ನಾವೀಗ ಕಂಪ್ಲೀಟ್ ಡಿಜಿಟಲ್ ಆಗಿದ್ದೇವೆ. ಆದರೇನು.. ಭಯ ಮಾತ್ರ ಹೋಗಿಲ್ಲ. ದೇವರ ಭಯವಷ್ಟೇ ಅಲ್ಲ, ದೆವ್ವಗಳ ಭಯವೂ ಇದೆ. ಅದೇನೇ ದೈವಭಕ್ತರಾದರೂ ವಾಮಾಚಾರ, ಮಾಟ ಮಂತ್ರ ಎಂದರೆ ಇವತ್ತಿಗೂ ಹೆದರುವವರಿದ್ದಾರೆ. ಎಲ್ಲ ಧರ್ಮಗಳಲ್ಲೂ ಇದ್ದಾರೆ. ಮಾಟ ಮಂತ್ರ ವಾಮಾಚಾರ ಬ್ಲಾಕ್ ಮ್ಯಾಜಿಕ್ ಕ್ಷುದ್ರವಿದ್ಯೆ.. ಇವುಗಳೆಲ್ಲ ಸರ್ವಧರ್ಮಗಳಲ್ಲೂ ಇವೆ. ಇಂದಿಗೂ ಕೆಲವರು ಚಾಡಿ-ಮೋಡಿ, ಮಾಟ-ಮಂತ್ರಗಳನ್ನು ನಂಬುತ್ತಾರೆ. ತಮ್ಮ ಏಳಿಗೆ ತಡೆಯೋದಕ್ಕೆ ಯಾರೋ ಮಾಟ ಮಾಡುಸ್ ಬುಟ್ಟವ್ರೆ ಅನ್ನೋದನ್ನ ನಂಬ್ತಾರೆ.
ಸಾಮಾನ್ಯವಾಗಿ ಅಂತಹ ಮಾತುಗಳು ಕೇಳಿ ಬಂದಾಗಲೆಲ್ಲ ಕುಲದೇವತೆಗೆ, ಮನೆ ದೇವರಿಗೆ ಹರಕೆ ಹೊತ್ತುಕೊಂಡರೆ ಎಲ್ಲವೂ ಸರಿಯಾಗುತ್ತೆ ಅಂತಾರೆ. ವಿಶೇಷ ದಿನಗಳಲ್ಲಿ ಮಾಡಿಕೊಳ್ಳುವ ಹರಕೆಗೆ ವಿಶೇಷ ಫಲವೂ ಇದೆ. ಸುರಕ್ಷಣಾ ಕವಚವೂ ಇದೆ. ಅಂತಹ ವಿಶೇಷ ಸಂದರ್ಭ ಈ ಬಾರಿಯ ದೀಪಾವಳಿ. ಹಣ ಖರ್ಚು ಮಾಡುವ ಪೂಜೆಗಳೂ ಇವೆ. ಹಣ ಖರ್ಚಿಲ್ಲದೆ ನಮಗೆ ನಾವೇ ಮಾಡಿಕೊಳ್ಳುವ ತಡೆ ಸೂತ್ರಗಳೂ ಇವೆ.
ಈ ವರ್ಷದ ದೀಪಾವಳಿ ಶುರುವಾಗುವುದು ಅಕ್ಟೋಬರ್ 31ಕ್ಕೆ. ಅದಾದ ಮರುದಿನ ಅಮಾವಾಸ್ಯೆ. ಅದು ಮುಗಿದ ಮೇಲೆ ಬರುವುದೇ ಬಲಿಪಾಡ್ಯಮಿ. ಹೀಗಾಗಿ ಈ ವಿಶೇಷ ದಿನದಲ್ಲಿ ಮಾಟ, ಮಂತ್ರ, ವಾಮಾಚಾರಗಳಿಗೆ ತಿರುಗೇಟು ನೀಡುವ, ತಡೆ ಮಾಡುವ ಪ್ರಶಸ್ತ ಸಮಯ ಈಗ ಬಂದಿದೆ. ಏಕೆಂದರೆ ನವೆಂಬರ್ 1ರಂದು ಅಮಾವಾಸ್ಯೆ. ಅದು ಲಕ್ಷ್ಮಿಯ ದಿನವೂ ಹೌದು. ಹೀಗಾಗಿ ಆ ದಿನ ತಡೆ ಮಾಡಿದರೆ, ಅತ್ತ ತಡೆಯೂ, ಇತ್ತ ಲಕ್ಷ್ಮಿಯ ಕೃಪೆಯೂ ಆಗುತ್ತದೆ ಎನ್ನವುದು ನಂಬಿಕೆ.
ಮಾಟ ಮಂತ್ರ ತಡೆಯುವ ಸೂತ್ರಗಳೇನು..?
ಶುದ್ಧವಾಗಿ ಮಡಿ ಉಟ್ಟು, ಸಮೀಪದ ಆಂಜನೇಯನ ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿ. ಗೊತ್ತಿದ್ದರೆ ಹನುಮಾನ್ ಚಾಲೀಸಾ ಮಂತ್ರ ಪಠಣ ಮಾಡಿ. ನಂತರ ಆಂಜನೇಯನಿಗೆ ಬೆಲ್ಲ ಅರ್ಪಿಸಿ, ಪ್ರತಿ ಮಂಗಳವಾರ ಅಥವಾ ಶನಿವಾರ ತುಪ್ಪದಿಂದ ದೀಪ ಹಚ್ಚಿ. ಅದರಲ್ಲೂ ವಿಶೇಷ ಈ ದೀಪಾವಳಿ ಅಮಾವಾಸ್ಯೆಯ ದಿನ ಮರೆಯದೆ ದೀಪ ಹಚ್ಚಿ.
ಗೋವಿನ ಸಗಣಿಗೆ ಸ್ವಲ್ಪ ನೀರು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಇದರ ಮೇಲೆ ನಾಣ್ಯ ಏರಿಸಿ, ಕುಂಕುಮವನ್ನು ಏಳು ಬಾರಿ ಹಚ್ಚಿ. ನಂತರ ಅದನ್ನು ಏಳು ಬಾರಿ ಎತ್ತಿ ಹಿಡಿದು ನೀವಾಳಿಸಿಕೊಂಡು ರಸ್ತೆಯಲ್ಲಿಟ್ಟು ಹಿಂದಿರುಗಿ ನೋಡದೇ ಮನೆಗೆ ಹೋಗಿ. ಮನೆಯೊಳಗೆ ಹೋಗುವಾದ ಕೈ ಕಾಲು ಮುಖ ತೊಳೆದುಕೊಂಡು ನೇರವಾಗಿ ದೇವರ ಫೋಟೋ/ವಿಗ್ರಹಕ್ಕೆ ನಮಸ್ಕರಿಸಿ ದೀಪ ಹಚ್ಚಿ ಪೂಜೆ ಮಾಡಿ.
ಇನ್ನು ಹತ್ತಿರದಲ್ಲಿರುವ ದೇವಿಯ ದೇವಸ್ಥಾನಕ್ಕೆ ಭೇಟಿ ಕೊಡಿ. ಅದು ಶಕ್ತಿದೇವತೆಯಾಗಿದ್ದರೆ ಒಳ್ಳೆಯದು. ಪ್ರತ್ಯಂಗಿರ ದೇವಿಯಾಗಿದ್ದರಂತೂ ಇನ್ನೂ ಒಳ್ಳೆಯದು. ಅಮಾವಾಸ್ಯೆಯ ದಿನ ಪ್ರತ್ಯಂಗಿರ ದೇವಿಗೆ ಒಣಮೆಣಸಿನಕಾಯಿ ಸುಟ್ಟರೆ ಮಾಟ, ಮಂತ್ರ, ದೃಷ್ಟಿದೋಷ, ವಾಮಾಚಾರ, ಪ್ರೇತಾತ್ಮ ಭಾದೆಯಂತಹ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಬೆನ್ನಲ್ಲೇ ಲಕ್ಷ್ಮೀ ಪೂಜೆಯೂ ಇರುವುದರಿಂದ ದುಷ್ಟ ಶಕ್ತಿ ತೊಲಗುತ್ತಾಳೆ. ಲಕ್ಷ್ಮೀ ನೆಲೆಸುತ್ತಾಳೆ ಎನ್ನುವುದು ನಂಬಿಕೆ.
ಇವುಗಳನ್ನು ಬಿಟ್ಟರೆ ವಿಶೇಷ ಮಾರ್ಗವೇನೂ ಇಲ್ಲ ಅಂತಾರೆ ಜ್ಯೋತಿಷಿಗಳು. ನಿಜವಾದ ಸಮಸ್ಯೆ ಏನೆಂದರೆ ಸಾತ್ವಿಕ ಪೂಜೆ, ವ್ರತ ಮಾಡುವವರು ಈ ಮಾಟ ಮಂತ್ರಗಳನ್ನೇ ನಂಬೋದಿಲ್ಲ. ಹೀಗಾಗಿ ಅವರು ದೇವರ ಪೂಜೆ ಮಾಡಿ, ಒಳ್ಳೆಯದಾಗುತ್ತೆ ಅಂತಾನೇ ಹೇಳ್ತಾರೆ. ಮಾಟ ಮಂತ್ರಕ್ಕೆ ಒಳಗಾದವರು ಕೇವಲ ಪೂಜೆಯನ್ನು ನಂಬುವುದಿಲ್ಲ. ಕ್ಷುದ್ರ ಶಕ್ತಿಯ ಪೂಜೆಯನ್ನೇ ನಂಬ್ತಾರೆ.
ಅಂದಹಾಗೆ ಮಾಟ ಮಂತ್ರದ ಏನೋ ಎಡವಟ್ಟಾಗಿದೆ ಎಂದು ಗುರುತಿಸುವುದು ಹೇಗೆ..?
ಮನಸ್ಸು ವಿಚಲಿತಗೊಳ್ಳುವುದು, ವಿನಾಕಾರಣ ಭಯ, ಆತಂಕ ಮನೆ ಮಾಡುವುದು, ಏಕಾಗ್ರತೆ ಇಲ್ಲದಂತಾಗುವುದು, ಮನೆ ಅಥವಾ ಕುಟುಂಬದಲ್ಲಿ ಪ್ರೀತಿ ಪಾತ್ರರ ಜೊತೆ ವಿನಾಕಾರಣ ಜಗಳವಾಗುತ್ತಿದ್ದರೆ, ಕೈಗೊಂಡ ಕೆಲಸಗಳು ಕೊನೆಯ ಹಂತಕ್ಕೆ ಬಂದು ಕೈಕೊಡುತ್ತಿದ್ದರೆ, ಕಾರಣವೇ ಇಲ್ಲದೆ ಪದೇ ಪದೇ ಆರೋಗ್ಯ ಕೈಕೊಡುತ್ತಿದ್ದರೆ.. ಮಾಟ ಮಂತ್ರ ಆಗಿದೆ ಎಂದು ನಂಬಬಹುದು. ಆದರೆ ಆರೋಗ್ಯದ ವಿಚಾರದಲ್ಲಿ ಒಮ್ಮೆ ವೈದ್ಯರನ್ನು ಕಾಣುವುದೇ ಒಳ್ಳೆಯ ಪರಿಹಾರ.
ಹಣ ಖರ್ಚು ಮಾಡುವ ಶಕ್ತಿ ಇಲ್ಲದವರು..
ಪೂಜೆ ಮಾಡಿಸುವಷ್ಟು ಅಥವಾ ಕವಚ ಯಂತ್ರ ಕೊಂಡುಕೊಳ್ಳುವಷ್ಟು ಹಣವಿಲ್ಲದೇ ಹೋದರೆ ನಿಮ್ಮ ಉದ್ದದಷ್ಟೇ ಉದ್ದದ ಕೆಂಪು ಹಾಗೂ ಹಳದಿ ಬಣ್ಣದ ದಾರ ಕತ್ತರಿಸಿ, ಅದನ್ನು ನಾಲ್ಕು ಸುತ್ತು ಮಡಚಿ, ಮಹಾಕಾಳಿ ಮಂತ್ರ ಅಥವಾ ದುರ್ಗಾ ಮಂತ್ರ ಹೇಳುತ್ತಾ 7 ಗಂಟುಗಳನ್ನು ಹಾಕಬೇಕು. ಬಳಿಕ ರಕ್ಷಣೆಗಾಗಿ ಮಹಾಕಾಳಿಯಲ್ಲಿ ಬೇಡಿಕೊಂಡು ಕೈಗೆ ಕಟ್ಟಿಕೊಳ್ಳಿ. ಇದು ನಿಮ್ಮನ್ನು ಕಾಪಾಡುತ್ತದೆ.