ಗೃಹ ಲಕ್ಷ್ಮೀ ಯೋಜನೆ ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ ಅನ್ವಯವಾಗಲಿದೆ. ಒಂದೇ ದಿನದ ಅಂತರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಹೇಳಿಕೆ ಬದಲಿಸಿದ್ದಾರೆ. ಗೃಹಲಕ್ಷ್ಮೇ ಯೋಜನೆ ಮಾರ್ಗಸೂಚಿಯಲ್ಲಿ ಪತಿ ಅಥವಾ ಪತ್ನಿ ತೆರಿಗೆ ಪಾವತಿದಾರರಾಗಿದ್ದರೆ ಯೋಜನೆ ಅನ್ವಯವಾಗುವುದಿಲ್ಲ ಎಂಬ ಅಂಶವಿದೆ. ಹೀಗಾಗಿ ಮನೆಯೊಡತಿಯ ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೂ ಯೋಜನೆ ಅನ್ವಯವಾಗಲಿದೆ. ಈ ಬಗ್ಗೆ ಜನರು ಗೊಂದಲಕ್ಕೆ ಒಳಗಾಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಗೊಂದಲವಿರಲಿಲ್ಲ. ಆದರೆ ಗೊಂದಲ ಸೃಷ್ಟಿಸಿದ್ದೇ ಲಕ್ಷ್ಮೀ ಹೆಬ್ಬಾಳ್ಕರ್. ಆದರೆ ಗೊಂದಲ ಬೇಡ ಎಂದೂ ಕೂಡಾ ಅವರೇ ಹೇಳಿದ್ದಾರೆ.
ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಅಂತ್ಯೋದಯ, ಬಿಪಿಎಲ್, ಎಪಿಎಲ್ ಯಾವುದಾದರೊಂದಿಗೆ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. . ರಾಜ್ಯದಲ್ಲಿನ ಪಡಿತರ ಚೀಟಿಯಲ್ಲಿ ಶೇ. 95ರಷ್ಟು ಮಹಿಳೆಯರೇ ಮನೆಯೊಡತಿ ಎಂಬ ಉಲ್ಲೇಖವಿದೆ. ಅದರಿಂದ ಈ ಅಂಶ ಯಾವುದೇ ಸಮಸ್ಯೆಯಾಗುವುದಿಲ್ಲ. ಆಗಸ್ಟ್ 17 ಅಥವಾ 18ರಂದು ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸಿ ಗೃಹಲಕ್ಷ್ಮೀಯರಿಗೆ 2 ಸಾವಿರ ರು. ನೀಡುವುದನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಅರ್ಜಿ ನಮೂನೆ ಅಸಲಿ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ನಮೂನೆಯು ನಿಜವಾದದ್ದಾಗಿದ್ದು, ಆದರೆ ಅದು ಕರಡು ಅರ್ಜಿ (ಡ್ರಾಫ್ಟ್) ನಮೂನೆಯಾಗಿದೆ. ಅದರಲ್ಲಿ ಸಾಕಷ್ಟು ಲೋಪಗಳಿರುವುದು ಗಮನಕ್ಕೆ ಬಂದಿದೆ. ಅದನ್ನೆಲ್ಲ ಸರಿಪಡಿಸಲಾಗುವುದು. ಪ್ರಮುಖವಾಗಿ ಜಾತಿ ಕಾಲಂ ತೆಗೆದು ವರ್ಗದ ಕಲಂ ಸೇರಿಸಲಾಗುವುದು. ಜತೆಗೆ ವಿಧವೆಯರು ಸೇರಿ ಇನ್ನಿತರಿಗೆ ಅನುಕೂಲವಾಗುವಂತೆ ಅರ್ಜಿಯಲ್ಲಿ ಕಲಂಗಳನ್ನು ಸೇರಿಸಲಾಗುತ್ತದೆ. ಇನ್ನು ಎರಡ್ಮೂರು ದಿನಗಳಲ್ಲಿ ಅಧಿಕೃತ ಅರ್ಜಿ ನಮೂನೆಯನ್ನು ಪ್ರಕಟಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿವರಣೆ ಕೊಟ್ಟಿದ್ದಾರೆ.
ಮನೆ ಮನೆಗೆ ಬಂದು ಅರ್ಜಿ ಸ್ವೀಕರಿಸುತ್ತೇವೆ : ಕೃಷ್ಣ ಬೈರೇಗೌಡ
ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳ ಅರ್ಜಿ ಸಲ್ಲಿಕೆಯನ್ನು ಸರಳವಾಗಿಸಲು ಕಂದಾಯ ಇಲಾಖೆ ನೇಮಿಸುವ ಸಿಬ್ಬಂದಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. , ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಯೋಜನೆ ಅಡಿಯಲ್ಲಿ 1.30 ಕೋಟಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಎರಡು ತಿಂಗಳೊಳಗೆ ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಬೇಕಿದ್ದು, ಅದು ಸವಾಲಿನ ಕೆಲಸವಾಗಿದೆ.
ಇಡೀ ವರ್ಷದಲ್ಲಿ ಕಂದಾಯ ಇಲಾಖೆ 1.50 ಕೋಟಿಯಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುತ್ತದೆ. ಆದರೆ, ಎರಡು ತಿಂಗಳಲ್ಲಿ ಅಷ್ಟೇ ಪ್ರಮಾಣದ ಅರ್ಜಿಗಳನ್ನು ವಿಲೇವಾರಿ ಮಾಡಬೇಕಿದ್ದು, ಅದಕ್ಕಾಗಿ ಈಗಾಗಲೆ ತಯಾರಿ ನಡೆಸಲಾಗಿದೆ ಎಂದರು. ರಾಜ್ಯದಲ್ಲಿನ 898 ನಾಡ ಕಚೇರಿ ಸೇರಿದಂತೆ 7 ಸಾವಿರಕ್ಕೂ ಹೆಚ್ಚಿನ ಸೇವಾಸಿಂಧು ಕಚೇರಿ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಒನ್ ಕೇಂದ್ರ), ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್ 15ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ನಾಡಕಚೇರಿಗಳಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಫಲಾನುಭವಿಗಳು ಒಮ್ಮೆಲೇ ಅರ್ಜಿ ಸಲ್ಲಿಸಲು ಬಂದು ಗೊಂದಲ ಸೃಷ್ಟಿಯಾಗುವುದನ್ನು ತಡೆಯಲು, ಆನ್ಲೈನ್ ಮತ್ತು ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸ್ವೀಕರಿಸಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಇದೇ ವೇಳೆ ಯಾವುದೇ ಪಿಂಚಣಿಯೂ ಕಟ್ ಆಗುವುದಿಲ್ಲ. ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಎಲ್ಲರಿಗೂ ಪಿಂಚಣಿಗಳು ಸಿಗುತ್ತವೆ. ಆ ಪಿಂಚಣಿ ಪಡೆಯುತ್ತಿದ್ದಾರೆಂದ ಕಾರಣಕ್ಕೆ ಗೃಹಲಕ್ಷ್ಮಿ ನಿಲ್ಲುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.