ಹೆಚ್.ಡಿ.ರೇವಣ್ಣ. ಕುಮಾರಸ್ವಾಮಿಯವರಿಗೆ ಅಣ್ಣ. ಹಾಸನದ ಹೊಳೆನರಸೀಪುರದ ಎಂಎಲ್‌ಎ. ಒಂದು ಕಾಲಕ್ಕೆ ರೇವಣ್ಣ ಹೇಳಿದವರೇ ಹಾಸನದಲ್ಲಿ ಗೆಲುತ್ತಿದ್ದರು. ದೇವೇಗೌಡರ ಮಗನಾದ ಕಾರಣ ಪಕ್ಷದಲ್ಲಿಯೂ ಅವರಿಗೆ ಹಿಡಿತವಿತ್ತು. ತಮ್ಮ ಸಿಎಂ ಆದಾಗ.. ತಮ್ಮನಾದರೂ ಕುಮಾರಸ್ವಾಮಿ ಅವರನ್ನು ನಮ್ಮ ನಾಯಕರು, ನಮ್ಮ ಅಧ್ಯಕ್ಷರು, ನಮ್ಮ ಮುಖ್ಯಮಂತ್ರಿಗಳು.. ಎಂದೇ ಗೌರವ ಕೊಡುತ್ತಿದ್ದ ರೇವಣ್ಣ, ಈಗ ಪಕ್ಷದಿಂದ ಹೊರ ನಿಲ್ಲಬೇಕಾಗಿದೆ. ಅವರಷ್ಟೇ ಅಲ್ಲ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರನ್ನೂ ಪಕ್ಷದಿಂದ ಒಂದು ಹಂತಕ್ಕೆ ಆಚೆ ಇಟ್ಟಿದ್ದಾರೆ ಕುಮಾರಸ್ವಾಮಿ.
ಚನ್ನಪಟ್ಟಣ ಉಪ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ನಿಂದ ಸ್ಪರ್ಧೆ ಮಾಡುತ್ತಿದ್ದು ಈ ಸಂಬಂಧ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಹೆಸರನ್ನು ಕೈ ಬಿಡಲಾಗಿದೆ. ಜೆಡಿಎಸ್ ಸ್ಟಾರ್ ಕ್ಯಾಂಪೇನರ್ಗಳ ಪಟ್ಟಿಯಲ್ಲಿ ಶಾಸಕರು, ಮಾಜಿ ಶಾಸಕರು, ಮಾಜಿ, ಹಾಲಿ ಸಂಸದರು, ಹಿರಿಯ ನಾಯಕರು, ಮಾಜಿ, ಹಾಲಿ ಎಂಎಲ್ಸಿಗಳು ಸೇರಿ ಒಟ್ಟು 40 ಪ್ರಚಾರಕರು ಹೆಸರು ಇದೆ. ಆದರೆ ಪಕ್ಷದ ಹಿರಿಯ ನಾಯಕ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರ ಹೆಸರು ಪಟ್ಟಿಯಲ್ಲಿ ಇಲ್ಲ.
ರೇವಣ್ಣ ಬಂದರೆ ಪ್ರಜ್ವಲ್ ಹಗರಣ ಚರ್ಚೆಯಾಗುವ ಭಯ : ಹೌದು, ಹೆಚ್ ಡಿ ರೇವಣ್ಣ ಅವರೇನಾದರೂ ಪ್ರಚಾರಕ್ಕೆ ಹೋದರೆ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹಾಗೂ ರೇವಣ್ಣ ಅವರ ವಿರುದ್ಧ ಇರುವ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳ ಸದ್ದು ಜೋರಾಗಲಿದೆ. ಹೀಗಾಗಿ ರೇವಣ್ಣ ಅವರ ಇಡೀ ಕುಟುಂಬವನ್ನೇ ಪ್ರಚಾರ ಪಟ್ಟಯಿಂದ ಹೊರಗಿಟ್ಟಿದ್ದಾರೆ ಎನ್ನಲಾಗಿದೆ.
ಜಿಟಿಡಿ ಕೈಬಿಟ್ಟಿದ್ದೇಕೆ..?
ಜೆಡಿಎಸ್ನಲ್ಲಿ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗದಿದ್ದಕ್ಕೆ ಜಿ.ಟಿ ದೇವೇಗೌಡ ಅವರು ಬೇಸರಗೊಂಡಿದ್ದರು. ಅಲ್ಲದೇ ಇತ್ತೀಚಿನ ಮೈಸೂರು ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ್ದರು. ಇದೇ ವೇಳೆ ಮೈಸೂರು ದಸರಾದಲ್ಲಿ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಎಚ್.ಡಿ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ಆಗಿದೆ ಅವರು ರಾಜೀನಾಮೆ ನೀಡುತ್ತಾರಾ ಎಂದು ಸಮಾರಂಭದಲ್ಲಿ ವಾಗ್ದಾಳಿ ನಡೆಸಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಜಿಟಿಡಿ ಕುಮಾರಸ್ವಾಮಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕಾರಣಗಳಿಂದ ಜೆಡಿಎಸ್ನ ಸ್ಟಾರ್ ಕ್ಯಾಂಪೇನರ್ ಪಟ್ಟಿಯಿಂದ ಜಿ.ಟಿ ದೇವೇಗೌಡರನ್ನ ಕೈಬಿಡಲಾಗಿದೆ ಎನ್ನಲಾಗಿದೆ. ಅಲ್ಲದೆ ಬಹಿರಂಗವಾಗಿಯೇ ನಾನು ಜೆಡಿಎಸ್ ಬಿಡಲು ಮುಂದಾಗಿದ್ದೆ. ಆದರೆ ದೇವೇಗೌಡರು ಕೇಳಿಕೊಂಡ ಹಿನ್ನೆಲೆಯಲ್ಲಿ ಪಕ್ಷದಲ್ಲಿಯೇ ಉಳಿದುಕೊಂಡೆ ಎಂದು ಹೇಳಿದ್ದರು. ಇದು ಕುಮಾರಸ್ವಾಮಿ ಅವರ ಸಿಟ್ಟಿಗೆ ಕಾರಣವಾಗಿತ್ತು. ಅಲ್ಲದೆ ನಿಖಿಲ್ ಅವರನ್ನು ಪ್ರಮೋಟ್ ಮಾಡುತ್ತಿರುವ ಕುಮಾರಸ್ವಾಮಿ ಅವರು, ಬಿಜೆಪಿಯ ಉನ್ನತ ನಾಯಕರ ಜೊತೆ ಮಾತುಕತೆಗೆ ಹೋದಾಗಲೆಲ್ಲ ನಿಖಿಲ್ ಜೊತೆಯಲ್ಲಿರುತ್ತಿದ್ದರೇ ಹೊರತು, ಅಲ್ಲಿಯೇ ಇದ್ದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದ ಜಿಟಿಡಿ ಇರುತ್ತಿರಲಿಲ್ಲ. ಕನಿಷ್ಠ ಒಂದು ಚುನಾವಣೆಯನ್ನೂ ಗೆಲ್ಲದ ನಿಖಿಲ್ ಎದುರು, ತಾನು ಕೈಕಟ್ಟಿ ನಿಲ್ಲಬೇಕಾಯ್ತು ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಈ ಎಲ್ಲ ಕಾರಣಗಳೂ ಜಿಟಿಡಿ ಅವರನ್ನು ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಹೊರಗುಳಿಯಲು ಕಾರಣವಾಯ್ತು ಎಂದೇ ಹೇಳಲಾಗುತ್ತಿದೆ.