ಪುನೀತ್ ರಾಜ್ ಕುಮಾರ್ 50ನೇ ಹುಟ್ಟುಹಬ್ಬಕ್ಕೆ ರಿ-ರಿಲೀಸ್ ಆಗಿರುವ ಅಪ್ಪು ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಸಾವಿರಾರು ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಿ, ಹಿಂದಿನ ಚಿತ್ರವನ್ನು ನೋಡಿ ಖುಷಿಪಡುತ್ತಿದ್ದಾರೆ. ಅಶ್ವಿನಿ ಪುನೀತ್, ಮಕ್ಕಳು, ಯುವ ಮತ್ತು ವಿನಯ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ರಕ್ಷಿತಾ, ರಮ್ಯಾ.. ಹೀಗೆ ಅಪ್ಪು ಸಿನಿಮಾವನ್ನು ಥಿಯೇಟರಿಗೆ ಹೋಗಿ ನೋಡಿದವರ ಸಂಖ್ಯೆ ದೊಡ್ಡದು. ಆದರೆ ಶಿವಣ್ಣ ಹೋಗಿಲ್ಲ. ಯಾಕೆ..
ಅಪ್ಪು ಸಿನಿಮಾವನ್ನು ಯಾಕೆ ನೋಡೋದಕ್ಕೆ ಬಂದಿಲ್ಲ ಅಂತ ಕೇಳ್ತಿದ್ದಾರೆ. ಆದರೆ ಬಂದು ನೋಡೋದಕ್ಕೆ ಅಷ್ಟು ಧೈರ್ಯ ಇಲ್ಲ. ಅದು ಅವನ ಮೊದಲ ಸಿನಿಮಾ. ಥಿಯೇಟರ್‌ನಲ್ಲಿ ನೋಡೋದಕ್ಕೆ ತುಂಬ ನೋವಾಗುತ್ತದೆ ಎಂದಿರುವ ಶಿವಣ್ಣ ಅಪ್ಪು ಸಿನಿಮಾ ಹುಟ್ಟಿದ ಕಥೆಯನ್ನು ನೆನಪಿಸಿಕೊಂಡಿದ್ದಾರೆ.
ʻʻಯುವರಾಜ ಸಿನಿಮಾ ಟೈಂನಲ್ಲಿಯೇ ಅಪ್ಪು ಕಥೆ ಕೇಳಿ ಇಷ್ಟಪಟ್ಟೆ. ನಂತರ ಪುರಿ ಜಗನ್ನಾಥ್ ಅವರನ್ನು ಕರೆತಂದು ಅಪ್ಪ, ಅಮ್ಮ, ಅಪ್ಪಣ್ಣ (ವರದಪ್ಪ)ನಿಗೆ ಕೇಳಿಸಿ ಓಕೆ ಎಂದ ಮೇಲೆ ಚಿತ್ರ ಶುರುವಾಯ್ತು. ಅಪ್ಪು ಎಂದು ಟೈಟಲ್ ಕೊಟ್ಟಿದ್ದೂ ನಾನೇ. ನನ್ನ ತಮ್ಮನನ್ನು ನಾನು ತುಂಬ ಮಿಸ್ ಮಾಡಿಕೊಳ್ಳುತ್ತೇನೆʼʼ ಎಂದೆಲ್ಲ ಹೇಳ್ಕೊಂಡಿದ್ದಾರೆ ಶಿವಣ್ಣ.
ಶಿವಣ್ಣ ಮತ್ತು ಪುನೀತ್ ಅವರಿಗೆ 13 ವರ್ಷಗಳ ಅಂತರವಿತ್ತು. ಹೀಗಾಗಿ ಶಿವಣ್ಣನಿಗೆ ಪುನೀತ್ ತಮ್ಮನಾಗಿದ್ದರೂ, ಶಿವಣ್ಣ ತಮ್ಮನನ್ನು ಮಗನಂತೆ ನೋಡುತ್ತಿದ್ದರು. ಶಿವಣ್ಣ ಇಂದಿಗೂ ಪುನೀತ್ ನಿಧನದ ಆಘಾತದಿಂದ ಹೊರಬಂದಿಲ್ಲ. ಪುನೀತ್ ನೆನಪಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಎಷ್ಟು ಸಾಧ್ಯವೋ ಅಷ್ಟು ಅವಾಯ್ಡ್ ಮಾಡುತ್ತಾರೆ. ಅಲ್ಲದೆ ಪುನೀತ್ ನಿಧನರಾದ ದಿನ ಭಜರಂಗಿ 02 ರಿಲೀಸ್ ಆಗಿತ್ತು.
ಅಣ್ಣನಿಗಾಗಿ ತಮ್ಮ ಬಾಡಿಗಾರ್ಡ್ʻಗಳನ್ನೂ ಅಪ್ಪು, ಶಿವಣ್ಣನ ಜೊತೆ ಕಳಿಸಿದ್ದರು. ಅವತ್ತು ಅಪ್ಪು ಸಹಾಯಕರು ಅವನ ಜೊತೆಯಲ್ಲೇ ಇದ್ದರೆ ಬದುಕಿಸಿಕೊಳ್ಳಬಹುದಿತ್ತು ಎಂದು ಈಗಲೂ ನೋವು ತೋಡಿಕೊಳ್ಳುತ್ತಾರಂತೆ ಶಿವಣ್ಣ. ಇದು ಶಿವಣ್ಣನ ಕಥೆಯಾದರೆ, ಅಪ್ಪು ಸಿನಿಮಾ ಬಾಕ್ಸಾಫೀಸ್ ಸ್ಟೋರಿಯೇ ಬೇರೆ.
ಎಷ್ಟಾಯ್ತು ಅಪ್ಪು ಕಲೆಕ್ಷನ್..?
ಅಪ್ಪು 2002ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. 23 ವರ್ಷಗಳಾಗಿವೆ. ಅಪ್ಪು, ಆಗಿನ ಕಾಲಕ್ಕೆ ಸೂಪರ್ ಹಿಟ್. ಕನ್ನಡದ ನಂತರ ತೆಲುಗು, ತಮಿಳು, ಬೆಂಗಾಲಿ ಭಾಷೆಗಳಲ್ಲಿ ರೀಮೇಕ್ ಆಗಿ ಎಲ್ಲ ಕಡೆ ಸೂಪರ್ ಹಿಟ್ ಎನಿಸಿಕೊಂಡಿದ್ದ ಸಿನಿಮಾ. ವಿಶೇಷ ಎಂದರೆ ಅಪ್ಪು ಹುಟ್ಟುಹಬ್ಬದ ಸ್ಪೆಷಲ್ ಗಿಫ್ಟ್ ಆಗಿ ರಿಲೀಸ್ ಆಗಿದ್ದ ಅಪ್ಪು ಚಿತ್ರ, ಬಾಕ್ಸಾಫೀಸಿನಲ್ಲಿ ದಾಖಲೆ ಬರೆದಿದೆ.
ಮೊದಲ ದಿನ ಫ್ಯಾನ್ ಶೋಗಳನ್ನು ಮುಂಜಾನೆಯೇ ಆಯೋಜನೆ ಮಾಡಲಾಗಿತ್ತು. ಇದರಿಂದ ಚಿತ್ರಕ್ಕೆ ಸಾಕಷ್ಟು ಹಣ ಹರಿದು ಬಂದಿದೆ. ‘ಅಪ್ಪು’ ಸಿನಿಮಾದ ಭಾನುವಾರದ ಕಲೆಕ್ಷನ್ ಸುಮಾರು 30 ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ಆರಂಭದ ದಿನಗಳ ಗಳಿಕೆ 4 ದಿನಗಳಿಗೆ 1 ಕೋಟಿ ರೂಪಾಯಿ ದಾಟಿದೆ ಎನ್ನುವುದು ವರದಿ. 23 ವರ್ಷಗಳ ಹಿಂದಿನ ಚಿತ್ರವೊಂದು ಈ ಮಟ್ಟಿನ ಕಲೆಕ್ಷನ್ ಮಾಡುವುದು ದಾಖಲೆಯೇ ಸರಿ.
ಕೆಲವು ಅಭಿಮಾನಿಗಳು ಕಂಪ್ಲೀಟ್ ಶೋ ಬುಕ್ ಮಾಡಿ, ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡ್ತಿದ್ದರೆ, ಥಿಯೇಟರುಗಳ ಎದುರು ಸಂಭ್ರಮಾಚರಣೆ ಜೋರಾಗಿದೆ. ಮಾರ್ಚ್ 18 ಅಪ್ಪು ಹುಟ್ಟುಹಬ್ಬ. ಇದಾದ ಮೇಲೆ ಕಲೆಕ್ಷನ್ ಡೌನ್ ಆಗಲಿದೆ ಎನ್ನುತ್ತಾರೆ ಚಿತ್ರಮಂದಿರ ಮಾಲೀಕರು.