ಶ್ರೀರಾಮು ಮತ್ತು ಜನಾರ್ದನ ರೆಡ್ಡಿ ನಡುವೆ ಫೈಟು ಜೋರಾಗಿದೆ. ಬಿಜೆಪಿಯಲ್ಲಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಓಪನ್ ಫೈಟಿಗೆ ಇಳಿದಿದ್ದಾರೆ. ವಿಶೇಷ ಏನೆಂದರೆ ಶ್ರೀರಾಮುಲು ಅವರ ಮೇಲೆ ಬಿಜೆಪಿಯಲ್ಲೇ ಇರುವ ರಮೇಶ್ ಜಾರಕಿಹೊಳಿ, ವಿಜಯೇಂದ್ರ ಕಾರಣಕ್ಕೆ ಕಣ್ಣು ಇಟ್ಟಿದ್ದರೆ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಕಾರಣಕ್ಕೆ ಕಣ್ಣಿಟ್ಟಿದ್ದಾರೆ.
ರಾಮುಲು-ರೆಡ್ಡಿ ದೋಸ್ತಿಯ ಎಫೆಕ್ಟ್ ಹೇಗಿತ್ತೆಂದರೆ ಬಳ್ಳಾರಿಯಲ್ಲಿ ಅಕ್ಕಪಕ್ಕ ಮನೆ ಕಟ್ಟಿಸಿಕೊಂಡಿದ್ದ ರಾಮುಲು-ರೆಡ್ಡಿ ಮನೆಯ ಮಧ್ಯೆ ಓಡಾಡಲು ಸಂಪರ್ಕಕ್ಕೆ ಗೇಟ್ ಇತ್ತು. ಈಗ ವಾಸ್ತು ನೆಪ ಹೇಳಿ ಗೇಟ್ ಬಂದ್ ಮಾಡಿಸಿದ್ದಾರೆ ಶ್ರೀರಾಮುಲು.
ಸಿರಗುಪ್ಪ ಬಳಿ ಹವಂಭಾವಿಯಲ್ಲಿ ಸ್ನೇಹಿತರು ಬಂಗಲೆ ಕಟ್ಟಿಸಿಕೊಂಡಿದ್ದರು.ಆಗ ರೆಡ್ಡಿ-ರಾಮುಲು ಎರಡೂ ಮನೆಗಳ ನಡುವೆ ಕೇವಲ 50 ಮೀ. ಅಂತರವಿತ್ತು. ಎರಡೂ ಮನೆಗಳಿಗೆ ಕಾಂಪೌಂಡ್ ಇದ್ದರೂ, ಮಧ್ಯೆ ಒಂದು ಗೇಟ್ ಇತ್ತು. ಎರಡೂ ಕುಟುಂಬದವರು ಇದೇ ಗೇಟಿನಲ್ಲಿ ಮನೆ ಮನೆಗೆ ಓಡಾಡುತ್ತಿದ್ದರು. ಇತ್ತೀಚೆಗೆ ಗೇಟ್ ಇದ್ದರೂ, ರೆಡ್ಡಿ-ರಾಮುಲು ಮನೆಯವರ ಓಡಾಟ ನಿಂತಿತ್ತು. ಈಗ ಶಾಶ್ವತವಾಗಿ ಎರಡೂ ಮನೆಗಳ ನಡುವಿನ ಕಾಂಪೌಂಡ್ ಗೇಟ್ ಬಂದ್ ಆಗಿದೆ. ಸಿಮೆಂಟ್ ಹಾಕಿಸಿ ʻಎರಡೂ ಮನೆಯ ಕಾಂಪೌಂಡ್ʼ ಗೇಟ್ ಮುಚ್ಚಿಸಿದ ಶ್ರೀರಾಮುಲು.
ಆದರೆ ಚರ್ಚೆಯಾಗುತ್ತಿರುವ ಇನ್ನೊಂದು ಹೊಸ ವಿಷಯ ಏನೆಂದರೆ ಶ್ರೀರಾಮುಲು ಅವರಿಗೆ ಡಿಕೆ ಶಿವಕುಮಾರ್ ಆಹ್ವಾನ ಕೊಟ್ಟಿದ್ದಾರೆ ಎನ್ನುವುದು. ಹಾಗಂತ ಆರೋಪ ಮಾಡಿರೋದು ಇನ್ಯಾರೋ ಗೊತ್ತಿಲ್ಲದ ನಾಯಕರಲ್ಲ. ಸ್ವತಃ ಜನಾರ್ದನ ರೆಡ್ಡಿ. ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಲ್ಲಿ ಮಣಿಸಲು ಅದೇ ಸಮುದಾಯದ ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಡಿಕೆಶಿ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಬಾಂಧವ್ಯ ಸರಿ ಇಲ್ಲ. ಅದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಈ ಮೊದಲು ಕಾಂಗ್ರೆಸ್ಸಿನಲ್ಲಿ ಸತೀಶ್ ಅವರ ಅಣ್ಣ ರಮೇಶ್ ಜಾರಕಿಹೊಳಿ, ಡಿಕೆ ಎದುರು ತಿರುಗಿಬಿದ್ದು ಬಿಜೆಪಿ ಸೇರಿದ್ದರು. ಅದಾದ ಮೇಲೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ಸಿಗೆ ಹೋದರೂ ಬಿಡದೆ ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ ವಿರುದ್ಧ ಹಠ ಸಾಧಿಸಿದರು. ಇದೀಗ ಆ ಆಕ್ರೋಶ ಸತೀಶ್ ಜಾರಕಿಹೊಳಿ ವಿರುದ್ಧವೂ ತಿರುಗಿದೆ. ಈಗಾಗಲೇ ಲಕ್ಷ್ಮೀ ಹೆಬ್ಬಾಳ್ಕರ್ ವಿಷಯದಲ್ಲಿ ಡಿಕೆ ಮತ್ತು ಸತೀಶ್ ಮಧ್ಯೆ ಬಿರುಕು ಬಿಟ್ಟಿದೆ. ಹೀಗಾಗಿಯೇ ರಾಮುಲು ಕಾಂಗ್ರೆಸ್ ಸೇರ್ಪಡೆ ದೊಡ್ಡ ಸುದ್ದಿಯಾಗ್ತಿರೋದು.
ಏನಂದ್ರೆ, ಶ್ರೀರಾಮುಲು ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ. ಸತೀಶ್ ಜಾರಕಿಹೊಳಿ ಕೂಡ ವಾಲ್ಮೀಕಿ ಸಮುದಾಯದವರೇ. ರಾಮುಲು ಕಾಂಗ್ರೆಸ್ಸಿಗೆ ಬಂದರೆ ಸತೀಶ್ ಜಾರಕಿಹೊಳಿ ಪ್ರಾಬಲ್ಯ ಮುರಿಯಬಹುದು ಎಂಬ ಲೆಕ್ಕಾಚಾರದಲ್ಲಿ ಡಿಕೆ ಶಿವಕುಮಾರ್ ಇದ್ಧಾರೆ.
ಇತ್ತ ರಮೇಶ್ ಜಾರಕಿಹೊಳಿ ವಿಜಯೇಂದ್ರ ಕಾರಣಕ್ಕೆ ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಕೂಡಾ ವಾಲ್ಮೀಕಿ ಸಮುದಾಯದವರೇ ಆದರೂ, ರಾಜ್ಯ ಮಟ್ಟದಲ್ಲಿ ನಾಯಕರಾಗಿ ಗುರುತಿಸಿಕೊಂಡವರಲ್ಲ. ಬೆಳಗಾವಿ ಹೊರಗಡೆ ರಮೇಶ್ ಜಾರಕಿಹೊಳಿ ಅಪರಿಚಿತ ನಾಯಕ. ಇನ್ನು ಯತ್ನಾಳ್ ಬಣದಲ್ಲಿರುವ ನಾಯಕರಲ್ಲಿ ಯಾರೊಬ್ಬರೂ ಕೂಡಾ ತಮ್ಮ ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಜನಪ್ರಿಯತೆ ಇಟ್ಟುಕೊಂಡವರಲ್ಲ. ಹೀಗಾಗಿ ರಾಜ್ಯಾದ್ಯಂತ ಒಂದು ಲೆಕ್ಕದಲ್ಲಿ ಜನಪ್ರಿಯತೆ ಇರುವ ಶ್ರೀರಾಮುಲು, ತಮ್ಮ ಜೊತೆ ಬಂದರೆ ವಿಜಯೇಂದ್ರ ಅವರನ್ನು ಹಣಿಯಬಹುದು ಎಂಬ ಲೆಕ್ಕಾಚಾರ ರಮೇಶ್ ಜಾರಕಿಹೊಳಿಯದ್ದು. ಆಟ ಬೊಂಬಾಟ್ ಆಗಿದೆ.