ಅಭಿಮಾನಿಗಳ ಪ್ರಾರ್ಥನೆ, ಶಿವಣ್ಣನ ಪಾಸಿಟಿವ್ ಎನರ್ಜಿ, ದೇವರ ಆಶೀರ್ವಾದ ಫಲ ಕೊಟ್ಟಿದೆ. ನಟ ಶಿವರಾಜ್ ಕುಮರ್ ಆಪರೇಷನ್ ಸಕ್ಸಸ್ ಆಗಿದೆ. ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ರಿಸಲ್ಟ್ ಪಾಸಿಟಿವ್ ಆಗಿ ಬಂದಿದೆ. ಶಿವಣ್ಣ ಅವರಿಗೆ ಗಾಲ್ ಬ್ಲಾಡರ್ ಕ್ಯಾನ್ಸರ್ ಇತ್ತು. ಅದನ್ನು ಯಶಸ್ವಿಯಾಗಿ ಆಪರೇಷನ್ ಮೂಲಕ ತೆಗೆಯಲಾಗಿದೆ.
ಅಮೆರಿಕದ ಫ್ಲೋರಿಡಾದಲ್ಲಿರೋ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಡಾ. ಮುರುಗೇಶ್ ನೇತೃತ್ವದಲ್ಲಿ ಆಪರೇಷನ್ ನಡೆದಿದ್ದು, ರಾತ್ರಿ 11.30-12ರ ವೇಳೆಗೆ ಆಪರೇಷನ್ ಪೂರ್ಣಗೊಂಡಿದೆ.
ಭಾರತೀಯ ಕಾಲಮಾನ ಮಂಗಳವಾರ ಸಂಜೆ 6 ಗಂಟೆಗೆ (ಅಮೆರಿಕದ ಕಾಲ ಮಾನ ಬೆಳಿಗ್ಗೆ 8 ಗಂಟೆಗೆ) ಆಪರೇಷನ್ ಆರಂಭವಾದ ಆಪರೇಷನ್, ಸತತ 5 ರಿಂದ 6 ಗಂಟೆಗಳ ಕಾಲ ನಡೆದಿದೆ. ಯಶಸ್ವಿಯಾಗಿದೆ ಎಂಬ ವಿಚಾರ ಆಪ್ತ ಮೂಲಗಳು ಮಾಹಿತಿಯಿಂದ ಗೊತ್ತಾಗಿದೆ.
ಶಿವರಾಜ್ ಕುಮಾರ್ ಮೊದಲಿನಿಂದಲೂ ಪಾಸಿಟಿವ್ ಆಗಿರುತ್ತಿದ್ದವರು. ಸಹಜವಾಗಿಯೇ ಇದು ಸರ್ಜರಿಗೂ ಸಹಾಯವಾಗಿದೆ. ಶಿವಣ್ಣ ಅವರು ಇನ್ನೂ ಕೆಲವು ವಾರ ಅಮೆರಿಕದಲ್ಲಿಯೇ ಇರಲಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರದ ಕೆಲವು ಚಿಕಿತ್ಸೆಗಳಿರುತ್ತವೆ. ಅವುಗಳೆಲ್ಲವನ್ನೂ ಕಂಪ್ಲೀಟ್ ಮಾಡಿಕೊಂಡ ಮೇಲೆ ಭಾರತಕ್ಕೆ ಬರಲಿದ್ದಾರೆ.
ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಶಿವಣ್ಣ ಆರೋಗ್ಯಕ್ಕಾಗಿ ಲಕ್ಷಾಂತರ ಅಭಿಮಾನಿಗಳಷ್ಟೇ ಅಲ್ಲ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಹಾರೈಸಿದ್ದರು. ಎಲ್ಲರ ಹಾರೈಕೆ, ಪ್ರಾರ್ಥನೆಗಳೂ ಫಲಿಸಿವೆ.
ಶಿವರಾಜ್ ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಗಿತ್ತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋಗಿ, ಪೂಜೆ-ಪುನಸ್ಕಾರ, ಹೋಮ-ಹವನ ಮಾಡಿಸಿದ್ದರು. ಹರಕೆ ಕಟ್ಟಿಕೊಂಡಿದ್ದರು. ಈ ಎಲ್ಲ ಪ್ರಾರ್ಥನೆಗಳೂ ಫಲ ಕೊಟ್ಟಿವೆ.
ನಟ ಧ್ರುವ ಸರ್ಜಾ ಅವರಂತೂ ನನ್ನ ಎಲ್ಲ ಆಯುಷ್ಯವನ್ನೂ ಶಿವಣ್ಣಗೇ ಕೊಡಲಿ ಎಂದು ಹಾರೈಸಿದ್ದರೆ, ಸುದೀಪ್, ವಿನೋದ್ ರಾಜ್ ಮೊದಲಾದವರು ಮನೆಗೆ ಹೋಗಿ ಶುಭ ಕೋರಿ ಬಂದಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ಅಮೆರಿಕಕ್ಕೆ ತೆರಳುವಾಗ ಶಿವಣ್ಣ ಭಾವುಕರಾಗಿದ್ದು, ಕಣ್ಣೀರು ಹಾಕಿದ್ದು ಟೆನ್ಷನ್ ಆಗುವಂತೆ ಮಾಡಿತ್ತು. ಯಾರಿಗೂ ತಿಳಿಸದಂತಾ ಗಂಭೀರ ಸಮಸ್ಯೆ ಏನೋ ಇದೆ, ಶಿವಣ್ಣ ಮುಚ್ಚಿಡ್ತಿದ್ದಾರೆ ಎಂದು ಆತಂಕಕ್ಕೊಳಗಾದ ಅಭಿಮಾನಿಗಳೂ ಇದ್ದರು. ಅಂತಹ ಎಲ್ಲ ಅನುಮಾನಗಳಿಗೆ ಈಗ ಪರಿಹಾರ ಸಿಕ್ಕಿದೆ.
ಶಿವರಾಜ್ಕುಮಾರ್ ಅವರು ಈಗ ನಟನೆಯಿಂದ ದೊಡ್ಡ ಬ್ರೇಕ್ ಪಡೆದಿದ್ದಾರೆ. ಅವರು ಸಿನಿಮಾ ಕೆಲಸಗಳಿಗೆ ಅಲ್ಪವಿರಾಮ ಹಾಕಿ ಸಂಪೂರ್ಣಗಮನ ಆರೋಗದ್ಯದ ಮೇಲೆ ಹಾಕಿದ್ದಾರೆ. ಹೋಂ ಬ್ಯಾನರ್ನಲ್ಲಿ ಮೂಡಿ ಬಂದ ‘ಭೈರತಿ ರಣಗಲ್’ ಈಗ ಓಟಿಟಿಗೂ ಬಂದಿದೆ. ಭೈರತಿ ರಣಗಲ್ ಪ್ರಚಾರದ ವೇಳೆ ಶಿವಣ್ಣನಿಗೆ ಅನಾರೋಗ್ಯ ಎನ್ನುವ ವಿಷಯವನ್ನು ಒಪ್ಪಿಕೊಂಡಿದ್ದರು. ಅಮೆರಿಕಕ್ಕೆ ಹೋಗುವುದಕ್ಕೂ ಮೊದಲು ತಮಗೆ ಕ್ಯಾನ್ಸರ್ ಎಂಬ ವಿಚಾರ ರಿವೀಲ್ ಮಾಡಿದ್ದರು. ಜನವರಿ 26ರಂದು ವಾಪಸ್ ಬರುವ ಶಿವಣ್ಣ, ನಂತರ ಎಂದಿನಂತೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.