ಆಪತ್ಕಾಲದಲ್ಲಿ ಆದವನೇ ಬಂಧು ಬಳಗ ನೆಂಟ ಸ್ನೇಹಿತ ಎಲ್ಲವೂ.. ಕುಮಾರಸ್ವಾಮಿ ಅವರ ವಿಷಯದಲ್ಲಿಯೂ ಇದೇ ಆಗಿದೆ. ಇದೀಗ ಗುಣಮುಖರಾಗಿ ಮನೆ ಸೇರಿರುವ ಕುಮಾರಸ್ವಾಮಿ (HD Kumaraswamy) ಅವರನ್ನು ಅಪಾಯದಿಂದ ರಕ್ಷಿಸಿದ್ದು ಗೋಲ್ಡನ್ ಪೀರಿಯಡ್ (golden hour) ಅವಧಿಯಲ್ಲಿ ತೆಗೆದುಕೊಂಡ ಎಚ್ಚರಿಕೆ. ಬಿಡದಿಯ (Bidadi)ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕುಮಾರಸ್ವಾಮಿ (HD Kumaraswamy) ಅವರಿಗೆ ಸ್ವಲ್ಪ ಅನಾರೋಗ್ಯ ಕಾಣಿಸಿಕೊಂಡಿತು. ಆಗ ಮಧ್ಯರಾತ್ರಿಯ ಸಮಯ. ಮಾತು ತೊದಲುತ್ತಿದ್ದವು. ದೇಹ ಹಿಡಿತ ತಪ್ಪುತ್ತಿತ್ತು. ತಕ್ಷಣ ಅಲರ್ಟ್ ಆಗಿ, ಕಾರ್ಯೋನ್ಮುಖರಾದವರು ಸತೀಶ್. ಸತೀಶ್ ಕುಮಾರಸ್ವಾಮಿ ಅವರ ಆಪ್ತಸಹಾಯಕ. ಆ ದಿನ ರಾತ್ರಿ ಬಿಡದಿಯ ತೋಟದ ಮನೆಯಲ್ಲೇ ಇದ್ದರು.
ನನ್ನ ಆಪ್ತ ಸಹಾಯಕ ಸತೀಶ್ ಜತೆಯಲ್ಲಿ ಇದ್ದರು. ತಡರಾತ್ರಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿತು. ತಕ್ಷಣವೇ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಕರೆ ಮಾಡಿ, ಅವರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯ (Apollo hospital) ತಜ್ಞ ವೈದ್ಯ ಡಾ.ಸತೀಶ್ಚಂದ್ರ (Dr. Satishchandra) ಅವರನ್ನು ಸಂಪರ್ಕ ಮಾಡಲಾಯಿತು. ಬಿಡದಿ ತೋಟದ ಮನೆಯಿಂದ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿದೆ. ಸ್ವಲ್ಪ ತಡ ಮಾಡಿದ್ದರೂ ನಾನು ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಿತ್ತು ಎಂದು ಸತೀಶ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಸತೀಶ್ ಕೆಲವು ವರ್ಷಗಳಿಂದ ಕುಮಾರಸ್ವಾಮಿ ಜೊತೆಯಲ್ಲೇ ಇದ್ದಾರೆ. ಕುಮಾರಸ್ವಾಮಿ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿರುವುದು ಇದೇ ಸತೀಶ್. ಕುಮಾರಸ್ವಾಮಿ (HD Kumaraswamy) ಆರೋಗ್ಯ ಹದಗೆಡುತ್ತಿರುವ ಸೂಚನೆ ಸಿಕ್ಕ ತಕ್ಷಣ ಜಯದೇವ ಹೃದ್ರೋಗ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ್ (Jayadeva doctor Manjunath) ಅವರಿಗೆ ಕರೆ ಮಾಡಿದ್ದಾರೆ. ಇನ್ನೊಬ್ಬ ಡೈವರ್`ನನ್ನು ತಕ್ಷಣ ಕರೆಸಿಕೊಂಡಿದ್ದಾರೆ. ಅಪೋಲೋ ಆಸ್ಪತ್ರೆಯವರನ್ನೂ ಸಂಪರ್ಕಿಸಿದ್ದಾರೆ.ಅದಾದ ನಂತರ ಕೇವಲ 20 ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದ್ದಾರೆ.
ವೈದ್ಯರು ಹೇಳಿದ್ದೇನು?
ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ವೈದ್ಯ ಡಾ.ಸತೀಶ್ ಚಂದ್ರ ಮಾತನಾಡಿ, ಪಾಶ್ರ್ವವಾಯು ಬಗ್ಗೆ ತಿಳಿವಳಿಕೆ ಅವಶ್ಯಕತೆ ಇದೆ. ಅದರ ಚಿಹ್ನೆಗಳನ್ನು ತಿಳಿದುಕೊಂಡ ತಕ್ಷಣ ಆಸ್ಪತ್ರೆಗೆ ಬರಬೇಕು. ಕಣ್ಣು, ಕೈ, ಮಾತುಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ತಕ್ಷಣ ಗೋಲ್ಡನ್ ಅವರ್ನಲ್ಲಿ ಆಸ್ಪತ್ರೆಗೆ ತಲುಪಬೇಕು. ಆಗ ಚಿಕಿತ್ಸೆ ಕೊಡಲು ಅನುಕೂಲ ಆಗುತ್ತದೆ. ರಕ್ತದ ಒತ್ತಡ, ಹೃದಯದ ಕಾಯಿಲೆ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಸ್ಟ್ರೋಕ್ ತಡೆಯಬಹುದು ಎಂದರು.