ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಅನಿರೀಕ್ಷಿತವೇನಲ್ಲ. ತನ್ನನ್ನು ಹೈಕಮಾಂಡ್ ಉಚ್ಚಾಟನೆ ಮಾಡುವುದಿಲ್ಲ ಎಂದು ಯತ್ನಾಳ್ ನಂಬಿಕೊಂಡಿದ್ದರಷ್ಟೇ. ಆದರೆ, ಯತ್ನಾಳ್ ಜೊತೆಗಿದ್ದ ಬಹುತೇಕರಿಗೆ, ಯತ್ನಾಳ್ ವಿರೋಧಿಗಳಿಗೆ ಇದು ತುಂಬಾ ದಿನ ಆಗುವಂತದ್ದಲ್ಲ ಎನ್ನುವುದು ಗೊತ್ತಿತ್ತು.ಈಗ ಯತ್ನಾಳ್ ಮುಂದಿರುವುದು ಎರಡೇ ಆಯ್ಕೆ.
ಹೊಸ ರಾಜಕೀಯ ಪಕ್ಷ ಕಟ್ಟುವುದು ಅಥವಾ ತಪ್ಪಾಯ್ತು ಕ್ಷಮಿಸಿ ಎಂದು ಮತ್ತೊಮ್ಮೆ ಕೇಳಿಕೊಂಡು ಬಿಜೆಪಿಗೆ ವಾಪಸ್ ಹೋಗುವುದು.
ಕ್ಷಮೆ ಕೇಳ್ತಾರಾ ಯತ್ನಾಳ್..?
ತಪ್ಪಾಯ್ತು, ಕ್ಷಮಿಸಿ ಎಂದು ಕೇಳುವುದು ಯತ್ನಾಳ್ ಜಾಯಮಾನವಲ್ಲ. ವ್ಯಕ್ತಿತ್ವವೂ ಅಲ್ಲ. ಹಠಮಾರಿ. ಅದರಲ್ಲೂ ತಪ್ಪಾಯ್ತು ಎನ್ನಬೇಕಿರುವುದು ಯಡಿಯೂರಪ್ಪ, ವಿಜಯೇಂದ್ರ ಅವರಿಗೆ. ಕ್ಷಮಿಸುವುದಕ್ಕೇನೋ ಅವರು ರೆಡಿ ಆಗಬಹುದು. ಆದರೆ, ಯತ್ನಾಳ್ ಅವರಿಗೇ ಅದು ಸಾಧ್ಯವಾಗದ ಮಾತು. ಯಡಿಯೂರಪ್ಪನವರ ಶೈಲಿಯಲ್ಲೇ ಹೇಳಬೇಕೆಂದರೆ ಅದು ಸೂರ್ಯ ಚಂದ್ರ ಇರುವವರೆಗೂ ಸಾಧ್ಯವಿಲ್ಲ.
ಹೀಗಿರುವಾಗ ಉಳಿದಿರುವ ಆಯ್ಕೆ, ಹೊಸ ಪಕ್ಷ ಕಟ್ಟುವುದು.
ಹಾಗೇನಾದರೂ ಆದರೆ ರಾಜ್ಯ ರಾಜಕೀಯದ ದಿಕ್ಕು ಬದಲಿಸಬಹುದು. ದೇಶದ ರಾಜಕೀಯದಲ್ಲಿ ಹಲವು ಉಚ್ಚಾಟನೆಗಳು ನಡೆದಿವೆ. ಅವು ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿವೆ. ಉಚ್ಚಾಟನೆಯಾದವರು ಹೊಸ ಪಕ್ಷ ಕಟ್ಟಿದ್ದಾರೆ. ಪಕ್ಷವನ್ನೇ ಒಡೆದಿದ್ದಾರೆ. ಇಬ್ಭಾಗ ಮಾಡಿದ್ದಾರೆ. ಹೊಸ ಪಕ್ಷ ಸೇರಿದ್ದಾರೆ. ಆದರೆ.. ಇಷ್ಟೆಲ್ಲ ಆಗಿಯೂ ಗೆದ್ದಿದ್ದು ಇಬ್ಬರು ಮಾತ್ರ.
1969 : ಇಂದಿರಾ ಗಾಂಧಿ ಉಚ್ಚಾಟನೆ
ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದರು. ಪ್ರಧಾನಿಯಾಗಿದ್ದವರನ್ನೇ ಪಕ್ಷದಿಂದ ಹೊರಹಾಕಿದ್ದರು ಆಗಿನ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ. ಆಗಿನ್ನೂ ಕಾಂಗ್ರೆಸ್ ಪಕ್ಷಕ್ಕೆ ಚರಕ ನೂಲುತ್ತಿದ್ದ ಮಹಿಳೆಯ ಚಿಹ್ನೆ ಇತ್ತು. ಹಸ್ತವಲ್ಲ. ಇಂದಿರಾ ಗಾಂಧಿ ಉಚ್ಚಾಟನೆ ನಿರ್ಧಾರವಾಗಿದ್ದು ಬೆಂಗಳೂರಿನ ಗಾಜಿನ ಮನೆಯಲ್ಲಿ. ಅಲ್ಲಿ ಸಭೆ ಸೇರಿದ್ದ ಕಾಮರಾಜ್, ಸಂಜೀವ್ ರೆಡ್ಡಿ, ಮೊರಾರ್ಜಿ ದೇಸಾಯಿ ಅವರೆಲ್ಲ ಒಟ್ಟು ಸೇರಿ ಇಂದಿರಾ ಗಾಂಧಿ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.
ಮುಂದೆ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷವನ್ನೇ ಇಬ್ಭಾಗ ಮಾಡಿದರು. ಅವರದ್ದೇ ಒಂದು ಕಾಂಗ್ರೆಸ್ ಆಯ್ತು. ಕಾಂಗ್ರೆಸ್ ಕಮಿಟಿಯಲ್ಲಿದ್ದ 705 ಸದಸ್ಯರ ಪೈಕಿ, 446 ಕಾಂಗ್ರೆಸ್ಸಿಗರು ಇಂದಿರಾ ಪರ ನಿಂತರೆ, ಮಿಕ್ಕವರು ಕಾಮರಾಜ್, ಮೊರಾರ್ಜಿ ದೇಸಾಯಿ ಅವರ ಪರ ನಿಂತರು. ಈಗ ಇರುವುದು ಇಂದಿರಾ ಗಾಂಧಿ ಸ್ಥಾಪಿಸಿದ್ದ ಕಾಂಗ್ರೆಸ್ ಪಕ್ಷ.
ಉಚ್ಚಾಟನೆಯ ನಂತರ, ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಪ್ರಾಬಲ್ಯ ಹೆಚ್ಚಾಯ್ತು. ಪ್ರಶ್ನಿಸುವವರೇ ಇಲ್ಲವಾದರು. ಉಚ್ಚಾಟನೆಯ ನಂತರ ಇಂದಿರಾ ಗಾಂಧಿ ಇನ್ನಷ್ಟು ರಫ್ & ಟಫ್ ಲೀಡರ್ ಆದರು.
2005 : JDSನಿಂದ ಸಿದ್ದರಾಮಯ್ಯ ಉಚ್ಚಾಟನೆ
ಇಂದಿರಾ ಅವರ ನಂತರ ಆ ಲೆಕ್ಕದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದವರು ಸಿದ್ದರಾಮಯ್ಯ ಮಾತ್ರ. 2005ರಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉದ್ಭವವಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನೇ ದೇವೇಗೌಡರು ಉಚ್ಚಾಟಿಸಿದರು. ಅಹಿಂದ ಸಮಾವೇಶದ ನೆಪ ಹೇಳಿ ಉಚ್ಚಾಟನೆ ಮಾಡಲಾಗಿತ್ತು. ಅದಾದ ನಂತರ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ, ಎರಡು ಬಾರಿ ಸಿಎಂ ಆಗಿ ಇತಿಹಾಸ ಸೃಷ್ಟಿಸಿದರು.
ಉಚ್ಚಾಟನೆಯಾಗಿ ಸೋತ ನಾಯಕರು..!
ಇವರನ್ನು ಬಿಟ್ಟರೆ, ಈಗ ಕಾಂಗ್ರೆಸ್ಸಿಗರು ಪದೇ ಪದೇ ದೇವರಾಜ ಅರಸು ಮಾಡೆಲ್ ಎನ್ನುತ್ತಾರಲ್ಲ, ಆ ದೇವರಾಜ ಅರಸು ಅವರನ್ನೇ 1979ರಲ್ಲಿ ಉಚ್ಚಾಟನೆ ಮಾಡಿದ್ದರು. ಅದೇ ಅರಸು ಅವರನ್ನು ಇಂದಿರಾ ಗಾಂಧಿಯವರೇ ಪಕ್ಷದಿಂದ ಉಚ್ಚಾಟಿಸಿದ್ದರು.
ಆಗ ಅರಸು ಅವರಿಗೆ ಗೊತ್ತೇ ಆಗದಂತೆ ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದ ಬಂಗಾರಪ್ಪನವರೇ ಷರಾ ಬರೆದಿದ್ದರು. ಬಂಗಾರಪ್ಪ ನೇತೃತ್ವದ ಸಮಿತಿಯೇ ಅರಸು ಉಚ್ಚಾಟನೆಗೆ ಕಾರಣವಾಗಿತ್ತು. ಅರಸು ಕೆಳಗಿಳಿದರು. ಅರಸು ಅವರೇ ಬೆಳೆಸಿದ್ದ ನಾಯಕರು ಕೂಡಾ ಅರಸು ನೆರವಿಗೆ ಬರಲಿಲ್ಲ. ಬಂಗಾರಪ್ಪ ಕೂಡಾ ಅರಸು ಬೆಳೆಸಿದ್ದವರೇ ಆಗಿದ್ದರು.
ಇನ್ನು ಬಿಜೆಪಿಯಲ್ಲಿ ಅಧ್ಯಕ್ಷರಾಗಿದ್ದ ಎಕೆ ಸುಬ್ಬಯ್ಯ ಅವರನ್ನು 1984ರಲ್ಲಿ ಆರ್ ಎಸ್ ಎಸ್ ನಾಯಕರ ಬಗ್ಗೆ ಮಾತನಾಡಿದ್ದಕ್ಕೆ ಉಚ್ಚಾಟಿಸಲಾಗಿತ್ತು. ಅವರೂ ಅಷ್ಟೇ, ಅದಾದ ಮೇಲೆ ಹೊಸ ಪಕ್ಷ ಕಟ್ಟಿದರು. ಕನ್ನಡನಾಡು ಎಂಬ ಪಕ್ಷ ಕಟ್ಟಿದರೂ ಬೆಳೆಯಲಿಲ್ಲ. ಇನ್ನು 1997ರಲ್ಲಿ ಜನತಾದಳದಿಂದ ಹೆಗಡೆ ಉಚ್ಚಾಟನೆಯಾಯ್ತು. ದೇವೇಗೌಡರು ಪ್ರಧಾನಿಯಾಗಿ, ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತಾದ ಮರುದಿನವೇ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಿದ್ದರು. ವಿಚಿತ್ರ ಎಂದರೆ ಆಗ ದೇವೇಗೌಡರ ಜೊತೆ ನಿಂತಿದ್ದವರು ಈಗ ಕಾಂಗ್ರೆಸ್ಸಿನಲ್ಲಿರುವ ಸಿದ್ದರಾಮಯ್ಯ, ಜೆಹೆಚ್ ಪಟೇಲ್ ಮತ್ತಿತರ ನಾಯಕರು.
ಮುಂದಿನ ದಿನಗಳಲ್ಲಿ ಪಟೇಲ್,ಹೆಗಡೆ ಕೂಡಾ ಅಪ್ರಸ್ತುತರಾದರು. ಒಟ್ಟಿನಲ್ಲಿ ಉಚ್ಛಾಟನೆಗಳಿಗೆ ಹೊಸ ಇತಿಹಾಸವೇ ಇದೆ.