿತ್ವ ಎಂತದ್ದು ಎಂದು ಅರ್ಥವಾಗುತ್ತದೆ.
ರಕ್ತದ ಕಲೆ ಪೊಲೀಸರೇ ಸೃಷ್ಟಿಸಿದ್ದಾರೆ
ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗೆ ಘಟನಾ ಸ್ಥಳದ ಬಗ್ಗೆ ಜೂ.9ರಂದೇ ತಿಳಿದಿತ್ತು. ಆದರೆ, ಜೂ.9, 10 ಮತ್ತು 11ರಂದು ಯಾವುದನ್ನೂ ವಶಕ್ಕೆ ಪಡೆ ಯದೆ, ಜೂ.12ರಂದು ಕೊಲೆಗೆ ಬಳಸಲಾಗಿದೆ ಎನ್ನಲಾದ ಹಗ್ಗ, ಎರಡು ಅಡಿ ಉದ್ದದ ಲಾಟಿ, ಮರದ ಕೊಂಬೆಯನ್ನು ಜಪ್ತಿ ಮಾಡಿದ್ದಾರೆ. ಅಂದರೆ ಪಂಚನಾಮೆಯನ್ನು ವಿಳಂಬವಾಗಿ ಮಾಡಿದ್ದು, ಆ ನಡೆ ಒಪ್ಪತಕ್ಕ ದ್ದಲ್ಲ.
ದರ್ಶನ್ ಅವರಿಂದ 37.40 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದು, ಅದನ್ನು ಸಾಕ್ಷ್ಯ ನಾಶಕ್ಕೆ ಸಂಗ್ರಹಿಸಿದ್ದರು ಎಂದು ಕತೆ ಹೆಣೆಯಲಾಗಿದೆ. ಮಾರ್ಚ್‌ನಲ್ಲಿ ದರ್ಶನ್ ರಿಂದ ಪಡೆದಿದ್ದ ಹಣವನ್ನು ಅವರ ಗೆಳೆಯ ಹಿಂದಿರುಗಿಸಿದ್ದರು ಅಷ್ಟೆ. ಪ್ರಕರಣ ಒಟ್ಟು 17 ಮಂದಿಯಲ್ಲಿ 5 ಮಂದಿಗೆ ಜಾಮೀನಾಗಿದೆ. ಇದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದವನಿಗೂ ಜಾಮೀನು ಸಿಕ್ಕಿದೆ.
ಇದು ಸಿವಿ ನಾಗೇಶ್ ಅವರ ವಾದದ ಪ್ರಮುಖ ಅಂಶಗಳು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ,ಆರ್.ನಾಗರಾಜು, ಎಂ. ಲಕ್ಷ್ಮಣ್, ಅನುಕುಮಾರ್, ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ನವೆಂಬರ್ ೨೮ಕ್ಕೆ ಮುಂದೂಡಿದೆ. ಅಂದಹಾಗೆ ಪ್ರಸನ್ನ ಕುಮಾರ್ ಅವರ ವಾದ ಇನ್ನೂ ಶುರುವಾಗಿಲ್ಲ.