ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಏ.1ರಿಂದ ಅನ್ವಯವಾಗುವಂತೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆ ಮಾಡಿದೆ. ಸರಳವಾಗಿ ಹೇಳಬೇಕೆಂದರೆ ವಿದ್ಯುತ್ ದರ ಏರಿಕೆಯಾಗಿದೆ. ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ದರ, ನಿಗದಿತ ಶುಲ್ಕ ಹೆಚ್ಚಳವಾಗಿದೆ. ಇದೇ ವೇಳೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಶುಲ್ಕ ಕಡಿತದ ಯುಗಾದಿ ಕೊಡುಗೆಯನ್ನೂ ನೀಡಿದೆ. ಆದರೆ ಗೃಹಜ್ಯೋತಿ ವಿದ್ಯುತ್ ಬಳಕೆದಾರರಿಗೆ ಹೊರೆ ಇಲ್ಲ.
ಗೃಹಜ್ಯೋತಿಗೆ ರಿಲೀಫ್.. ಆದರೆ..
ಹೊಸ ಕೆಇಆರ್‌ಸಿ ಆದೇಶದ ಪರಿಣಾಮ ಏ.1ರಿಂದ ಗೃಹ ಬಳಕೆದಾರರು ಪ್ರತಿ ಯುನಿಟ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್‌ಗೆ ಬರೋಬ್ಬರಿ 25 ರೂ. ಹೆಚ್ಚು ಕಟ್ಟಬೇಕು. ಆದರೆ ಇದು ಗೃಹಜ್ಯೋತಿ ಯೋಜನೆಯಿಂದ ಹೊರಗೆ ಇರುವವರಿಗೆ ಮಾತ್ರ. ಗೃಹಜ್ಯೋತಿ ಯೋಜನೆಯಲ್ಲಿ ಶೂನ್ಯ ಬಿಲ್ ಪಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ವಿದ್ಯುತ್ ಶುಲ್ಕ ಸರ್ಕಾರವೇ ಭರಿಸುತ್ತದೆ. ಅವರಿಗೆ ಯಾವುದೇ ಹೊರೆ ಆಗುವುದಿಲ್ಲ.
ಆದರೆ ಗೃಹಜ್ಯೋತಿ ಫಲಾನುಭವಿಗಳಾಗಿ, ನಿಮಗೆ ಹೆಚ್ಚು ಎಲಿಜಿಬಿಲಿಟಿ ನೀಡಲಾಗಿದೆಯೋ.. ಅದಕ್ಕಿಂತ ಹೆಚ್ಚು ಬಳಸಿದರೆ..ಅಂದರೆ ಉಚಿತಕ್ಕಿಂತ ಹೆಚ್ಚು ಬಳಸಿದರೆ.. ಶಾಕ್ ಫಿಕ್ಸ್.
ವರ್ಷಕ್ಕೊಮ್ಮೆ ಶಾಕ್ ಫಿಕ್ಸ್..!
ಇನ್ನು ವಿದ್ಯುತ್ ಶುಲ್ಕ ಪರಿಷ್ಕರಣೆ ಆದೇಶ ಮೂರು ವರ್ಷಗಳಿಗೆ ಅನ್ವಯವಾಗುವಂತೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ 2026-27ನೇ ಸಾಲಿನಲ್ಲಿ ಯಾವುದೇ ದರ ಪರಿಷ್ಕರಣೆ ಸೂಚಿಸಿಲ್ಲ. ಆದರೂ ಪಿಂಚಣಿ ಹಾಗೂ ಗ್ರ್ಯಾಚುಯಿಟಿ ಹೊರೆ ಹೊರಿಸಿರುವುದರಿಂದ ಪ್ರತಿ ಯುನಿಟ್‌ಗೆ 35 ಪೈಸೆ ಹೆಚ್ಚಳ ಆಗಲಿದೆ. ಇನ್ನು 2027-28ನೇ ಸಾಲಿನಲ್ಲಿ 5 ಪೈಸೆ ಕಡಿಮೆ ಮಾಡುವುದಾಗಿ ಹೇಳಿದ್ದರೂ ಪಿಂಚಣಿ ಹಾಗೂ ಗ್ರ್ಯಾಚುಯಿಟಿ ಹೊರೆಯಿಂದಾಗಿ 29 ಪೈಸೆ ಪ್ರತಿ ಯುನಿಟ್‌ಗೆ ಹೆಚ್ಚಳ ಆಗಲಿದೆ.
ಇನ್ನು ನಿಗದಿತ ಶುಲ್ಕವೂ 2026-27ನೇ ಸಾಲಿಗೆ 150 ರು.ಗೆ, 2027-28ನೇ ಸಾಲಿಗೆ 160 ರು.ಗೆ ಹೆಚ್ಚಳ ಆಗಲಿದೆ. ಹೀಗಾಗಿ ನಿಗದಿತ ಶುಲ್ಕದ ಹೊರೆ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ.
100 ಯುನಿಟ್ ಬಳಸುತ್ತಿರುವ 3 ಕಿಲೋವ್ಯಾಟ್ ಗ್ರಾಹಕನಿಗೆ ಮಾಸಿಕ 101 ರೂ. ಹೆಚ್ಚುವರಿ ಹೊರೆ
3 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಹೊಂದಿದ್ದು, ಮಾಸಿಕ 100 ಯುನಿಟ್ ವಿದ್ಯುತ್ ಬಳಕೆ ಮಾಡುತ್ತಿರುವ ಗ್ರಾಹಕನಿಗೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿರುವುದರಿಂದ 36 ರು. ಹೊರೆಯಾಗಲಿದೆ. ಇದೀಗ 10 ಪೈಸೆ ಕಡಿಮೆ ಮಾಡಿರುವುದರಿಂದ 10 ರೂ. ಹೊರೆ ಕಡಿಮೆಯಾಗಲಿದೆ. 100 ಯುನಿಟ್‌ಗೆ 26 ರೂ. ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಇನ್ನು 3 ಕಿ.ವ್ಯಾಟ್‌ಗೆ ಪ್ರತಿ ಕಿಲೋ ವ್ಯಾಟ್‌ಗೆ ಮಾಸಿಕ 120 ರೂ.ಗಳಂತೆ 360 ರೂ. ನಿಗದಿತ ಶುಲ್ಕ ಪಾವತಿಸುತ್ತಿದ್ದ ಗ್ರಾಹಕ ಇದೀಗ ಪ್ರತಿ ಕಿ.ವ್ಯಾಟ್‌ಗೆ 145 ರೂ. ಗಳಂತೆ 435 ರೂ. ಪಾವತಿ ಮಾಡಬೇಕಾಗಿದ್ದು 75 ರೂ. ಹೊರೆ ತಗುಲಲಿದೆ. ಹೀಗಾಗಿ 26 ರೂ. ಹಾಗೂ 75 ರೂ. ಸೇರಿ 101 ರೂ. ಹೊರೆಯಾಗಲಿದೆ.
ಯಾರಿಗೆ ಎಷ್ಟು..?
ವಿದ್ಯುತ್ ಶುಲ್ಕ(ಪ್ರತಿ ಯುನಿಟ್)ನಿಗದಿತ ಶುಲ್ಕ(ಪ್ರತಿ ಕಿ.ವ್ಯಾಟ್, ಎಚ್‌ಪಿ ಅಥವಾ ಕೆವಿಎ)
ಗೃಹ ಬಳಕೆ 26 ಪೈಸೆ ಹೆಚ್ಚಳ
ನಿಗದಿತ ಶುಲ್ಕ(ಪ್ರತಿ ಕಿ.ವ್ಯಾಟ್ 25 ರೂ. ಹೆಚ್ಚಳ
ಎಲ್‌ಟಿ-ವಾಣಿಜ್ಯ ಬಳಕೆ : 64 ಪೈಸೆ ಕಡಿತ
ಎಲ್‌ಟಿ ವಾಣಿಜ್ಯ ಬಳಕೆ ನಿಗದಿತ ಶುಲ್ಕ : 5 ರೂ. ಹೆಚ್ಚಳ
ಎಲ್‌ಟಿ-5 ಕೈಗಾರಿಕೆ ಶುಲ್ಕ : 1.24 ರೂ. ಕಡಿತ
ಎಲ್‌ಟಿ-5 ಕೈಗಾರಿಕೆ ನಿಗದಿತ ಶುಲ್ಕ : 10 ರೂ. ಹೆಚ್ಚಳ
ಎಚ್‌ಟಿ-1 ಕೈಗಾರಿಕೆ ವಿದ್ಯುತ್ ಬಳಕೆ : 6 ಪೈಸೆ ಹೆಚ್ಚಳ
ಎಚ್‌ಟಿ-1 ಕೈಗಾರಿಕೆ ನಿಗದಿತ ಶುಲ್ಕ : 5 ರೂ. ಹೆಚ್ಚಳ
ಎಚ್‌ಟಿ-ವಾಣಿಜ್ಯ ವಿದ್ಯುತ್ : 1.75 ರೂ. ಕಡಿತ
ಎಚ್‌ಟಿ-ವಾಣಿಜ್ಯ ನಿಗದಿತ ಶುಲ್ಕ : 5 ರೂ. ಹೆಚ್ಚಳ