ಸ್ಥೂಲಕಾಯಿಗಳು, ಬೊಜ್ಜು ದೇಹದವರು, ಹೊಟ್ಟೆ ಸುತ್ತ ಟೈರ್ ಇರೋವ್ರು.. ಯಾರೇ ಆಗಲಿ, ಸಣ್ಣಗಾಗಬೇಕು ಎಂದು ಅಂದ್ಕೊಳ್ತಾರೆ. ಆದರೆ.. ಬೆಳ್ ಬೆಳಗ್ಗೇನೆ ಎದ್ದೇಳ್ಬೇಕು, ಗಂಟೆಗಟ್ಟಲೆ ಓಡ್ಬೇಕು, ವಾಕ್ ಮಾಡ್ಬೇಕು, ಯೋಗ ಮಾಡ್ಬೇಕು, ವ್ಯಾಯಾಮ ಮಾಡ್ಬೇಕು, ಬೆವರು ಸುರೀಬೇಕು.. ಅನ್ನೋದನ್ನೆಲ್ಲ ಕೇಳೀನೇ ಉಸ್ಸಪ್ಪಾ ಅಂದ್ ಬಿಡ್ತಾರೆ. ಸುಖಕ್ಕೆ ಒಗ್ಗಿದ ದೇಹವನ್ನು ವ್ಯಾಯಾಮಕ್ಕೆ ಪಳಗಿಸೋದು ಅಷ್ಟು ಸುಲಭ ಅಲ್ಲ. ಆದರೆ ವ್ಯಾಯಾಮ ಮಾಡದೆಯೂ ಕೇವಲ ಡಯಟ್ ಮೂಲಕ ಸಣ್ಣಗಾಗಬಹುದು.
ಕೆಲವರಿಗೆ ವಯಸ್ಸಾದಂತೆ ದೇಹದಲ್ಲಿ ಶಕ್ತಿ ಕಡಿಮೆಯಾಗುವುದಲ್ಲದೆ ದೇಹದ ತೂಕವೂ ಹೆಚ್ಚುತ್ತದೆ. ಮೊಣಕಾಲು ನೋವು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಅಧಿಕ ತೂಕದಿಂದಾಗಿ ಹೆಚ್ಚು ದೂರ ನಡೆಯಲು ಕಷ್ಟವಾಗುತ್ತದೆ. ವಿಶೇಷವಾಗಿ ವಯಸ್ಸಾದ ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯ. ವ್ಯಾಯಾಮ ಮಾಡಲು ದೇಹವು ಸಹಕರಿಸುವುದಿಲ್ಲ. ಅಂತಹವರು ದಿನನಿತ್ಯದ ಆಹಾರ ಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ವ್ಯಾಯಾಮವಿಲ್ಲದೆ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಮೊದಲನೆಯದಾಗಿ, ತೂಕ ಇಳಿಸಿಕೊಳ್ಳಲು ಬಯಸುವವರು ಕಟ್ಟುನಿಟ್ಟಾದ ಆಹಾರ ಕ್ರಮಕ್ಕೆ ಒಗ್ಗಿಕೊಳ್ಳಬೇಕು. ಮೊದಲು ಸಿಕ್ಕ ಸಿಕ್ಕಿದ್ದನ್ನೆಲ್ಲ ತಿನ್ನುವುದು ಬಿಡಬೇಕು. ದೈನಂದಿನ ಆಹಾರದಲ್ಲಿ ಸೂಕ್ಷ್ಮ ಪೋಷಕಾಂಶಗಳು, ಫೈಬರ್ ಮತ್ತು ಪ್ರೋಟೀನ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
ಬೇಳೆಕಾಳುಗಳಿಂದ ಮಾಡಿದ ಉಪಹಾರ, ಮಧ್ಯಾಹ್ನದ ಊಟದಲ್ಲಿ.. 60 ಗ್ರಾಂ ಬೇಯಿಸಿದ ಅನ್ನ ಮತ್ತು 200 ಗ್ರಾಂ ತರಕಾರಿಯನ್ನು ತಿನ್ನಬೇಕು. ಅದನ್ನು ಊಟಕ್ಕೆ ಮುಂಚೆ ಅಥವಾ ಊಟ ಆದ ಮೇಲೆ ಎನ್ನುವುದಲ್ಲ, ಇದೇ ಊಟ, ಇಷ್ಟೇ ತಿಂಡಿ. ಆರಂಭದಲ್ಲಿ ಸುಸ್ತು ಕಾಡುತ್ತದೆ. ದೇಹ ಅದಕ್ಕೆ ಒಗ್ಗಿಕೊಳ್ಳುವವರೆಗೆ ಸಂಯಮ ಇರಬೇಕು.
ಸಂಜೆಯ ವೇಳೆ ರಾಗಿ ಆಹಾರ ಪದಾರ್ಥ ಮತ್ತು ಹಣ್ಣುಗಳನ್ನು ತಿಂಡಿಯಾಗಿ ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತವೆ. ವಿವಿಧ ಧಾನ್ಯಗಳ ಹಿಟ್ಟಿನ ಚಪಾತಿಗಳನ್ನು ಹಸಿರು ತರಕಾರಿಗಳೊಂದಿಗೆ ಒಟ್ಟಿಗೆ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಎಲ್ಲಕ್ಕಿಂತ ಹೆಚ್ಚಾಗಿ ನೀವು ತೂಕ ಇಳಿಸಿಕೊಳ್ಳಲು ಆಹಾರಕ್ರಮವನ್ನು ಪ್ರಾರಂಭಿಸಲು ಬಯಸಿದಾಗ ನಿಮ್ಮ ಎತ್ತರ ಮತ್ತು ತೂಕವನ್ನು ನೀವು ಮೊದಲು ಪರಿಶೀಲಿಸಬೇಕು. ಆ ನಂತರ ಯಾವ ಪದಾರ್ಥಗಳನ್ನು ಯಾವ ಪ್ರಮಾಣದಲ್ಲಿ ಸೇವಿಸಬಹುದು ಎಂಬುದನ್ನು ಪ್ಲಾನ್ ಮಾಡಬೇಕು.
ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ದೂರವಿಟ್ಟಿರಬೇಕು. ಪ್ರತಿದಿನ ಸಾಕಷ್ಟು ನೀರು ಕುಡಿಯುತ್ತಿರಬೇಕು. ವ್ಯಾಯಾಮ ಅಗತ್ಯ ಇಲ್ಲ ಎಂದ ಕೂಡಲೇ ದಿನವಿಡೀ ಕುಳಿತೋ, ಮಲಗಿಯೋ ಟೈಂಪಾಸ್ ಮಾಡ್ತಿದ್ರೆ ಎಷ್ಟೇ ಡಯಟ್ ಮಾಡಿದ್ರೂ ಸ್ಲಿಮ್ ಆಗಲ್ಲ. ಈ ರೀತಿ ಡಯಟ್ ಮಾಡೋದ್ರ ಜೊತೆಗೆ ಸಣ್ಣ ಸಣ್ಣ ವ್ಯಾಯಾಮ ಮಾಡ್ತಾ ಹೋದ್ರೆ, ಬೇಗ ಇಂಪ್ಯಾಕ್ಟ್ ಆಗುತ್ತೆ.
ದಿನಕ್ಕೆ ಕನಿಷ್ಠ ೧೫೦ ಗ್ರಾಂ ಹಣ್ಣು, ಮೊಳಕೆಯೊಡೆದ ಹೆಸರು ಕಾಳು, ಅಲಸಂದಿ, ತರಕಾರಿ ಮತ್ತು ಮೊಳಕೆಯೊಡೆದ ಕಾಳುಗಳ ಸಲಾಡ್ ಸೇವಿಸಬೇಕು. ಹೀಗೆ ಮಾಡಿದರೆ ಹಸಿವು ನಿಯಂತ್ರಣದಲ್ಲಿರುತ್ತದೆ. ಬೀನ್ಸ್, ಕ್ಯಾರೆಟ್, ಬೆಂಡೆಕಾಯಿ ಮತ್ತು ಹಸಿರು ತರಕಾರಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಮಾಂಸಾಹಾರಿಗಳಿಗೆ 150 ಗ್ರಾಂ ಮೀನು, 100 ಗ್ರಾಂ ಕೋಳಿ ಮತ್ತು ಕೆಂಪು ಮಾಂಸವನ್ನು ಕಡಿಮೆ ಎಣ್ಣೆಯಿಂದ ಬೇಯಿಸಿ ತಿನ್ನುವುದು ಒಳ್ಳೆಯದು. ಗ್ರೇವಿಯನ್ನು ದೂರ ಇಟ್ಟಿರಬೇಕು. ಪ್ರತಿದಿನ ಕನಿಷ್ಠ ಹತ್ತು ಸಾವಿರ ಹೆಜ್ಜೆಗಳ ವಾಕಿಂಗ್ ಮಾಡಬೇಕು.
ಹೀಗೆಲ್ಲ ಮಾಡಿದರೆ ಸ್ಲಿಮ್ ಆಗಬಹುದು. ಆದರೆ ಇದು ದೀರ್ಘಕಾಲ ಬೇಡುತ್ತದೆ. ವಾರವಿಡೀ ಡಯಟ್ ಮಾಡಿ, ಒಂದ್ ದಿನ ಸಿಕ್ಕಿದ್ದನ್ನೆಲ್ಲ ತಿಂದು ಮಲಗಿಬಿಟ್ರೆ, ವಾರವಿಡೀ ಮಾಡಿದ್ದೆಲ್ಲ ವೇಸ್ಟ್.