ಅಕ್ರಮ ಹಣ ವರ್ಗಾವಣೆ ಕೇಸ್ ತೆಲುಗು ನಟ ಮಹೇಶ್ ಬಾಬುಗೆ ಸಂಕಷ್ಟ ತಂದೊಡ್ಡಿದೆ. ಮನಿ ಲ್ಯಾಂಡರಿಂಗ್ ಪ್ರಕರಣದಲ್ಲಿ ತೆಲುಗು ಸ್ಟಾರ್ ನಟ ಮಹೇಶ್ ಬಾಬುಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೊಟೀಸ್ ಕೊಟ್ಟಿದೆ. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಏಪ್ರಿಲ್ 28 ರಂದು ವಿಚಾರಣೆಗೆ ಹಾಜರಾಗಿ ಎಂದು ನೊಟೀಸ್ ಕೊಟ್ಟಿದೆ.
ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ನಿಂದ ಜಾಹೀರಾತಿಗಾಗಿ ಮಹೇಶ್ ಬಾಬು ಒಟ್ಟು 5 ಕೋಟಿ 90 ಲಕ್ಷ ರೂಪಾಯಿ ಪಡೆದಿದ್ದಾರೆ. ಅದರಲ್ಲಿ ಮಹೇಶ್ ಬಾಬು 3.4 ಕೋಟಿ ರೂಪಾಯಿ ಚೆಕ್ ಮತ್ತು 2.5 ಕೋಟಿ ರೂಪಾಯಿ ನಗದು ಪಡೆದಿರುವುದು ಪತ್ತೆಯಾಗಿದೆ. ಸಾಯಿ ಸೂರ್ಯ ಡೆವಲಪರ್ ಎಂಡಿ ಸತೀಶ್ ಚಂದ್ರ ಮನೆಯಲ್ಲಿ ದೊರೆತ ದಾಖಲೆಯ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು.
ಮಹೇಶ್ ಬಾಬು ಅವರು 2.5 ಕೋಟಿ ನಗದು ಪಡೆದಿರುವುದು ಇಡಿ ನೊಟೀಸ್ ಕೊಡುವುದಕ್ಕೆ ಕಾರಣ. ಮಹೇಶ್ ಬಾಬು ಸಿನಿಮಾಗಳಲ್ಲಿ ಸಾಮಾನ್ಯವಾಗಿ ಒಂದಲ್ಲ ಒಂದು ಮೆಸೇಜ್ ಇರುತ್ತದೆ. ಸತ್ಯ, ನ್ಯಾಯ, ಪ್ರಾಮಾಣಿಕತೆ, ಶ್ರಮ, ಹೋರಾಟ.. ಹೀಗೆ ಒಂದೇ ಸಂದೇಶ ಇರುವ ಸಿನಿಮಾಗಳನ್ನೇ ಮಾಡ್ತಾರೆ. ಜಾಹೀರಾತುಗಳಲ್ಲಿ ನಟಿಸುವುದು ಓಕೆ, ಕಂಪೆನಿ ಎಷ್ಟು ಪ್ರಾಮಾಣಿಕ ಎನ್ನುವುದು ನಿಮಗೂ ಗೊತ್ತಿರಲ್ಲ. ಆದರೆ, ಸಂಭಾವನೆಯನ್ನು ಕ್ಯಾಷ್ ರೂಪದಲ್ಲಿ ಪಡೆದಿರೋದು ಯಾಕೆ..? ಇದು ಅವರದ್ದೇ ಸಿನಿಮಾ ನೋಡಿ, ಥ್ರಿಲ್ ಆಗಿ ಚಪ್ಪಾಳೆ ತಟ್ಟಿದ್ದ ಅಭಿಮಾನಿಗಳೇ ಕೇಳುತ್ತಿರುವ ಪ್ರಶ್ನೆ. ಏಕೆಂದರೆ ನಗದು ರೂಪದಲ್ಲಿ ಪಡೆದಿರುವುದು 2.5 ಕೋಟಿ ಎನ್ನಲಾಗುತ್ತಿದೆ. ಈ ವಿಚಾರಕ್ಕೇ ಇಡಿ ನೊಟೀಸ್ ಕೊಟ್ಟಿದೆ. ಏಪ್ರಿಲ್ 28 ರಂದು ಹೈದರಾಬಾದ್‌ನಲ್ಲಿರುವ ಇಡಿ ಕಚೇರಿಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದಾರೆ.