ಸಿನಿಮಾ ಇರಲಿ.. ಕ್ರಿಕೆಟ್ಟೇ ಇರಲಿ.. ಸ್ಪೋರ್ಟಿವ್ ಆಗಿಯೇ ತೆಗೆದುಕೊಳ್ಳೋ ಶಿವಣ್ಣ ಮತ್ತು ಗಣೇಶ್ ಎದುರಾಳಿಗಳಾಗಿ ಆಡಿ ಒಬ್ಬರು ಸೋತರೆ, ಮತ್ತೊಬ್ಬರು ಗೆದ್ದಿದ್ದಾರೆ. ಇದು ಆಟ, ಒಬ್ಬರು ಸೋತರೆ ಇನ್ನೊಬ್ಬರು ಗೆಲ್ಲಲೇಬೇಕು. ಸಿನಿಮಾಗಳಲ್ಲಿ ಹಾಗಾಗಲ್ಲ. ಇಬ್ಬರೂ ಏಕಕಾಲಕ್ಕೆ ಥಿಯೇಟರಿಗೆ ಬಂದು, ಇಬ್ಬರೂ ಗೆಲ್ಲುವ ಅವಕಾಶ ಇರುತ್ತದೆ. ಇನ್ನು ಕೆಸಿಸಿ ವಿಷಯಕ್ಕೆ ಬಂದರೆ..
ಕರ್ನಾಟಕ ಚಲನಚಿತ್ರ ಕಪ್ ಚಾಂಪಿಯನ್ ಆಗಿ ಗಣೇಶ್ ತಂಡ ಹೊರಹೊಮ್ಮಿದೆ. ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ಚಾಂಪಿಯನ್ ಆಗುವುದರೊಂದಿಗೆ ೩ ದಿನಗಳ ಕ್ರಿಕೆಟ್ ಹಬ್ಬಕ್ಕೆ ತೆರೆ ಬಿದ್ದಿದೆ. ಶಿವರಾಜ್ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಸೋಲಿಸಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಚಾಂಪಿಯನ್ ಆಗಿದೆ.
ಮೊದಲು ಬ್ಯಾಟ್ ಮಾಡಿದ ಗಣೇಶ್ ತಂಡ 10 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತು. ಕೇವಲ 32 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅವಿನಾಶ್ (12 ಎಸೆತ 40 ರನ್), ಕರುಣ್ (25) ಹಾಗೂ ಪ್ರಿನ್ಸ್ (16) ರನ್ ಗಳಿಸಿ ಚೇತರಿಕೆ ನೀಡಿದರು. ರಾಷ್ಟ್ರಕೂಟ ಪ್ಯಾಂಥರ್ಸ್ ಪರ (ಶಿವಣ್ಣ ಟೀಂ) ಪರ ಬೌಲ್ ಮಾಡಿದ ಶಿವಣ್ಣ 12ಕ್ಕೆ 1 ವಿಕೆಟ್ ಪಡೆದರೆ, ಪ್ರದೀಪ್ 2 ರನ್ನಿಗೆ 2 ವಿಕೆಟ್ ಪಡೆದರು. ಶ್ರೀಕಾಂತ್ 24ಕ್ಕೆ 1 ವಿಕೆಟ್ ಪಡೆದರು.
112 ಟಾರ್ಗೆಟ್ ಬೆನ್ನು ಹತ್ತಿದ ಶಿವಣ್ಣ ತಂಡಕ್ಕೆ ಸುರೇಶ್ ರೈನಾ ಹಾಗೂ ಪ್ರದೀಪ್ ಜೋಡಿ ಭರ್ಜರಿ ಆರಂಭ ಕೊಟ್ಟಿತು. ರೈನಾ 51 (29 ಎಸೆತ) ರನ್ ಗಳಿಸಿ ಆಡುತ್ತಿದ್ದ ರೈನಾ ಔಟ್ ಆದರು. ದಿಲೀಪ್ (10 ರನ್), ಪ್ರದೀಪ್ (39 ರನ್ 24 ಎಸೆತ) ಔಟ್ ಆಗುವುದರೊಂದಿಗೆ ಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ ಶಿವಣ್ಣ ತಂಡ 108 ರನ್ ಗಳಿಸುವುದಕ್ಕೆ ಮಾತ್ರ ಶಕ್ತವಾಯಿತು. ಗಣೇಶ್ ಟೀಂ 3 ರನ್‌ಗಳ ರೋಚಕ ಗೆಲುವು ಸಾಧಿಸಿತು.
ಡಿಸಿಎಂ ಡಿಕೆ ಶಿವಕುಮಾರ್ ಪ್ರಶಸ್ತಿ ವಿತರಣೆ ಮಾಡಿದರು. ಚಂದನ್ ಶೆಟ್ಟಿ, ಆಲ್ ಓಕೆ ಅಶೋಕ್ ಮೊದಲಾದವರು ಸಮಾರೋಪ ಸಂಭ್ರಮಕ್ಕೆ ಕಳೆ ತುಂಬಿದರು.
ಗೃಹ ಸಚಿವ ಪರಮೇಶ್ವರ್ ಅವರಂತೂ ಶಿವಣ್ಣ ಎನರ್ಜಿಗೆ ಮಾರು ಹೋದರು. ನೀವು ಕ್ರಿಕೆಟ್ ಆಡುತ್ತಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಟೀಂ ಸೇರಬಹುದು ಎಂದು ಪ್ರಶಂಸಿಸಿದರು.