ಗೃಹ ಲಕ್ಷ್ಮಿ ಯೋಜನೆ ಕೆಲಸ ಯಾವಾಗ ಶುರುವಾಗುತ್ತೆ ಅನ್ನೋ ಪ್ರಶ್ನೆ, ಕುತೂಹಲ ಇನ್ನೂ ಮುಗಿದಿಲ್ಲ. ಆಪ್ ರೆಡಿ. ವೆಬ್`ಸೈಟ್ ರೆಡಿ. ಸರ್ಕಾರವೂ ರೆಡಿ. ಆದರೆ ಯೋಜನೆ ಏಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಲವು ಬಾರಿ ಹೇಳಿಕೆ ನೀಡಿದ್ದರಾದರೂ, ಯೋಜನೆ ಜಾರಿಯಾಗಿಲ್ಲ. ಇದೀಗ ಯೋಜನೆ ಜಾರಿಗೆ ಪ್ರಕ್ರಿಯೆ ಶುರುವಾಗುವ ಸೂಚನೆ ಕೊಟ್ಟಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್. ಇನ್ನು ಕೆಲವೇ ದಿನಗಳಲ್ಲಿ ಅಂದರೆ ಒಂದೆರಡು ದಿನಗಳಲ್ಲಿ ಗೃಹಲಕ್ಷ್ಮಿ ಜಾರಿಯಾಗಲಿದೆ ಎಂದಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅನುಕೂಲ ಆಗುವಂತೆ ಗ್ರಾಮಕ್ಕೊಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಈ ಪ್ರಜಾಪ್ರತಿನಿಧಿಗಳು ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಅರ್ಜಿಯನ್ನು ಭರ್ತಿ ಮಾಡಿಕೊಂಡು ಹೋಗುತ್ತಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ 2023-24ನೇ ಸಾಲಿನಲ್ಲಿ ಜಾರಿಗೊಳಿಸುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿದಾರರು Mobile App ಮೂಲಕವು ಸಹ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲು ಪ್ರಜಾ ಪ್ರತಿನಿಧಿ ((Citizen Volunteer)ಗಳನ್ನು ಗೌರವ ಸೇವೆ ಆಧಾರದ ಮೇಲೆ ನೇಮಕ ಮಾಡಲು ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದ್ದಾರೆ. ಪ್ರತಿ 1 ಸಾವಿರ ಜನರಿಗೆ ಅಥವಾ ಒಂದು ಸಾವಿರ ಜನರ ಒಂದು ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತಿದೆ. ಇಬ್ಬರಲ್ಲಿ ಒಬ್ಬರು ಮಹಿಳಾ ಪ್ರಜಾಪ್ರತಿನಿಧಿಗಳ ಆಯ್ಕೆ ಕಡ್ಡಾಯವಾಗಿದೆ. ಒಂದು ತಿಂಗಳ ಮಟ್ಟಿಗೆ ಪ್ರಜಾಪ್ರತಿನಿಧಿ ಗಳ ನೇಮಕ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುವ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಂಟಾಗುವ ಒತ್ತಡವನ್ನು ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲವಾಗುವಂತೆ Mobile App ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದು, ಈ Mobile App ನ ಮೂಲಕ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಪುಜಾ ಪ್ರತಿನಿಧಿಯವರನ್ನು ನೇಮಕ ಮಾಡುವುದು.
ಪ್ರಜಾಪ್ರತಿನಿಧಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತಂತ್ರಜ್ಞಾನ ಅಡೆತಡೆಗಳನ್ನು ಎದುರಿಸುತ್ತಿರುವ ನಾಗರಿಕರಿಗೆ ಸಹಾಯ ಮಾಡುತ್ತಾರೆ. ಕರ್ನಾಟಕ ಸರ್ಕಾರವು ಅಭಿವೃದ್ಧಿ ಪಡಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ಅವರು ನೋಂದಣಿಗಾಗಿ ಬಳಸುತ್ತಾರೆ. ಪ್ರಜಾ ಪ್ರತಿನಿಧಿಗಳು ಉದ್ದೇಶಿತ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ. ಜೊತೆಗೆ, ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ. ಪ್ರಜಾ ಪ್ರತಿನಿಧಿಗಳು ಈ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದು ಅವರಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ.
ಗೃಹಲಕ್ಷ್ಮಿ ಪ್ರಜಾಪ್ರತಿನಿಧಿಗಳು ಸ್ಥಳೀಯರಾಗಿರಬೇಕು. ಕನಿಷ್ಠ 10ನೇ ಕ್ಲಾಸ್ ಪಾಸ್ ಆಗಿರಬೇಕು. ಪ್ರಜಾಸಿಂಧು ಸೇವಾ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಪ್ರತಿ ಜಿಲ್ಲೆಗೆ 50ರಿಂದ 100 ಜನರನ್ನು ನೇಮಕ ಮಾಡಲಾಗುತ್ತಿದೆ.