ವಿಧಿವಶರಾಗಿರುವ ಎಸ್ ಎಂ ಕೃಷ್ಣ ರಾಜಕೀಯದಲ್ಲಿದ್ದಷ್ಟೂ ದಿನ ಒಂದಲ್ಲ ಒಂದು ಅಧಿಕಾರದಲ್ಲಿದ್ದವರು. ಶಾಸಕ, ಸಂಸದ, ಸ್ಪೀಕರ್, ಡೆಪ್ಯುಟಿ ಸಿಎಂ, ಸಿಎಂ, ಗವರ್ನರ್, ವಿದೇಶಾಂಗ ಸಚಿವ… ಹೀಗೆ.. ಅಂತಹ ಎಸ್ ಎಂ ಕೃಷ್ಣ ಅವರು ಕರ್ನಾಟಕ ಮುಖ್ಯಮಂತ್ರಿ ಆಗಿದ್ರಲ್ಲ, ಆಗ ಅವರನ್ನ ಇನ್ನಿಲ್ಲದಂತೆ ವಿಲನ್ ಆಗಿ ಕಾಡಿದ್ದವನು ವೀರಪ್ಪನ್. ಸಿಎಂ ಆಗಿದ್ದೇ ಆಗಿದ್ದು, ಕೃಷ್ಣ ಅವರ ನೆಮ್ಮದಿಯನ್ನ ಕಿತ್ತುಕೊಂಡಿದ್ದವನು ಮಿಸ್ಟರ್ ನರಹಂತಕ, ದಂತಚೋರ, ಗಂಧದ ಕಳ್ಳ, ಗ್ಯಾಂಗ್ ಸ್ಟರ್ ವೀರಪ್ಪನ್.
ಸಿಎಂ ಆಗಿದ್ದ ನಾಲ್ಕೂವರೆ ವರ್ಷ ಅವಧಿಯಲ್ಲಿ ಇವತ್ತಿಗೂ ಜನ ನೆನಪು ಮಾಡ್ಕೊಳ್ಳೋದು ಡಾ.ರಾಜ್ ಪ್ರಕರಣವನ್ನ. ಅಫ್ಕೋರ್ಸ್ ಅದಕ್ಕೂ ಮೊದಲು ವೀರಪ್ಪನ್ ಪೊಲೀಸರನ್ನ ಕಿಡ್ನಾಪ್ ಮಾಡ್ತಿದ್ದ, ಕೊಲ್ತಿದ್ದ. ಆದರೆ ಡಾ.ರಾಜ್ ಕುಮಾರ್ ಪ್ರಕರಣವನ್ನ ಜನ ಮರೆಯೋ ಹಾಗೇ ಇಲ್ಲ. ಯಾಕಂದ್ರೆ 108 ದಿನಗಳ ಕಾಲ ರಾಜ್ ಕುಮಾರ್, ವೀರಪ್ಪನ್ ವಶದಲ್ಲಿದ್ದರು.
ಇಂತಹ ಎಸ್ ಎಂ ಕೃಷ್ಣ ಅವರನ್ನ ಅಧಿಕಾರ ಅವಧಿಯ ಉದ್ದಕ್ಕೂ ಕಾಡಿದ್ದು ಇಬ್ಬರೇ ವಿಲನ್ನುಗಳು. ಒಂದು ಬರ. ಮತ್ತೊಬ್ಬ ವೀರಪ್ಪನ್. ಎಸ್ ಎಂ ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಇಡೀ ಅವಧಿ ಕಾಟ ಕೊಟ್ಟಿದ್ದವನು ನರಹಂತಕ ದಂತಚೋರ ವೀರಪ್ಪನ್ ಎರಡು ದೊಡ್ಡ ಕಿಡ್ನಾಪ್ ಮಾಡಿದ್ದ. ಮೊದಲನೆಯದ್ದು ಡಾ.ರಾಜ್ ಕುಮಾರ್, ನಾಗಪ್ಪ, ನಾಗೇಶ್ ಕುಮಾರ್ ಅವರದ್ದು, ಮತ್ತೊಂದು ಹನೂರು ನಾಗಪ್ಪ ಅವರದ್ದು.
ಡಾ.ರಾಜ್ ಕುಮಾರ್ ಅವರನ್ನ ಕಿಡ್ನಾಪ್ ಮಾಡಿದ್ನಲ್ಲ, ಆಗ ಸಿಎಂ ಆಗಿದ್ದವರು ಇದೇ ಎಸ್ ಎಂ ಕೃಷ್ಣ. ಒಂದು ಕಡೆ ಪಾರ್ವತಮ್ಮ ರಾಜ್ ಕುಮಾರ್, ಮತ್ತವರ ಕುಟುಂಬವನ್ನ ನಿಭಾಯಿಸ್ತಾನೇ, ಮತ್ತೊಂದು ಕಡೆ ನೆಡುಮಾರನ್, ನಕ್ಕೀರನ್ ಗೋಪಾಲ್ ಅಂತಹವರನ್ನೆಲ್ಲ ನಿಭಾಯಿಸಿ ಬಿಡುಗಡೆ ಮಾಡಿಸಿದ್ದು ಎಸ್ ಎಂ ಕೃಷ್ಣ ಅವರಿಗೂ ಒಂದು ಸವಾಲಾಗಿತ್ತು.
ಅಭಿಮಾನಿಗಳು ಒಂದು ಕಡೆ ನಾವೇ ಬಿಡಿಸ್ಕೊಂಡು ಬರ್ತೀವಿ ಅಂತಾ ಕಾಡಿಗೇ ನುಗ್ಗೋಕೆ ಹೋಗ್ತಿದ್ರು. ಒಂದು ಕಡೆ ಅಭಿಮಾನಿಗಳ ಆ ಹುಂಬತನವನ್ನೂ ನಿಭಾಯಿಸಬೇಕಿತ್ತು. ಡಾ.ರಾಜ್ ಕಿಡ್ನಾಪ್ ಆದ ನಂತರ ಸುಮಾರು ಒಂದು ತಿಂಗಳು ಇಡೀ ಕರ್ನಾಟಕ ಸ್ತಬ್ಧವಾಗಿತ್ತು. ಚಿತ್ರರಂಗವಂತೂ ಏನೂ ಮಾಡದೆ ಕುಳಿತುಬಿಟ್ಟಿತ್ತು. ಕಾರಣ ಕಿಡ್ನಾಪ್ ಅಗಿದ್ದವರು ಡಾ.ರಾಜ್ ಕುಮಾರ್. ಎಸ್ ಎಂ ಕೃಷ್ಣ ಅವರಿಗೂ ಇಂತಹ ಪ್ರಕರಣ ಹೊಸದು. ಪೊಲೀಸರಿಗೂ ಹೊಸದು. ಕಿಡ್ನಾಪ್ ಆಗಿದ್ದ ವ್ಯಕ್ತಿ ಸಾಮಾನ್ಯನಲ್ಲ. ಕರ್ನಾಟಕ ರತ್ನ.
ಎಸ್ ಎಂ ಕೃಷ್ಣ ಅವರಿಗೆ ರಾಜಕೀಯವಾಗಿ ವಿರೋಧ ಏನೂ ಇರಲಿಲ್ಲ, ಏನು ಬೇಕಾದರೂ ಮಾಡಿ ಮುಖ್ಯಮಂತ್ರಿಗಳೇ, ನಿಮ್ಮ ಜೊತೆ ನಾವಿದ್ದೀವಿ ಎನ್ನುತ್ತಿದ್ದವರೆಲ್ಲ, ಕಾನೂನು ಪ್ರಕಾರವಾಗಿ ಇರಲಿ, ಅಷ್ಟೇ ಅನ್ನೋ ಸೇಫ್ ಮೋಡಿಗೆ ಜಾರ್ತಾ ಇದ್ರು. ಅಂತಹ ಸಂದರ್ಭದಲ್ಲಿ ಟೀಕೆಗಳಿಗೆ ಹೆದರದೆ, ಕೆಲವು ಕಾನೂನು ಮೀರಿದ ಹೆಜ್ಜೆ ಇಟ್ಟವರು ಎಸ್ ಎಂ ಕೃಷ್ಣ. ಡಾ.ರಾಜ್ ಬಿಡುಗಡೆಗಾಗಿ 300 ಕೋಟಿಗೂ ಹೆಚ್ಚು ದುಡ್ಡು ಕೊಟ್ಟಿದ್ದಾರೆ ಅನ್ನೋ ಕಥೆಗಳಿವೆಯಾದ್ರೂ, ಅದನ್ನ ಡಾ.ರಾಜ್ ಕುಟುಂಬ, ಎಸ್ ಎಂ ಕೃಷ್ಣ ಸೇರಿದಂತೆ ಯಾರೂ ಅದನ್ನ ಒಪ್ಪೋದಿಲ್ಲ.
೧೦೮ ದಿನಗಳ ನಂತರ ಡಾ.ರಾಜ್ ಕುಮಾರ್ ಅವರನ್ನು ವಾಪಸ್ ಕಳಿಸಿಕೊಟ್ಟಿದ್ದ ವೀರಪ್ಪನ್. ಈ ಹಾದಿಯಲ್ಲಿ ಒಂದು ಕಡೆ ನ್ಯಾಯಾಲಯಗಳ ಹದ್ದಿನ ಕಣ್ಣು, ಮತ್ತೊಂದು ಕಡೆ ಎಲ್‌ಟಿಟಿಈ ಜೊತೆ ಸಂಪರ್ಕ ಇರುವವರನ್ನೂ ಮಾತನಾಡಿಸಿ ಒಪ್ಪಿಸಬೇಕಾದ ಅನಿವಾರ್ಯತೆಗಳೆಲ್ಲವನ್ನೂ ಕೃಷ್ಣ ನಾಜೂಕಾಗಿ ನಿಭಾಯಿಸಿದ್ದರು.
ಡಾ.ರಾಜ್ ಪ್ರರಣವನ್ನೇನೋ ನಿಭಾಯಿಸಿದ್ದ ಎಸ್ ಎಂ ಕೃಷ್ಣ ಅವರಿಗೆ ಅದೇ ಅದೃಷ್ಟ ಹನೂರು ನಾಗಪ್ಪ ಕಿಡ್ನಾಪ್ ಆದಾಗ ಇರಲಿಲ್ಲ. ಬಂಡೆಯೊಂದರ ಹಿಂದೆ ಕತ್ತು ಕೊಯ್ದು ಹೋಗಿದ್ದ ವೀರಪ್ಪನ್, ಎಸ್ ಎಂ ಕೃಷ್ಣ ಅವರನ್ನ ಇನ್ನಿಲ್ಲದಂತೆ ಕಾಡಿಬಿಟ್ಟಿದ್ದ.