ಕಿಚ್ಚನ ಸಿನಿಮಾ 25ಕ್ಕೆ. ಉಪ್ಪಿ ಸಿನಿಮಾ 20ಕ್ಕೆ : ವರ್ಷದ ಕೊನೆಯಲ್ಲಿ ಪೈಪೋಟಿ..!
ಸ್ಟಾರ್ ಚಿತ್ರಗಳು ಬರುತ್ತಿಲ್ಲ.. ರಿಲೀಸ್ ಮಾಡ್ತಿಲ್ಲ ಎಂದು ಪ್ರೇಕ್ಷಕರು, ಚಿತ್ರಮಂದಿರದವರು ಕೂಗು ಹಾಕುವಾಗ ಬರದೇ ಇದ್ದ ಸ್ಟಾರ್ ಸಿನಿಮಾಗಳು ಈಗ ಪೈಪೋಟಿಗೆ ಬಿದ್ದು ಬರುತ್ತಿವೆ. ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ಕ್ಕೆ ರಿಲೀಸ್ ಆಗುತ್ತಿದೆ. ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಈಗಾಗಲೇ ಡಿಸೆಂಬರ್ 20ಕ್ಕೆ ಫಿಕ್ಸ್ ಆಗಿದೆ. ಬನ್ನಿ.. ಬನ್ನಿ.. ಎಂದು ಕೂಗುತ್ತಿದ್ದಾಗ ಸೈಲೆಂಟ್ ಆಗಿ ಇದ್ದವರು ಈಗ ಪೈಪೋಟಿಗೆ ಬಿದ್ದಿದ್ದಾರೆ.
ಶುಕ್ರವಾರ ‘ಯುಐ’ ಬಂದರೆ ಬುಧವಾರ ‘ಮ್ಯಾಕ್ಸ್’ ಮ್ಯಾಕ್ಸಿಮಮ್ ಕಿಕ್ ಸಿಗಲಿದೆ. 5 ದಿನಗಳ ಅಂತರದಲ್ಲಿ ಎರಡೂ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿರುವುದು ಲಾಭ ನಷ್ಟದ ಲೆಕ್ಕಾಚಾರದ ಚರ್ಚೆಗೆ ನಾಂದಿ ಹಾಡಲಿದೆ. ಜಿ. ಮನೋಹರನ್ ಜೊತೆ ಸೇರಿ ಕೆ. ಪಿ ಶ್ರೀಕಾಂತ್ ನಿರ್ಮಾಣದ ಯುಐ, ಕಲೈಪುಲಿ ಎಸ್ ಧಾನು ನಿರ್ಮಾಣದ ಮ್ಯಾಕ್ಸ್ ಒಂದಕ್ಕೊಂದು ಪೈಪೋಟಿ ಕೊಡಲಿವೆ. ಹಾಗಂತ ಇದು ಉಪೇಂದ್ರ ತಪ್ಪಲ್ಲ. ಅವರು ಈಗಾಗಲೇ ದಿನಾಂಕ ಮುಂದೂಡಿ, ಅದಾದ ಮೇಲೆ ತಿಂಗಳಿಗೂ ಮೊದಲೇ ರಿಲೀಸ್ ಡೇಟ್ ಫಿಕ್ಸ್ ಮಾಡಿ ಘೋಷಿಸಿದ್ದೂ ಆಗಿದೆ. ಇದು ಗೊತ್ತಿದ್ದೂ ೫ ದಿನಗಳ ಅಂತರದಲ್ಲಿ ಮ್ಯಾಕ್ಸ್ ರಿಲೀಸ್ ಆಗುತ್ತಿದೆ.
ಉಪೇಂದ್ರ ಬಹಳ ದಿನಗಳ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ‘ಯುಐ’ ಚಿತ್ರದಲ್ಲಿ ಹೊಸ ಪ್ರಪಂಚ ತೆರೆದಿಡಲು ಮುಂದಾಗಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿದೆ. ‘ಯುಐ’ ಚಿತ್ರ ಕೂಡ ಎರಡು ತಿಂಗಳ ಹಿಂದೆ ಬರಬೇಕಿತ್ತು. ಆದರೆ ಗ್ರಾಫಿಕ್ಸ್, ಪೋಸ್ಟ್ ಪ್ರೊಡಕ್ಷನ್ ತಡವಾಗಿತ್ತು. ಲೇಟ್ ಆದರೂ ಭರ್ಜರಿಯಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
ಈ ನಡುವೆ ಯುಐ ರಿಲೀಸ್ ಮುಂದಕ್ಕೆ ಹೋಗಲಿದೆ ಎಂಬ ಊಹಾಪೋಹಗಳನ್ನು ಕೆಪಿ ಶ್ರೀಕಾಂತ್ ತಳ್ಳಿ ಹಾಕಿದ್ದಾರೆ. ಯುಐ ಸಿನಿಮಾ ಪ್ರಚಾರದ ಸ್ಟಾಂಡಿಗಳು ಈಗಾಗಲೇ ಮಲ್ಟಿಪ್ಲೆಕ್ಸ್ʻಗಳಲ್ಲಿ ಸಿದ್ಧವಾಗಿವೆ. ಒಟ್ಟಿನಲ್ಲಿ ಡಿಸೆಂಬರ್ ಅಂತ್ಯಕ್ಕೆ ಇಬ್ಬರು ಸ್ಟಾರ್ ನಟರ ಚಿತ್ರಗಳು ಮುಖಾಮುಖಿಯಾಗಲಿವೆ.
ಆದರೆ ಅಚ್ಚರಿ ಹುಟ್ಟಿಸಿರೋದು ಮ್ಯಾಕ್ಸ್. ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರ ರಿಲೀಸ್ ಆಗುತ್ತವೆ. ಅಪರೂಪಕ್ಕೊಮ್ಮೆ ಗುರುವಾರವೂ ರಿಲೀಸ್ ಆಗುತ್ತವೆ. ಆದರೆ ಮ್ಯಾಕ್ಸ್ ಸಿನಿಮಾ ಬುಧವಾರವೇ ರಿಲೀಸ್ ಆಗಲಿದೆ. ಕಾರಣ, ಡಿಸೆಂಬರ್ ೨೫. ಕ್ರಿಸ್ ಮಸ್ ಸೆಲಬ್ರೇಷನ್ ಶುರುವಾಗುವ ದಿನ. ಸುದೀರ್ಘ ರಜೆ. ಬುಧವಾರದಿಂದ ಭಾನುವಾರದವರೆಗೆ ರಜೆ ಸಿಗಲಿದ್ದು, ರಜಾದಿನಗಳ ಭರಪೂರ ಲಾಭ ಪಡೆಯುವ ಉದ್ದೇಶದೊಂದಿಗೇ ಮ್ಯಾಕ್ಸ್ ರಿಲೀಸ್ ಅಗಲಿದೆ. ಆದರೆ ಅದಕ್ಕೆ ಮೊದಲೇ ಯುಐ ಬಂದಿರುತ್ತದೆ ಎನ್ನುವುದೇ ಕುತೂಹಲ ಹುಟ್ಟಿಸಿದೆ. ಸ್ಟಾರ್ ವಾರ್ ಕೂಡಾ ಶುರುವಾಗುವ ನಿರೀಕ್ಷೆ ಇದೆ.
2023ರ ಜೂನ್ ತಿಂಗಳಲ್ಲಿ ಶುರುವಾಗಿದ್ದ ಮ್ಯಾಕ್ಸ್, ಅದೇ ವರ್ಷ ರಿಲೀಸ್ ಆಗುವುದಾಗಿ ಹೇಳಿತ್ತು. ಆದರೆ ಚಿತ್ರೀಕರಣ ಮುಗಿದಿದ್ದೇ ಈ ವರ್ಷ. ಇಷ್ಟೆಲ್ಲ ಇದ್ದರೂ ಸಿನಿಮಾ ಬಿಡುಗಡೆ ಘೋಷಿಸದೆ ಸುದೀಪ್ ಅಭಿಮಾನಿಗಳು ನಿರ್ಮಾಪಕರ ವಿರುದ್ಧ ರೊಚ್ಚಿಗೇಳುವಂತೆ ಮಾಡಿತ್ತು. , “ಪುಣ್ಯಾತ್ಮರು ಯಾವಾಗ ದೊಡ್ಮನಸ್ಸು ಮಾಡ್ತಾರೋ ಗೊತ್ತಿಲ್ಲ” ಎಂದು ಸುದೀಪ್ ಅವರೇ ಹೇಳಿದ ನಂತರವಂತೂ ಸುದೀಪ್ ಮತ್ತು ಪ್ರೊಡ್ಯೂಸರ್ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ರೀತಿಯ ಸಂದೇಶ ಕೊಟ್ಟಿತ್ತು. ಇದೀಗ ನಿರ್ಮಾಪಕರು ಕೊನೆಗೂ ರಿಲೀಸ್ ಡೇಟ್ ಘೋಷಣೆ ಮಾಡಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ಧಾನು ಮ್ಯಾಕ್ಸ್ ನಿರ್ಮಾಪಕರು. ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿರುವ ‘ಮ್ಯಾಕ್ಸ್’ನಲ್ಲಿ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್‌ಕುಮಾರ್, ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ, ಸುನಿಲ್, ಉಗ್ರಂ ಮಂಜು, ಅನಿರುದ್ಧ ಭಟ್, ಸುಕೃತಾ ವಾಗ್ಳೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.