ಜ್ವರ ಇದ್ಯಾ.. ಮೈ ಸ್ವಲ್ಪ ಬಿಸಿ ಅನ್ನಿಸ್ತಿದ್ಯಾ.. ಮೆಡಿಕಲ್ ಸ್ಟೋರಿಗೆ ಹೋಗ್ತಾರೆ, ಟ್ಯಾಬ್ಲೆಟ್ ತಗೋಳ್ತಾರೆ. ನೆಗಡಿ, ಕೆಮ್ಮು, ಮೈಕೈನೋವುಗಳಿಗೂ ಪ್ಯಾರಾಸಿಟಮಾಲ್ ತೆಗೆದುಕೊಳ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ (ಬಿಪಿ, ಶುಗರ್ ಅಥವಾ ಡಯಾಬಿಟೀಸ್) ಇದ್ದವರೂ ಅಷ್ಟೇ, ಆದರೆ ನೇರವಾಗಿ ಮೆಡಿಕಲ್ ಸ್ಟೋರಿನವರ ಬಳಿ ಹೋಗಲ್ಲ. ವೈದ್ಯರ ಬಳಿ ಹೋಗಿ, ಅವರು ಬರೆದುಕೊಟ್ಟ ಮಾತ್ರೆ ತೆಗೆದುಕೊಳ್ತಾರೆ. ವಿಟಮಿನ್ ಮಾತ್ರೆಗಳು, ಕ್ಯಾಲ್ಶಿಯಂ ಮಾತ್ರೆಗಳೂ ಅಷ್ಟೇ, ಜನ ಯೋಚನೆ ಮಾಡದೆ ನುಂಗ್ತಾರೆ. ಆದರೆ ಅಂತಹ 53 ಮಾತ್ರೆಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿವೆ.
‘ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ’ಯು (ಸಿಡಿಎಸ್‌ಸಿಒ) ಕಳೆದ ತಿಂಗಳು ‘ಗುಣಮಟ್ಟ ವಿಫಲವಾದ ಔಷಧ'(ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ – ಎನ್‌ಎಸ್‌ಕ್ಯೂ) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 53 ಔಷಧಗಳ ಬಗ್ಗೆ ಎಚ್ಚರಿಕೆ ಕೊಟ್ಟಿದೆ. ಪ್ರಯೋಗಾಲಯಗಳಲ್ಲಿ ಮಾಸಿಕ ನಡೆಸುವ ರಾಂಡಮ್ ಸ್ಯಾಂಪಲ್ ಪರೀಕ್ಷೆ ವೇಳೆ ಈ ವಿಚಾರ ಬಯಲಾಗಿದೆ. ಆದರೆ ಫಾರ್ಮಾ ಕಂಪನಿಗಳು ಮಾತ್ರ ಇಧು ಅಸಲಿ ಔಷಧಗಳಲ್ಲ, ಅಸಲಿ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ನಕಲಿ ಔಷಧಿಗಳು ಎಂದು ಸ್ಪಷ್ಟನೆ ನೀಡಿವೆ.
ಯಾವ ಯಾವ ಮಾತ್ರೆಗಳು ಪಟ್ಟಿಯಲ್ಲಿವೆ..?
ವಿಟಮಿನ್ ಸಿ ಮತ್ತು ಡಿ3 ಮಾತ್ರೆಗಳಾದ ‘ಶೆಲ್‌ಕಾಲ್’
‘ಬಿ ಕಾಂಪ್ಲೆಕ್ಸ್’ ಮತ್ತು ವಿಟಮಿನ್ ಸಿ ಮಾತ್ರೆಗಳು
ಅಸಿಡಿಟಿಗೆ ಬಳಸುವ ‘ಪ್ಯಾನ್-ಡಿ’
ಪ್ಯಾರಾಸಿಟಮಾಲ್ಲ್ ಐಪಿ 500 ಎಂಜಿ
ಮಧುಮೇಹ ನಿಯಂತ್ರಣಕ್ಕೆ ಬಳಸುವ ‘ಗ್ಲಿಮೆಪಿರೈಡ್’ ಮಾತ್ರೆ
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಳಸುವ ‘ಟೆಲ್ಮಿಸಾರ್ಟನ್ ಮಾತ್ರೆ
ಆಂಟಿಬಯೋಟಿಕ್ ಔಷಧಗಳಾದ ‘ಮೆಟ್ರೋನಿಡಜೋಲ್’ ಮತ್ತು ಕ್ಲಾವಮ್
ಪಿತ್ತಜನಕಾಂಗದ ಕಲ್ಲು ಕರಗಿಸಲು (ಕಿಡ್ನಿ ಸ್ಟೋನ್) ನೀಡುವ ಮಾತ್ರೆ ‘ಉರ್ಸೊಕಲ್
ಮಕ್ಕಳಲ್ಲಿ ಬ್ಯಾಕ್ಟೀರಿಯಾ ಸೋಂಕಿಗೆ ನೀಡಲಾಗುವ ‘ಸೆಪೋಡೆಮ್ ಎಕ್ಸ್‌ಪಿ’ ಸಿರಪ್
ಮುಂತಾದ ಔಷಧಗಳು ಈ ಪಟ್ಟಿಯಲ್ಲಿವೆ.
‘ಅಲ್ಕೆಮ್ ಲ್ಯಾಬೊರೇಟರೀಸ್’, ‘ಹೆಟೆರೊ ಡ್ರಗ್ಸ್’, ‘ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್’, ‘ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್’, ‘ಸನ್ ಫಾರ್ಮಾ’, ‘ಮೆಗ್ ಲೈಫ್‌ಸೈನ್ಸಸ್’, ‘ಪ್ಯೂರ್ ಅಂಡ್ ಕ್ಯೂರ್ ಹೆಲ್ತ್‌ಕೇರ್’ ಸೇರಿದಂತೆ ಪ್ರಮುಖ ಕಂಪನಿಗಳ ಔಷಧಗಳು ಪಟ್ಟಿಯಲ್ಲಿವೆ.
ಫಾರ್ಮಾ ಕಂಪೆನಿಗಳು ಕೊಟ್ಟ ಸ್ಪಷ್ಟನೆ ಏನು..?
ಪರೀಕ್ಷೆಗೆ ಒಳಪಡಿಸಲಾದ ಬ್ಯಾಚ್‌ನ ಔಷಧಗಳು ತಮ್ಮ ಕಂಪನಿಯಲ್ಲಿ ಉತ್ಪಾದನೆಯೇ ಆಗಿಲ್ಲ. ಅವು ಅದೇ ಬ್ರಾಂಡ್‌ನಲ್ಲಿ ತಯಾರಿಸಲಾದ ನಕಲಿ ಔಷಧಗಳು ಎನ್ನುವುದು ಎಲ್ಲ ಫಾರ್ಮಾ ಕಂಪೆನಿಗಳು ಕೊಟ್ಟಿರುವ ಸ್ಪಷ್ಟೀಕರಣ. ಆದರೆ ಈ ಹಂತದಲ್ಲಿ ಯಾವುದೇ ಕಂಪೆನಿ ದ್ರೋಹಿಗಳ ಪರಿಶೋಧನೆಗೆ ಇನ್ನೂ ಮುಂದಾಗಿಲ್ಲ ಎನ್ನವುದು ವಾಸ್ತವ.
ಕಾನೂನಿನ ಪ್ರಕಾರ ಒಂದು ಕಂಪೆನಿಯ ಹೆಸರಲ್ಲಿ ಇನ್ನೊಂದು ಕಂಪೆನಿ ಸೇಮ್ ಪ್ರಾಡಕ್ಟ್ ಉತ್ಪಾದನೆ ಮಾಡುವುದು ಕಾನೂನು ಬಾಹಿರ. ಅದರಲ್ಲೂ ಔಷಧಿಗಳಂತಹ ವಿಷಯದಲ್ಲಿ ಕಾನೂನುಗಳು ಇನ್ನೂ ಗಂಭೀರವಾಗಿವೆ. ಹಾಗೆ ನಕಲಿ ಔಷಧಿ ಉತ್ಪಾದನೆ ಮಾಡುತ್ತಿರುವವರ ವಿರುದ್ಧ ಸರ್ಕಾರ ಮತ್ತು ಆ ಕಂಪೆನಿಗಳು ಎರಡೂ ಕಠಿಣ ಕ್ರಮ ಕೈಗೊಂಡು ದಿಟ್ಟ ಹೆಜ್ಜೆ ಇಟ್ಟರೆ ಮಾತ್ರ ಇಂತಹ ಅಕ್ರಮ ನಿಲ್ಲುವುದಕ್ಕೆ ಸಾಧ್ಯವಿಲ್ಲ.
ನಂಬಿಕೆಗೆ ಪೆಟ್ಟು : ಏಕೆಂದರೆ ವೈದ್ಯರು ಹೇಳಿದ್ದನ್ನೇ ವೇದವಾಕ್ಯ ಎಂದು ನಂಬುತ್ತಾರೆ. ಅವರು ಕೊಟ್ಟ ಮಾತ್ರೆಗಳನ್ನು ಪರಮ ನಂಬಿಕೆಯಿಂದ ತೆಗೆದುಕೊಳ್ತಾರೆ. ಆದರೆ ತಾವು ಆರೋಗ್ಯ ಸುಧಾರಣೆಗಾಗಿ ನುಂಗುವ ಮಾತ್ರೆ ವೊರಿಜಿನಲ್ಲೋ.. ಡೂಪ್ಲಿಕೇಟೋ.. ಎಂದು ತಿಳಿದುಕೊಳ್ಳೋದು ಹೇಗೆ.. ಅದು ಗ್ರಾಹಕರಿಗೆ ಅರ್ಥಾತ್ ರೋಗಿಗಳಿಗೆ ಗೊತ್ತಿಲ್ಲ. ಕ್ರಮ ತೆಗೆದುಕೊಳ್ಳಬೇಕಾಗಿರೋದು ಸರ್ಕಾರ ಮತ್ತು ಫಾರ್ಮಾ ಕಂಪೆನಿಗಳೇ.