ತಿರುಪತಿ ತಿರುಮಲ ದೇಗುಲದ ಉಸ್ತುವಾರಿ ಹೊತ್ತಿರುವ ಟಿಟಿಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 18 ಹಿಂದೂಯೇತರ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಟಿಟಿಡಿ, ಸ್ವಯಂ ನಿವೃತ್ತಿಗೆ ಸಲಹೆ ನೀಡಿದೆ. ಒಂದೋ ಸರ್ಕಾರದ ಬೇರೆ ಇಲಾಖೆಗೆ ವರ್ಗಾವಣೆ ಪಡೆದುಕೊಳ್ಳಿ ಅಥವಾ ಸ್ವಯಂ ನಿವೃತ್ತಿ ಪಡೆಯಿರಿ ಎಂದು ಸೂಚಿಸಿದೆ. ಅನ್ಯ ಧರ್ಮದ ಹಿಂದೂಗಳಲ್ಲದವರಿಗೆ ತಿರುಪತಿ ದೇಗುಲದ ಆಡಳಿತ ಮಂಡಳಿ ಸೂಚನೆ ನೀಡಿದ್ದು, ದೇವಾಲಯದ ಧಾರ್ಮಿಕ ಚಟುವಟಿಕೆಗಳ ಪಾವಿತ್ರ್ಯ ಕಾಪಾಡುವ ಬದ್ಧತೆಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ
ತಿರುಪತಿ ತಿರುಮಲ ದೇಗುಲ ಮಂಡಳಿ.
ಈ ಹಿಂದೆ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನ್ಯಮತೀಯರಿಗೂ ದೇಗುಲದಲ್ಲಿ ಕೆಲಸಕ್ಕೆ ಅವಕಾಶ ನೀಡಲಾಗಿತ್ತು. ಆದರೆ 2024ರ ಜೂನ್‌ನಲ್ಲಿ ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದ ಬಳಿಕ ಈ ಕ್ರಮವನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಹಿಂದೂ ಹೆಸರಿಟ್ಟುಕೊಂಡಿರುವ 18 ಕ್ರೈಸ್ತರನ್ನು ಟಿಟಿಡಿ ಗುರುತಿಸಿದ್ದು, ಅವರನ್ನು ದೇವಸ್ಥಾನ ತೊರೆಯುವಂತೆ ಸೂಚಿಸಿದೆ.
ಟಿಟಿಡಿಯಲ್ಲಿನ ಹಿಂದೂಯೇತರ ಸಿಬ್ಬಂದಿಗೆ ವಿಆರ್‌ಎಸ್ ನೀಡುವುದು ಹಾಗೂ ಅವರನ್ನು ಇತರ ಸರ್ಕಾರಿ ಇಲಾಖೆಗೆ ಒಪ್ಪಿಸಬೇಕು ಎಂದು ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಸೂಚಿಸಿದ್ದರು. ಈಗಲೂ ಕೂಡಾ ಹಿಂದೂಯೇತರ ಸಿಬ್ಬಂದಿಯ ವಿರುದ್ಧ ತೆಗೆದುಕೊಳ್ಳಲಾಗುವ ಶಿಕ್ಷೆ ಅಥವಾ ಶಿಸ್ತು ಕ್ರಮದ ಬಗ್ಗೆ ನೋಟಿಸ್ ಯಾವುದೇ ಸ್ಪಷ್ಟತೆ ನೀಡಿಲ್ಲ.
ಹೊಸ ಆಡಳಿತ ಮಂಡಳಿ ಟಿಟಿಡಿಯ ಈ ನಿರ್ಧಾರಕ್ಕೆ ಸಂಸದ ಓವೈಸಿ ಕಿಡಿಕಿಡಿಯಾಗಿದ್ದಾರೆ. ಅವರು ನೇರವಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಪ್ರಶ್ನೆ ಮಾಡಿದ್ದು ʻಚಂದ್ರಬಾಬು ನಾಯ್ಡು ಅವರೇ ವಕ್ಫ್ ಬೋರ್ಡಿನಲ್ಲಿ ಮುಸ್ಲಿಮೇತರರನ್ನು ಸೇರಿಸುವುದಕ್ಕೆ ಬೆಂಬಲ ಕೊಡುತ್ತಿರುವ ನೀವೇ, ಟಿಟಿಡಿಯಲ್ಲಿ ಹಿಂದೂಯೇತರರನ್ನು ಸೇರಿಸಿಕೊಳ್ಳುತ್ತಿಲ್ಲ. ಸಂವಿಧಾನದಲ್ಲಿ ಹಿಂದೂಯೇತರರು ಹಿಂದೂ ಧಾರ್ಮಿಕ ಆಡಳಿತದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ನಿಮ್ಮದು ಡಬಲ್ ಸ್ಟಾಂಡರ್ಡ್ʼ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಟಿಟಿಡಿಯ ಹೊಸ ರೂಲ್ಸ್ ಈಗ ವಕ್ಫ್ ಬೋರ್ಡ್ ವಿವಾದಕ್ಕೂ ಕನೆಕ್ಟ್ ಆಗಿದೆ.