ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ. ವಯಸ್ಸು 41. ಚಿತ್ರರಂಗದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಆಗಿರುವ ರಮ್ಯಾ, ಚಂದನವನದ ಮೋಹಕ ತಾರೆ, ಸ್ಯಾಂಡಲ್ʻವುಡ್ ಕ್ವೀನ್ ಎಂದೇ ಫೇಮಸ್. ಆಕ್ಟಿಂಗ್ ಮಾಡಿದ್ದು ಒಂದೆರಡು ಸೀನ್ಗಳಲಿಲ ಬಮದು ಹೋಗಿದ್ದ ಹಾಸ್ಟೆಲ್ ಹುಡುಗರು ಚಿತ್ರ ಬಿಟ್ಟರೆ, ನಟಿಸಿ ದಶಕಗಳೇ ಕಳೆದು ಹೋಗಿವೆ.
2012ರಲ್ಲಿ ಕಠಾರಿ ವೀರ ಸುರಸುಂದರಾಂಗಿ ಚಿತ್ರವೇ ಕೊನೆ. (ಅದಾದ ಮೇಲೆ ಆರ್ಯನ್ ಹಾಗೂ ನಾಗರಹಾವು ರಿಲೀಸ್ ಆದವಾದರೂ, ಅವು ಈ ಹಿಂದೆ ಚಿತ್ರೀಕರಣವಾಗಿದ್ದ ಚಿತ್ರಗಳು) ರಮ್ಯಾ ಅದಾದ ಮೇಲೆ ರಾಜಕೀಯಕ್ಕೆ ಹೋಗಿ ಬ್ಯುಸಿಯಾಗಿಬಿಟ್ಟರು. ಆದರೆ, ಈಗಲೂ ಕನ್ನಡ ಚಿತ್ರರಸಿಕರ ಹಾರ್ಟ್ ಫೇವರಿಟ್. ವಯಸ್ಸು 41 ದಾಟಿದ್ದರೂ.. ಮದುವೆ ಆಗಿಲ್ಲ. ಹೀಗಾಗಿ ರಮ್ಯಾ ಅವರು ಮದುವೆ ಆಗ್ತಾರಂತೆ ಅನ್ನೋ ಸುದ್ದಿಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ. ಈ ಬಾರಿಯೂ ಮತ್ತೊಮ್ಮೆ ಸುದ್ದಿಯಾಗಿದೆ.
ಇದೀಗ ರಮ್ಯಾ ಅವರು ಮುಂಬೈನ ಉದ್ಯಮಿಯೊಬ್ಬರ ಜೊತೆ ಮದುವೆ ಆಗ್ತಾರಂತೆ ಅನ್ನೋ ಸುದ್ದಿ ಬರುತ್ತಿದೆ. ಉದ್ಯಮಿ. ಆತನ ಹೆಸರು ಪ್ರಭಾರ್ ಚೌಧರಿ ಎಂದೂ ಕೂಡಾ ಸುದ್ದಿಯಾಗಿತ್ತು. ನವೆಂಬರ್ʻನಲ್ಲಿ ಮದುವೆ. ಬೆಂಗಳೂರಿನ ದೊಡ್ಡ ಹೋಟೆಲ್ಲಿನಲ್ಲಿ ನಿಶ್ಚಿತಾರ್ಥ ಎಂದು ಡೇಟ್ ಮತ್ತು ಪ್ಲೇಸ್ ಕೂಡಾ ಫಿಕ್ಸ್ ಮಾಡಿದ್ದರು.
ಕೊನೆಗೆ ಎಂದಿನಂತೆ.. ಅಯ್ಯೋ ಹೌದಾ.. ನಂಗೇ ಗೊತ್ತಿಲ್ಲವಲ್ಲ. ಹುಡುಗ ಯಾರಂತೆ ಅನ್ನೋ ಮೂಲಕ ರಮ್ಯಾ ಈ ಸುದ್ದಿಗೆ ತಣ್ಣೀರು ಎರಚಿದ್ದಾರೆ. ರಮ್ಯಾ ಅವರಿಗೇ ಗೊತ್ತಿಲ್ಲದೆ ಈ ಸುದ್ದಿ ಹಬ್ಬಿದ್ದು ಹೇಗೆ ಅನ್ನೋದು ಮಾತ್ರ ನಿಗೂಢ ರಹಸ್ಯ. ಆದರೆ, ವದಂತಿಗಳು ಹಬ್ಬಿಸುವವರು ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ ಅನ್ನೋ ರೀತಿ ವರ್ತಿಸ್ತಾರೆ. ಸದ್ಯದ ಮಟ್ಟಿಗೇ ರಮ್ಯಾ ಈಗಲೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್.
ರಮ್ಯಾ ಅವರು ಮೊದಲು ಪ್ರೀತಿಯಲ್ಲಿ ಬಿದ್ದಿದ್ದು ರಫೇಲ್ ಎನ್ನುವವರ ಜೊತೆ. ಪೋರ್ಚುಗಲ್ ಉದ್ಯಮಿಯಾಗಿದ್ದ ರಫೇಲ್ ಜೊತೆ ಮದುವೆ ಅಗುವ ಸುದ್ದಿ ಹರಿದಾಡಿದ್ದು ರಾಜಕೀಯಕ್ಕೆ ಹೋಗುವ ಮುನ್ನ. ನಟಿ ರಮ್ಯಾ ಕೂಡಾ ಅದನ್ನು ಒಪ್ಪಿಕೊಂಡಿದ್ದರು. ಆದರೆ, ರಫೇಲ್ ಮತ್ತು ರಮ್ಯಾ ಮಧ್ಯೆ ಏನಾಯ್ತೋ ಗೊತ್ತಿಲ್ಲ. ರಫೇಲ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟರು. ಹಲವು ವರ್ಷಗಳ ಪ್ರೀತಿ ಸ್ತಬ್ಧವಾಗಿದ್ದು ಏಕೆ ಮತ್ತು ಹೇಗೆ ಅನ್ನೋದು ಇವತ್ತಿಗೂ ಗೊತ್ತಿಲ್ಲ.
ತಮ್ಮ ಪರ್ಸನಲ್ ವಿಷಯಗಳ ಬಗ್ಗೆ ಕಟ್ಟುನಿಟ್ಟಾಗಿ ಇರುವ ರಮ್ಯಾ, ಯಾವಾಗ ಮಾತನಾಡಬೇಕು ಅನ್ನೋದಕ್ಕಿಂತ ಹೆಚ್ಚಾಗಿ, ಯಾವಾಗ ಮಾತನಾಡಬಾರದು ಅನ್ನೋದನ್ನು ಅದ್ಭುತವಾಗಿ ತಿಳಿದುಕೊಂಡಿದ್ದಾರೆ. ಆದರೆ, ರಫೇಲ್ ಪ್ರಕರಣವನ್ನು ನಾಜೂಕಾಗಿ ನಿಭಾಯಿಸಿದ ರಮ್ಯಾ, ಆ ವಿಷಯ ಮತ್ತೆ ಸುದ್ದಿಯಾಗದಂತೆ ನೋಡಿಕೊಂಡಿದ್ದಾರೆ. ರಫೇಲ್, ಬೇರೊಬ್ಬರನ್ನು ಮದುವೆಯಾಗಿ ಹಾಯಾಗಿದ್ದಾರೆ ಎನ್ನುವ ಸುದ್ದಿ ಇದೆ.
ಈ ನಡುವೆ ರಮ್ಯಾ.. ಅವರನ್ನು ಮದುವೆಯಾಗ್ತಾರಂತೆ.. ಇವರನ್ನು ಮದುವೆಯಾಗ್ತಾರಂತೆ ಎಂಬ ಸುದ್ದಿಗಳು ಚಾಲ್ತಿಯಲ್ಲಿದ್ದೇ ಇವೆ.