ನೀವು ತುಂಬಾ ತೆಳ್ಳಗಿದ್ದೀರಾ.. ನಮ್ಮ ಹರ್ಬಲ್ ಜ್ಯೂಸು ಕುಡಿಯಿರಿ.
ನೀವು ತುಂಬಾ ದಪ್ಪಗಿದ್ದೀರಾ.. ನಮ್ಮ ಹರ್ಬಲ್ ಜ್ಯೂಸು ಕುಡಿಯಿರಿ.
ವಾಕಿಂಗ್ ಬೇಡ. ವ್ಯಾಯಾಮ ಬೇಡ. ಸೈಡ್ ಎಫೆಕ್ಟೂ ಇಲ್ಲ. ಈ ಜ್ಯೂಸು ಕುಡಿಯುತ್ತಾ ಹೋದರೆ.. ಸ್ಲಿಮ್ & ಸ್ಮಾರ್ಟ್ ಆಗ್ಬಿಡ್ತೀರಿ.. ಎಂದೆಲ್ಲ ಹೇಳೋದನ್ನ ಕೇಳಿರ್ತೀರಿ. ನೋಡಿರ್ತೀರಿ. ಒಂದಷ್ಟು ಮಂದಿ ಹಾದಿ ಬೀದಿಗಳಲ್ಲಿ ಓಡೋಡಿ ಬಂದು ಇದನ್ನು ತೆಗೆದುಕೊಳ್ಳಿ, ಇದನ್ನು ಕುಡಿಯಿರಿ ಅಂತೆಲ್ಲ ಹೇಳ್ತಾರೆ. ಆದರೆ.. ಹುಷಾರ್. ಯಾಮಾರಬೇಡಿ.
ಹೀಗೆ ಬಂದವರು ಮ್ಮ ಹಿಂದಿನ ಸ್ಟೋರಿಯನ್ನು, ಕಣ್ಣೀರ ಕಥೆಗಳನ್ನು ಹೇಳಿಕೊಳ್ತಾ.. ಹರ್ಬಲ್ ಜ್ಯೂಸು ಕುಡಿದ ಮೇಲೆ ನನ್ನ ಜೀವನ ಹೇಗೆ ಸಾರ್ಥಕವಾಯಿತು, ತೆಳ್ಳಗಾಗಿ ಎಷ್ಟು ಸುಂದರವಾದೆ, ಏನೇನೋ ರೋಗಗಳು ಹೇಗೆಲ್ಲಾ ಕಡಿಮೆಯಾದವು ಅಂತೆಲ್ಲ ಕಥೆ ಹೇಳ್ತಾರೆ..
ಅಷ್ಟೆಲ್ಲ ಯಾಕೆ.. ಹರ್ಬಲ್ ಎನ್ನುವ ಹೆಸರಿನ ಇದನ್ನು ತೆಗೆದುಕೊಂಡರೆ, ನೀವು ತೆಳ್ಳಗೆ-ದಪ್ಪಗೆ ಆಗುವುದು ಮಾತ್ರವಲ್ಲದೇ ಲಕ್ಷಾಂತರ ರೂಪಾಯಿ ಸಂಪಾದನೆಯನ್ನೂ ಮಾಡಬಹುದು, ಸೈಡ್ ಬಿಜಿನೆಸ್ ಆಗಿ ಇದನ್ನು ಮಾಡಬಹುದು ಎಂದು ಆಸೆ ಕೂಡಾ ಹುಟ್ಟಿಸ್ತಾರೆ. ಆರೋಗ್ಯವೂ ಚೆನ್ನಾಗಿರುತ್ತೆ. ದುಡ್ಡೂ ಸಿಗುತ್ತೆ ಅಂದ್ರೆ ಯಾರಿಗೆ ಬೇಡ ಹೇಳಿ.. ಅದರಲ್ಲೂ ಹೊರಗೆ ಕೆಲಸಕ್ಕೆ ಹೋಗದ, ಮನೆಯಲ್ಲಿರುವ ಗೃಹಿಣಿಯರು, ವಯಸ್ಸಾಗಿದ್ದು ನಿವೃತ್ತಿಯಾಗಿರುವವರು, ಯಾವುದೇ ಕೌಶಲ್ಯವಿಲ್ಲದ ನಿರುದ್ಯೋಗಿಗಳು ಇಂತಹವರ ಬಲೆಗೆ ಬಿದ್ದೂ ಬಿಡ್ತಾರೆ. ಆದರೆ.. ಎಚ್ಚರಿಕೆ.
ಡಾ.ಮಾಲಿನಿ ಸುತ್ತೂರು ಅವರ ಪ್ರಕಾರ ಈ ಹರ್ಬಲ್ ಜ್ಯೂಸು ಕುಡಿಯುವವರು ಶೀಘ್ರದಲ್ಲಿಯೇ ಕಿಡ್ನಿ ಅಥವಾ ಲಿವರ್ ದಾನ ಮಾಡುವವರನ್ನು ಈಗಲೇ ಹುಡುಕಿಟ್ಟುಕೊಳ್ಳಬೇಕು. ಏಕೆಂದರೆ.. ಇದು ಸಸ್ಯಜನ್ಯ ಅಲ್ಲ. ಕೆಮಿಕಲ್.
ಹರ್ಬಲ್ ಎಂದಾಕ್ಷಣ ಇದು ಸಸ್ಯಗಳಿಂದ ಮಾಡಿದ್ದು, ಆಯುರ್ವೇದ, ಸೈಡ್ ಎಫೆಕ್ಟ್ ಇರೋದಿಲ್ಲ ಎಂದು ನಂಬುವವರೇ ಹೆಚ್ಚು. ಆದರೆ ಈ ಜ್ಯೂಸುಗಳಲ್ಲಿ ಮಾರಣಾಂತಿಕ ವಿಷಕಾರಿ ಅಂಶಗಳಿವೆ. ಕೆಲವೇ ವರ್ಷಗಳಲ್ಲಿ ನರಳುವಂತೆ ಮಾಡಿಸುವ, ಮೂತ್ರಪಿಂಡ, ಯಕೃತ್ತು ಸಮಸ್ಯೆಗಳನ್ನು ತಂದೊಡ್ಡುವ ಅಪಾಯಗಳಿವೆ. ಕ್ಯಾನ್ಸರ್ನಂಥ ಮಹಾಮಾರಿಯೂ ದೇಹ ಹೊಕ್ಕಬಹುದು. ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ ಡಾ.ಮಾಲಿನಿ ಸುತ್ತೂರು.
ದಪ್ಪ ಇರುವವರಿಗೆ ಜಿಮ್ ಮಾಡುವುದು ಕಷ್ಟ, ಪ್ರತಿನಿತ್ಯ ವಾಕಿಂಗ್ಗೆ ಹೋಗುವುದೂ ಕಷ್ಟ. ಮನೆಯಲ್ಲಿ ಕೆಲಸ ಮಾಡಿಕೊಂಡು ಇರುವುದಕ್ಕೂ ಆಗುವುದಿಲ್ಲ. ಬೆವರು ಇಳಿಯಬಾರದು, ಆದರೆ ಸ್ಲಿಮ್ ಆಗಬೇಕು ಎಂದು ಆಸೆ ಪಡುವ ಬಹುತೇಕ ಮಂದಿ (ಹೆಚ್ಚಾಗಿ ಮಹಿಳೆಯರು) ಈ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಡಾ.ಮಾಲಿನಿ ಸುತ್ತೂರು.
ಇದನ್ನೊಂದು ಚೈನ್ ಲಿಂಕ್ ರೀತಿ ಮಾಡುವ ಹರ್ಬಲ್ ಜ್ಯೂಸ್ ಪ್ರಾಡಕ್ಟಿನವರು ನೀವು ತೆಗೆದುಕೊಳ್ಳಿ. ಇನ್ನೊಂದಷ್ಟು ಜನರನ್ನು ಸೇರಿಸಿ. ನಿಮಗೆ ಫ್ರೀ. ಅವರಿಗೆ ಮಾರಿ, ನೀವು ಲಾಭವನ್ನೂ ಮಾಡ್ಕೊಳ್ಳಿ ಅಂತ ಆಸೆ ಹುಟ್ಟಿಸ್ತಾರೆ. ಇದರಿಂದ ಹಬ್ಬುವುದು ರೋಗ. ಇದು ರೋಗ ಹರಡುವ ಚೈನ್ ಲಿಂಕ್ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಡಾ.ಮಾಲಿನಿ ಸುತ್ತೂರು. ಇದೆಲ್ಲವನ್ನೂ ಅವರು ಸವಿವರವಾಗಿ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ. ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ವಿಡಿಯೋ ಲಿಂಕ್ ಸಿಗುತ್ತದೆ.
https://www.youtube.com/watch?v=D6O3VtB6Qf4&t=1s