ಯುಐ ಟೀಸರ್ ಅಲ್ಲಲ್ಲ.. ವಾರ್ನರ್‌ನಲ್ಲಿ ಉಪೇಂದ್ರ ಜಾತಿ, ಹಸಿವು, ಅಧಿಕಾರ, ಧಿಕ್ಕಾರಗಳ ವಿಡಂಬನೆಯನ್ನು ಕಟ್ಟಿ ಕೊಟ್ಟಿದ್ದಾರೆ. ವಿಶ್ವದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳ ಪೈಕಿ ಕೆಲವು ಪ್ರಮುಖ ವಿಚಾರಗಳನ್ನು ‘ಯುಐ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಪೈಕಿ, ಜಾಗತಿಕ ತಾಪಮಾನ ಏರಿಕೆ, ಕೊವಿಡ್ 19, ಹಣದುಬ್ಬರ, ಎಐ, ನಿರುದ್ಯೋಗ ಹಾಗೂ ಯುದ್ಧಗಳ ಬಗ್ಗೆ ಸಿನಿಮಾದಲ್ಲಿ ಹೇಳುವ ಕೆಲಸ ಆಗಲಿದೆ. ಈಗ ರಿಲೀಸ್ ಆಗಿರುವ ವಿಡಿಯೋದಲ್ಲಿ ಈ ಸಿನಿಮಾದ ಕಥೆ 2040ರಲ್ಲಿ ಆರಂಭ ಆಗುವ ರೀತಿಯಲ್ಲಿ ತೋರಿಸಲಾಗಿದೆ. ಜಾತಿ, ಹಸಿವು, ಅಧಿಕಾರ, ಧಿಕ್ಕಾರಗಳ ವಿಡಂಬನೆಯೇ ಯುಐ ವಾರ್ನರ್.
ಟೀಸರ್ʻನಲ್ಲಿ ಗಮನ ಸೆಳೆಯುವ ಅಂಶಗಳು ಹೀಗಿವೆ.
ಪ್ರತಿ ಜಾತಿಯವನಿಗೂ ಒಂದೊಂದು ಜಾತಿ ಲೇಬಲ್. ನಂಬರ್ ಒತ್ತುವ ದೃಶ್ಯವಿದೆ.
ನಮ್ಮವರು ಮಂಗಳಗ್ರಹಕ್ಕೆ ಹೋಗ್ತಿದ್ದಾರಂತೆ ಅನ್ತಿರೋವಾಗ್ಲೇ ರಸ್ತೆ ಗುಂಡಿಯಲ್ಲಿ ಬೀಳುವ ವ್ಯಕ್ತಿ, ರಸ್ತೆಗುಂಡಿಗಳನ್ನು ವಿಡಂಬನೆ ಮಾಡುತ್ತದೆ.
ಒಂದು ಬಾಳೆ ಹಣ್ಣಿಗಾಗಿ ನಡೆಯುವ ರಕ್ತಸಿಕ್ತ ಹೊಡೆದಾಟ ನಡೆದು,ಕೈಕಾಲು ಕತ್ತರಿಸಿ ಹೊಡೆದಾಡು ದೃಶ್ಯವೂ ಇದೆ.
ಸರ್ಕಾರಹೊಸ ಹೊಸ ಶಸ್ತ್ರಾಸ್ತ್ರ ಖರೀದಿ ಮಾಡಿದೆ, ನಾವು ಸೇಫ್ ಅನ್ನೋ ಹುಡುಗ್ರು ಧಿಕ್ಕಾರ ಕೂಗುತ್ತಾ ಬಂದಾಗ ಧಿಕ್ಕಾರಕ್ಕಿಂತ ಅಧಿಕಾರಕ್ಕೇ ಪವರ್ ಜಾಸ್ತಿ ಎಂದು ಶೂಟ್ ಮಾಡುವ ಉಪೇಂದ್ರ..
ಮೊಬೈಲ್ ನೋಡಿಕೊಂಡು ಸಕಲ ಸಮಸ್ಯೆಗಳನ್ನೂ ಮರೆಯುವ ಜನತೆಯ ಮನಸ್ಥಿತಿಯನ್ನೂ ವಿಡಂಬನಾತ್ಮಕವಾಗಿ ತೋರಿಸಲಾಗಿದೆ. ಅಲ್ಲಿಗೆ ಉಪೇಂದ್ರ ಮತ್ತೊಮ್ಮೆ ವಿಡಂಬನೆಯ ಮೂಲಕ ಕಾಣುವ ಒಳನೋಟವನ್ನೇ ತಮ್ಮ ಚಿತ್ರದ ಕಥಾವಸ್ತುವನ್ನಾಗಿಸಿದ್ದಾರೆ.
‘ಯುಐ’ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಸನ್ನಿ ಲಿಯೋನ್, ರಾಗಿಣಿ, ಇಂದ್ರಜಿತ್ ಲಂಕೇಶ್, ಓಂಪ್ರಕಾಶ್ ರಾವ್, ದಿ.ಗುರುಪ್ರಸಾದ್ ಮೊದಲಾದವರು ನಟಿಸಿದ್ದಾರೆ. ಚಿತ್ರಕ್ಕೆ ಜಿ.ಮನೋಹರನ್, ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ‘ಯುಐ’ ಅಂದುಕೊಂಡಂತೆ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ.
ಇನ್ನು ಇದೇ ವೇಳೆ ಕಿಚ್ಚ ಸುದೀಪ್ ಮತ್ತು ಉಪೇಂದ್ರ ಈ ವರ್ಷದ ಅಂತ್ಯಕ್ಕೆ ಮುಖಾಮುಖಿಯಾಗುತ್ತಿದ್ದಾರೆ. ಯುಐ ಡಿಸೆಂಬರ್ 20ಕ್ಕೆ ತೆರೆ ಕಂಡರೆ, ಡಿಸೆಂಬರ್ 25ಕ್ಕೆ ಮ್ಯಾಕ್ಸ್ ರಿಲೀಸ್ ಆಗುತ್ತಿದೆ. ಕೇವಲ 4 ದಿನಗಳ ಅಂತರದಲ್ಲಿ ಇಬ್ಬರು ಸ್ಟಾರ್ ಚಿತ್ರಗಳು ರಿಲೀಸ್ ಆದರೆ ಚಿತ್ರರಂಗಕ್ಕೆ ಸಮಸ್ಯೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ʻಉಪೇಂದ್ರ ಅವರೇ ಸುಮ್ಮನಿದ್ದಾರೆ, ನೀವು ಮಾತ್ರ ಕೇಳ್ತಾನೇ ಇದ್ದೀರಿ. ಉಪೇಂದ್ರ ಅವರು ಗುರುವಾದರೆ ನಾನು ಶಿಷ್ಯನಿದ್ದಂತೆ. ನಾನೇ ಅವರಿಗೆ ಎಷ್ಟೋ ಬಾರಿ ನೀವು ಡೈರೆಕ್ಷನ್ ಮಾಡ್ಬೇಕು ಎಂದಿದ್ದೆʼ ಎಂದು ಹೇಳಿದ್ದರು.
ಇದಕ್ಕೆ ರಿಯಾಕ್ಟ್ ಮಾಡಿರುವ ಉಪೇಂದ್ರ ಸುದೀಪ್ ಶಿಷ್ಯ, ನಾನು ಗುರು ಹಾಗೇ ಇರಲಿ. ನಮ್ಮ ನಡುವೆ ಏನೂ ಇಲ್ಲ. ಅವರು ಹೇಳಿದ್ಮೇಲೆ ನಾನು ಏನು ಮಾತನಾಡೋದಿದೆ. ‘ಮ್ಯಾಕ್ಸ್’ ಮತ್ತು ‘ಯುಐ’ ಒಂದೇ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಅದೆಷ್ಟೋ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿ ಸಕ್ಸಸ್ ಕಂಡಿದ್ದು ಇದೆ. ಒಬ್ಬರಿಗೊಬ್ಬರ ಬೆಂಬಲ ನೀಡೋಣ. ಸುದೀಪ್ ಕೂಡ ನಮ್ಮ ಸಿನಿಮಾಗೆ ಟ್ವಿಟ್ ಮಾಡಿದ್ದಾರೆ. ಅವರಿಗೂ ಒಳ್ಳೆಯದಾಗಲಿ ಎಂದು ಹೇಳುತ್ತೇನೆ ಎಂದಿದ್ದಾರೆ. ಸುದೀಪ್ ಅವರ ಮ್ಯಾಕ್ಸ್ ಚಿತ್ರವೂ ಗೆಲ್ಲಲಿ ಎಂದು ಶುಭ ಕೋರಿದ್ದಾರೆ.