ಮೋಹನ್ ಲಾಲ್ ನಟನೆಯ ಎಂಪುರಾನ್ ಸಿನಿಮಾ ರಿಲೀಸ್ ಏನೋ ಆಗಿದೆ. ಲಾಲ್ ಸಿನಿಮಾದಲ್ಲಿ ಈ ಹಿಂದೆ ಕಾಣದಂತ ಅದ್ಧೂರಿತನ ಇದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಚಿತ್ರದಲ್ಲಿರೋದು ಲೂಸಿಫರ್ ಚಿತ್ರದ ಮುಂದುವರಿದ ಬಾಗ. ಆದರೆ ಚಿತ್ರ ಬಿಡುಗಡೆಯಾಗುವವರೆಗೂ ಇದು ಪೊಲಿಟಿಕಲ್ ಥ್ರಿಲ್ಲರ್ ಎಂದುಕೊಂಡಿದ್ದ ಪ್ರೇಕ್ಷಕರಿಗೆ ಎಂಪುರಾನ್ ಶಾಕ್ ಕೊಟ್ಟಿದೆ.
ಚಿತ್ರದ ಕಥೆ ಏನು..?
ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡುವ ಭಜರಂಗಿ ಬಾಭಾ, ಕೇಂದ್ರದಲ್ಲಿ ಮಂತ್ರಿಯಾಗುತ್ತಾನೆ. ಧರ್ಮ ದ್ವೇಷದಿಂದ ರಾಜಕೀಯ ಲಾಭ ಮಾಡಿಕೊಳ್ಳುತ್ತಾನೆ. ಬಲರಾಜ್ ಎಂಬ ರಾಜಕಾರಣಿಯಾಗುತ್ತಾನೆ. ಕೇರಳವನ್ನು ವಶಪಡಿಸಿಕೊಳ್ಳುವ ಸಲುವಾಗಿ ಕೇರಳ ಸಿಎಂ ಜತಿನ್ ರಾಮದಾಸ್ ಜೊತೆ ಕೈಜೋಡಿಸುತ್ತಾನೆ. ಈತನನ್ನು ಸಂಹಾರ ಮಾಡಲು ಲೂಸಿಫರ್ ಬರುವುದು ಚಿತ್ರದ ಕಥೆ.
ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಪೃಥ್ವಿರಾಜ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಅಭಿಮನ್ಯು ಸಿಂಗ್, ಕಿಶೋರ್.. ಹೀಗೆ ದೊಡ್ಡ ದೊಡ್ಡ ನಟರೇ ಇದ್ದಾರೆ.
ಆದರೆ ವಿವಾದ ಆಗಿರೋದು ಮುಸ್ಲಿಮರನ್ನು ಕೊಂದು ರಾಜಕೀಯ ಲಾಭ ಮಾಡುವ ಪಾತ್ರ ಇದೆಯಲ್ಲ, ಅದು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕೆಲವು ಬಿಜೆಪಿ ರಾಜಕಾರಣಿಗಳನ್ನು ಹೋಲುವಂತಿದೆ ಎನ್ನುವುದು. ವಿವಾದ ಆಗಿರುವುದೇ ಈ ಕಾರಣಕ್ಕೆ. ಮೋಹನ್ ಲಾಲ್ ವಿರುದ್ಧ ಹಿಂದೂ ಸಂಘಟನೆಗಳು ತಿರುಗಿ ಬೀಳುತ್ತಿರುವುದು ಹಾಗೂ ತಿರುಗಿ ಬಿದ್ದಿರೋದೂ ಈ ಕಾರಣಕ್ಕೆ.
ಇದೇ ಕಾರಣಕ್ಕಾಗಿ ಮೋಹನ್ ಲಾಲ್ ಮತ್ತು ಎಂಪುರನ್ ಚಿತ್ರತಂಡ ಮಹಮ್ಮದ್ ಕುಟ್ಟಿ ಅಂದರೆ ಮಮ್ಮೂಟ್ಟಿ, ಅಯ್ಯಪ್ಪ ಸ್ವಾಮಿ ವಿವಾದ ಸೃಷ್ಟಿಸಿತ್ತೇ ಎಂಬ ಅನುಮಾನವೂ ಮೂಡಿದೆ. ನಟ ಮೋಹನ್ ಲಾಲ್ ಮಾರ್ಚ್ 18ರಂದು ಶಬರಿಮಲೆಗೆ ಹೋಗಿ, ಮಮ್ಮೂಟ್ಟಿ ಹೆಸರಿನಲ್ಲಿ ಪೂಜೆ ಮಾಡಿಸಿ, ಅದು ವಿವಾದವಾಗಿತ್ತು. ವಿವಾದವೆಂದರೆ.. ವಿವಾದ ಏನಲ್ಲ. ಪತ್ರಕರ್ತನೊಬ್ಬ ವರಾತ ತೆಗೆದಿದ್ದ. ಮುಸ್ಲಿಮರಿಗೆ ಅಲ್ಲಾ ಒಬ್ಬನೇ ದೇವರು. ಬೇರೆ ದೇವರಿಗೆ ಪೂಜೆ ಮಾಡಿಸುವುದು ಅವಮಾನ, ಅಪರಾಧ ಎಂದೆಲ್ಲ ಕಿರಿಕ್ ಮಾಡಿದ್ದ. ವಿಶೇಷ ಎಂದರೆ.. ಆ ಪತ್ರಕರ್ತನನ್ನು ಹಿಂದೂಗಳೇ ತರಾಟೆಗೆ ತೆಗೆದುಕೊಂಡಿದ್ದರು. ಈಗ ನೋಡಿದರೆ.. ಇಡೀ ಚಿತ್ರವೇ ಹಿಂದೂಗಳನ್ನು, ಹಿಂದೂ ಬಾಬಾಗಳನ್ನು ಮುಸ್ಲಿಂ ವಿರೋಧಿ, ಧರ್ಮಕ್ಕಾಗಿ, ರಾಜಕೀಯಕ್ಕಾಗಿ ಮುಸ್ಲಿಮರನ್ನು ಕೊಲ್ಲುತ್ತಾರೆ ಎಂಬಂತೆ ಬಿಂಬಿಸಲಾಗಿದೆ. ಇದು ಮುಂಜಾಗ್ರತಾ ಕ್ರಮವಾಗಿ ಹಿಂದೂಗಳನ್ನು ಕೂಡಾ ತಮ್ಮ ಜೊತೆ ಇಟ್ಟುಕೊಳ್ಳುವ ಹುನ್ನಾರ ಎಂದು ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಎಂಪುರಾನ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೋಹನ್ ಲಾಲ್ ವೃತ್ತಿಜೀವನದಲ್ಲೇ ಕಂಡು ಕೇಳರಿಯದ ಓಪನಿಂಗ್ ಇದು.ಮೋಹನ್ ಲಾಲ್ ಸಿನಿಮಾ ಫಸ್ಟ್ ಡೇ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ. ಮೋಹಲ್ ಲಾಲ್ ನಟನೆಯ ಬಗ್ಗೆ ಎರಡು ಮಾತಿಲ್ಲ. ಆದರೆ.. ಇದು ಪ್ರೊಪಗಾಂಡ ಸಿನಿಮಾ, ಲಾಲ್ ಸಿನಿಮಾ ಅಲ್ಲ ಎಂಬ ವಾದ ಎಲ್ಲೆಡೆ ಮೊಳಗುತ್ತಿದೆ. ವಿವಾದಕ್ಕೆ ಕಾರಣವೇ ಇದು.