ಡಾ. ಮಂಜುನಾಥ್ ಎಂದರೆ ಜಯದೇವ ಹೃದ್ರೋಗ ಆಸ್ಪತ್ರೆ. ಜಯದೇವ ಆಸ್ಪತ್ರೆ ಎಂದರೆ ಡಾ.ಮಂಜುನಾಥ್. 2006ರಲ್ಲಿ ಜಯದೇವ ಆಸ್ಪತ್ರೆಯ ಹೊಣೆ ಹೊತ್ತುಕೊಂಡ ಡಾ.ಮಂಜುನಾಥ್, ಅದನ್ನು ಕಟ್ಟಿದ ರೀತಿ ಅನನ್ಯ. ಇವತ್ತು ಇಡೀ ದೇಶದಲ್ಲಿ ಏನಾದರೂ ಕಡಿಮೆ ವೆಚ್ಚದಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಸಿಗುತ್ತಿದೆ ಎಂದಾದರೆ ಅದಕ್ಕೆ ಜಯದೇವ ಆಸ್ಪತ್ರೆ ಹಾಗೂ ಡಾ.ಮಂಜುನಾಥ್ ಕಾರಣ.
ಇಡೀ ಕರ್ನಾಟಕದಲ್ಲೇ ಆಂಜಿಯೋಗ್ರಾಂ ಆರಂಭಿಸಿದ್ದು ಡಾ.ಮಂಜುನಾಥ್. ಅದನ್ನು ಕಲಿಯಲೆಂದೇ ವಿಶ್ವಸಂಸ್ಥೆಯ ಯೋಜನೆಯಲ್ಲಿ ಕಲಿತು ಬಂದವರು ಡಾ.ಮಂಜುನಾಥ್. ಆದರೆ ಆಂಜಿಯೋಗ್ರಾಂ ಬಡವರಿಗೆ ದುಬಾರಿ ಎಂಬುದನ್ನು ಅರಿತ ಮಂಜುನಾಥ್, ಸ್ವಯಂ ಒಂದು ಮೆಥಡಾಲಜಿ ರೂಪಿಸಿದರು. ವೈಜ್ಞಾನಿಕವಾಗಿಯೇ ಹೊಸ ಸೂತ್ರವನ್ನು ಕಂಡು ಹಿಡಿದರು. ಅದು ಡಾಕ್ಟರ್ ಸರ್ಕಲ್ಲಿನಲ್ಲಿ ಡಾ.ಮಂಜುನಾಥ್ ಥಿಯರಿ ಎಂದೇ ಫೇಮಸ್.
ಅಂತಹ ಡಾ.ಮಂಜುನಾಥ್ ಮಾಜಿ ಪ್ರಧಾನಿ ದೇವೇಗೌಡರ ಅಳಿಯ. ನಾನು ಯಾವತ್ತಿಗೂ ಡಾ. ಮಂಜುನಾಥ್ ಅವರಿಗೆ ಹೆಣ್ಣು ಕೊಟ್ಟ ಮಾವ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳುತ್ತೇನೆ ಎನ್ನುವ ದೇವೇಗೌಡರಿಗೆ, ಅಳಿಯ ಎಂದರೆ ಅಚ್ಚುಮೆಚ್ಚು. ಅಳಿಯನ ವಿದಾಯ ವೇದಿಕೆಯಲ್ಲೂ ದೇವೇಗೌಡರು ಪತ್ನಿ ಸಮೇತರಾಗಿ ಬಂದು ಶುಭ ಹಾರೈಸಿದರು.
ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಜಯದೇವ ಹೃದ್ರೋಗ ಸಂಸ್ಥೆ ಬೆಳೆಯಲು ಶ್ರಮಿಸಿದ್ದ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಭಾರವಾದ ಹೃದಯದಿಂದ ಬೀಳ್ಕೊಡುಗೆ ನೀಡಿದರು. ನೂರಾರು ಸಿಬ್ಬಂದಿ ಆರತಿ ಬೆಳಗಿ, ಪುಷ್ಪವೃಷ್ಟಿ ಸುರಿಸಿ, ಹೂಗುಚ್ಛ ನೀಡಿದರು.
ನಾನು ನಿರ್ದೇಶಕನಾದಾಗ ಬಡವರ ಆರೋಗ್ಯ ನಿಧಿ ಕೇವಲ 5 ಲಕ್ಷ ಇತ್ತು ಈಗ 2150 ಕೋಟಿ ಆಗಿದೆ. ದೇಣಿಗೆಯ ಮೊತ್ತ ಕೂಡ 5 ಲಕ್ಷ ಇದ್ದದ್ದು, 250ಕೋಟಿ ಆಗಿದೆ. ಆಸ್ಪತ್ರೆ ಎಂದರೆ ಕೇವಲ ಕಟ್ಟಡ, ಉಪಕರಣ, ಚಿಕಿತ್ಸೆ ಇದ್ದರಷ್ಟೇ ಸಾಲದು, ಮಾನವೀಯತೆ, ಹೃದಯವಂತಿಕೆಯಿಂದ ಚಿಕಿತ ನೀಡುವ ಮನೋಭಾವ ಇರಬೇಕು ಎಂಬು ವಾತಾವರಣ ಇಲ್ಲಿ ನಿರ್ಮಿಸಲಾಗಿದೆ ಎಂದರು. ಜಯದೇವ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆಸ್ಪತ್ರೆ ಮಾಡುವ ಕನಸಿತ್ತು. ಆದರೆ, ಈ ಮಟ್ಟಕ್ಕೆ ಆಗುತ್ತದೆ ಎಂದು ನನಗೂ ಗೊತ್ತಿರಲಿಲ್ಲ. ನಮ್ಮ ಸೇವೆ, ಸಾಧನೆ ಬಗ್ಗೆ ಜನತೆ ಮಾತನಾಡುತ್ತಿದ್ದಾರೆ. ಇಡೀ ಏಷ್ಯಾದಲ್ಲೇ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಜಯದೇವ ಆಸ್ಪತ್ರೆ ಬೆಳೆದಿದೆ. ದಾನಿಗಳು ನಿರಂತರ ದೇಣಿಗೆ ನೀಡುತ್ತಿದ್ದಾರೆ. ಇಲ್ಲಿ ಹಣ ನೀಡಿದರೆ ಸದ್ವಿನಿಯೋಗ ಆಗುತ್ತದೆ ಎನ್ನುವುದು’ಖಾತರಿಯಾಗಿದೆ. ಹಾಗಾಗಿ ಕೊಡುತ್ತಿದ್ದಾರೆ. ಜನರಿಗೂ ಇಲ್ಲಿ ಕಡಿಮೆ ಬೆಲೆಗೆ ಚಿಕಿತ್ಸೆ ಸಿಗುತ್ತದೆ. ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ, ವಿನಾಯಿತಿ ಸಿಗುತ್ತದೆ ಎಂದು ಖಾತರಿಯಾಗಿದೆ. ಇದಕ್ಕೆ ಕಾರಣರಾದ ಎಲ್ಲ ಸಿಬ್ಬಂದಿಗೂ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲೂ ಜಯದೇವ ಅಭಿವೃದ್ಧಿ ಹೊಂದುತ್ತದೆ ಎನ್ನುವ ನಂಬಿಕೆ ಇದೆ. ನಿವೃತ್ತಿ ಬಳಿಕ ನಾನು ವೈದ್ಯನಾಗಿ ವೃತ್ತಿ ಮುಂದುವರೆಸುತ್ತೇನೆ ಎಂದರು ಡಾ.ಮಂಜುನಾಥ್.
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್ ಈ ವೇಳೆ ಮಾತನಾಡಿ, ಜಯದೇವ ಹೃದ್ರೋಗ ಆಸ್ಪತ್ರೆಯು ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಬೆಳೆಯಲು ಹಲವು ವರ್ಷಗಳಿಂದ ಈ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಡಾ| ಮಂಜುನಾಥ್ ಅವರ ಕೊಡುಗೆ ಅಪಾರವಾದುದು. ಇವರನ್ನೇ ಮುಂದುವರಿಸಲು ನಾನು ಸರ್ಕಾರಕ್ಕೆ ಮನವಿ ಮಾಡಿದ್ದೆ ಎಂದು ಎಂದು ಹೇಳಿದರು. ನಾನು ಒಬ್ಬ ಅಭಿಮಾನಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಇದು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲರಿಗೂ ನೋವಿನ ದಿನವಾಗಿದೆ. ಮಂಜುನಾಥ್ ಅವರ ಸೇವೆ ಮುಂದುವರೆಸುವುದು ಅಗತ್ಯ ಎಂದು ಸರ್ಕಾರಕ್ಕೆ ಹೇಳಿದ್ದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಬಳಿಯೂ ಚರ್ಚೆ ಮಾಡಿದ್ದೆ. ಆದರೆ ಎಲ್ಲದಕ್ಕೂ ಒಂದು ಆರಂಭ ಹಾಗೂ ಅಂತ್ಯ ಎಂದು ಇರುತ್ತದೆ. ಅದರನ್ವಯ ನಾವು ನಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ಡಾ| ಸಿ.ಎನ್. ಮಂಜುನಾಥ್ ಅವರು ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೇವಾ ಹಿರಿತನಪರಿಗಣಿಸಿಸಂಸ್ಥೆಯಹಿರಿಯ ವೈದ್ಯರನ್ನು ಉಸ್ತುವಾರಿವಾಗಿ ನೇಮಕ ಮಾಡಲಾಗುವುದು.