ಬಹಳಷ್ಟು ಜನ ದುಡ್ಡು, ಶ್ರೀಮಂತಿಕೆಯ ಕನಸು ಕಾಣುತ್ತಲೇ ಇರುತ್ತಾರೆ. ನಿಜ ಜೀವನದಲ್ಲಿ ಆಗುವುದೋ.. ಇಲ್ಲವೋ.. ಆದರೆ ಕನಸು ಕಾಣೋದಕ್ಕೇನೂ ದುಡ್ಡು ಬೇಕಾಗಿಲ್ಲವಲ್ಲ.. ಆದರೆ ಕನಸಿನಲ್ಲಿ ಹಣ ಕಾಣಿಸಿದರೆ.. ಅದರ ಅರ್ಥ, ಸಂದೇಶವೇ ಬೇರೆ ಇದೆ. ಹಣಕ್ಕೆ ಸಂಬಂಧಿಸಿದ ಕನಸುಗಳಲ್ಲಿ ಕೆಲವೊಂದು ನಿಮಗೆ ಶುಭ ಸೂಚನೆ ನೀಡಿದರೆ, ಇನ್ನು ಕೆಲವು ಅಶುಭ ಸೂಚನೆಯನ್ನು ನೀಡುತ್ತವೆ. ಏಕೆಂದರೆ ಒಂದೊಂದು ಕನಸಿಗೂ ಒಂದೊಂದು ಅರ್ಥ ಇದೆ. ಸುಮ್ಮನೆ ದುಡ್ಡಿನ ರಾಶಿ ನೋಡುವುದು, ಕಾಣುವುದು.. ಇವೆಲ್ಲ ಮನಸ್ಸಿನ ಆಸೆಗಳಷ್ಟೇ. ಇವುಗಳಿಗೆ ವಿಶೇಷ ಅರ್ಥವಿಲ್ಲ. ಆದರೆ..
ಯಾರಿಂದಲೋ ಹಣ ಪಡೆಯುತ್ತಿರುವ ಕನಸು ಕಂಡರೆ..
ಸ್ವಪ್ನ ಶಾಸ್ತ್ರದಲ್ಲಿ ಅಂತಹ ಕನಸುಗಳನ್ನು ಅತ್ಯಂತ ಮಂಗಳಕರವೆಂದು ಉಲ್ಲೇಖಿಸಲಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ಈ ರೀತಿಯ ಕನಸು ಕಾಣುತ್ತಿದ್ದರೆ, ಪದೇ ಪದೇ ಈ ರೀತಿ ಯಾರಾದರೂ ನಿಮಗೆ ಹಣ ಕೊಡುತ್ತಿರುವ ಕನಸು ಬೀಳುತ್ತಿದ್ದರೆ, ಶೀಘ್ರದಲ್ಲೇ ನಿಮಗೆ ದೊಡ್ಡ ಮೊತ್ತದ ಲಾಭ ಬರಲಿದೆ ಎಂದರ್ಥವಂತೆ. ನಿಮಗೆ ಶೀಘ್ರದಲ್ಲೇ ಹಠಾತ್ ಆರ್ಥಿಕ ಲಾಭವಾಗುತ್ತದೆ ಎಂಬ ಸಂದೇಶವಂತೆ. ಒಂದು ವೇಳೆ ದೀರ್ಘಾವಧಿಯಿಂದ ಆರ್ಥಿಕ ಬಿಕ್ಕಟ್ಟನ್ನು ಅಥವಾ ಹಣದ ಸಮಸ್ಯೆ ಎದುರಿಸುತ್ತಿರುವ ಸಮಯದಲ್ಲಿ ಇಂತಹ ಕನಸುಗಳು ಬಿದ್ದರೆ ನೀವು ಆ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳುತ್ತೀರಿ ಎಂಬುದರ ಅರ್ಥ ಇಂತಹ ಕನಸು.
ಹರಿದ ನೋಟುಗಳು ಕನಸಲ್ಲೂ ಬರುವುದು ಬೇಡ..
ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ನೀವು ಹರಿದ ನೋಟುಗಳನ್ನು ನೋಡಿದರೆ ಅದು ಶುಭವಲ್ಲ. ಮಂಗಳಕರವಲ್ಲ. ಕನಸಿನಲ್ಲಿ ಹರಿದು ಹೋದ ನೋಟನ್ನು ನೋಡಿದರೆ ನಿಮ್ಮ ಜೀವನದ ಮುಂಬರುವ ಸಮಯವು ನಿಮಗೆ ತುಂಬಾನೇ ಕಷ್ಟಕರವಾಗಿರುತ್ತದೆ ಎಂದರ್ಥ. ಇದರಿಂದಾಗಿ ನೀವು ವೃತ್ತಿಗೆ ಸಂಬಂಧಿಸಿದ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಇಂತಹ ಕನಸುಗಳು ಬಿದ್ದರೆ ತಕ್ಷಣ ಅಗತ್ಯವಿರುವ, ಅನಿವಾರ್ಯತೆ ಇರುವ ವ್ಯಕ್ತಿಗಳಿಗೆ ಸಹಾಯ ಮಾಡಬೇಕು ಎನ್ನುತ್ತದೆ ಶಾಸ್ತ್ರ. ಈ ರೀತಿಯ ದಾನ, ಸಹಾಯದಿಂದ ಸಮಸ್ಯೆ ನಿವಾರಣೆಯಾಗದೇ ಇರಬಹುದು, ಆದರೆ ತೀವ್ರತೆಯಂತೂ ಕಡಿಮೆ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ನಿಮ್ಮ ಹಣವನ್ನು ಯಾರೋ ಕದಿಯುತ್ತಿದ್ದರೆ..
ನಿಜ ಜೀವನದಲ್ಲಿ ಹೀಗೇನಾದರೂ ಆದರೆ.. ಜೀವನ ಕಷ್ಟಕರವಾಗುತ್ತದೆ ಎನ್ನುವುದೇನೋ ನಿಜ. ಆದರೆ ಕನಸಿನಲ್ಲಿ ಈ ರೀತಿ ಸಂಭವಿಸಿದರೆ ಖುಷಿ ಪಡಿ. ಸ್ವಪ್ನ ಶಾಸ್ತ್ರದ ಪ್ರಕಾರ ಇದು ಮಂಗಳಕರ. ಅಂತಹ ಕನಸುಗಳನ್ನು ನೋಡುವುದು ಎಂದರೆ ನೀವು ದೊಡ್ಡ ಪ್ರಮಾಣದ ಹಣವನ್ನು ಸ್ವೀಕರಿಸುತ್ತೀರಿ ಎಂದರ್ಥ. ಹಾಗೆಯೇ ಬಹಳ ದಿನಗಳಿಂದ ಬಾಕಿಯಿದ್ದ ನಿಮ್ಮ ಕೆಲಸಗಳು ಈಗ ಪೂರ್ಣಗೊಳ್ಳಲಿವೆ ಎಂದೂ ಅರ್ಥ. ಇಂತಹ ಕನಸುಗಳು ಬಿದ್ದರೆ ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳೋ ಮುನ್ನ, ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡಿ.
ನೀವೇ ಹಣವನ್ನು ಕದಿಯುವಂತಹ ಕನಸು ಬಿದ್ದರೆ, ಅದು ಒಳ್ಳೆಯ ಸೂಚನೆ ಅಲ್ಲ. ತಕ್ಷಣ ಮನೆ ದೇವರ ಪೂಜೆ ಮಾಡಿಸಿ, ಪ್ರಾರ್ಥನೆ ಮಾಡಿಕೊಳ್ಳಿ.
ಚಿನ್ನದ ನಾಣ್ಯಗಳು ಹೊಳೆಯುತ್ತಿರುವ ಕನಸು ಕಂಡರೆ..
ಇಂತಹ ಕನಸುಗಳು ಶುಭವೂ ಅಲ್ಲ. ಅಶುಭವೂ ಅಲ್ಲ. ದುಡ್ಡಿನ ರಾಶಿ ಅಥವಾ ಚಿನ್ನದ ನಾಣ್ಯಗಳು ಕನಸಿನಲ್ಲಿ ಕಂಡರೆ.. ಅದು ಮುಂದೆ ಎದುರಾಗು ಅಶುಭ, ಸಮಸ್ಯೆಗಳ ಸೂಚನೆ ಎಂದೇ ತಿಳಿದುಕೊಳ್ಳಬೇಕು. ಹೊಳೆಯುತ್ತಿರುವ ನಾಣ್ಯದ ಕನಸುಗಳು ನಿಮಗೆ ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಅಥವಾ ತೊಂದರೆಗಳ ಕುರಿತು ಹೇಳುತ್ತದೆ. ನಿಮ್ಮ ಮುಂದಿನ ದಿನಗಳು ನೋವಿನಿಂದ ಕೂಡಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಇದರಿಂದಾಗಿ ನೀವು ಆರ್ಥಿಕ ನಷ್ಟವನ್ನು ಎದುರಿಸುವಂತಾಗಬಹುದು.