ಛತ್ರಪತಿ ಶಿವಾಜಿ. ಈ ಹೆಸರು ಕೇಳಿದರೆ ಮಹಾರಾಷ್ಟ್ರ ಹಾಗೂ ಉತ್ತರ ಭಾರತೀಯರು ಹೆಮ್ಮೆಯಿಂದ ಎದೆಯುಬ್ಬಿಸಿ ಮಾತನಾಡುತ್ತಾರೆ. ಶಿವಾಜಿ ಎಂಬ ಹೆಸರೇ ಎಷ್ಟೋ ಜನರಿಗೆ ಸ್ಫೂರ್ತಿ. ಶಿವಾಜಿ ಒಬ್ಬ ರಾಜನಾಗಿದ್ದರೂ, ಛತ್ರಪತಿ ಶಿವಾಜಿ ಎಂದರೆ ದೈವೀಕ ಭಾವನೆ ಇದೆ. ಹಿಂದೂ ಹೃದಯ ಸಾಮ್ರಾಟನಾಗಿರುವ ಛತ್ರಪತಿ ಶಿವಾಜಿ, ಮೊಘಲರ ವಿರುದ್ಧ ಹಿಂದೂಗಳ ರಕ್ಷಣೆಗಾಗಿ ಹೋರಾಟ ಮಾಡಿದ ಧೀರ. ಇನ್ನು ಶಿವಾಜಿಯ ಸಾಹಸಗಳ ಬಗ್ಗೆ ನೂರಾರು ಕಥೆಗಳಿವೆ. ದಂತಕಥೆಗಳೇ ಇವೆ. ಹೀಗಿದ್ದ ಶಿವಾಜಿ, ಕನ್ನಡಿಗರ ಕರ್ನಾಟಕದ ವಿರೋಧಿಯಾಗಿದ್ದನಾ..?
ಶಿವಾಜಿ ಮಹಾರಾಜ್ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಾರೆ. ಬಾಲಿವುಡ್ನ ಖ್ಯಾತ ನಿರ್ದೇಶಕರಾಗಿರುವ ಸಂದೀಪ್ ಸಿಂಗ್ ಅವರು ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಡೈರೆಕ್ಟ್ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಒಂದು ಕಡೆ ಹೆಮ್ಮೆ, ಮತ್ತೊಂದು ಕಡೆ ವಿರೋಧ ವ್ಯಕ್ತವಾಗಿದೆ. ಶಿವಾಜಿಯಾಗಿ ನಟಿಸೋಕೆ ಓಕೆ ಎಂದಿದ್ದಾರೆ ರಿಷಬ್ ಶೆಟ್ಟಿ. ಇನ್ನು ನಿರ್ದೇಶಕ ಸಂದೀಪ್ ಸಿಂಗ್ ಹೊಸಬರಲ್ಲ. ಮೇರಿ ಕೋಮ್, ಸರಬ್ಜಿತ್, ವೀರ್ ಸಾವರ್ಕರ್, ರಾಮ್ಲೀಲಾ, ಬಾಜಿರಾವ್ ಮಸ್ತಾನಿ ಸೇರಿ ಕೆಲ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಹಿನ್ನೆಲೆ ಇದೆ. ಹೀಗಾಗಿಯೇ ರಿಷಬ್ ಶೆಟ್ಟಿ ಮತ್ತೊಂದು ಬ್ಲಾಕ್ ಬಸ್ಟರ್ ಕೊಡ್ತಾರೆ ಅನ್ನೋದ್ರಲ್ಲಿ ಅನುಮಾನವಿಲ್ಲ.
ರಿಷಬ್ ಶೆಟ್ಟಿ ಪಾತ್ರಕ್ಕೆ ನನ್ನ ಮೊದಲ ಮತ್ತು ಏಕೈಕ ಆಯ್ಕೆ. ಅವರು ನಿಜವಾಗಿಯೂ ಛತ್ರಪತಿ ಶಿವಾಜಿ ಮಹಾರಾಜರ ಶಕ್ತಿ, ಚೈತನ್ಯ ಮತ್ತು ಶೌರ್ಯವನ್ನು ಸಾಕಾರಗೊಳಿಸಿದ್ದಾರೆ. ಈ ಚಿತ್ರವು ನನ್ನ ಹಲವು ವರ್ಷಗಳ ಕನಸು. ಈ ಚಿತ್ರ ನಿರ್ದೇಶನ ಮಾಡುವುದೇ ನನಗೆ ಗೌರವ ಎಂದಿದ್ದಾರೆ ಸಂದೀಪ್ ಸಿಂಗ್.
ವಿಚಿತ್ರವೆಂದರೆ ಶಿವಾಜಿಯ ಪಾತ್ರದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿಯ ವಿರುದ್ಧ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಿವಾಜಿ ತನ್ನ ಕಾಲದಲ್ಲಿ ಶೃಂಗೇರಿ ಮಠಕ್ಕೆ ದಾಳಿ ಮಾಡಿದ್ದ ಹಾಗೂ ಬೆಳವಡಿ ಮಲ್ಲಮ್ಮನ ಜೊತೆ ಯುದ್ಧ ಮಾಡಿದ್ದ. ಕೊನೆಗೆ ಶಿವಾಜಿ ಮಲ್ಲಮ್ಮನ ಎದುರು ಸೋತಿದ್ದ ಹಾಗೂ ಕ್ಷಮೆ ಕೇಳಿದ್ದ. ಈ ದೃಶ್ಯಗಳೂ ಸಿನಿಮಾದಲ್ಲಿ ಇರಬೇಕು. ಶಿವಾಜಿ ಹಿಂದೂ ಹೃದಯ ಸಾಮ್ರಾಟನೇ ಇರಬಹುದು, ಆದರೆ ಕನ್ನಡದವರ ಮೇಲೆ ಶಿವಾಜಿ ಹೀರೋ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇತಿಹಾಸದ ಪ್ರಕಾರ ಬೆಳವಡಿಯ ಕೋಟೆಗೆ ಮರಾಠಾ ಸೇನೆಯು ಮುನ್ನುಗ್ಗಿ ಮಲ್ಲಮ್ಮಳ ಸೇನೆಯನ್ನು ಸೋಲಿಸುತ್ತದೆ. ಒಂದು ಹಂತದಲ್ಲಿ ಮರಾಠರ ವಿರುದ್ಧ ಮೇಲುಗೈ ಸಾಧಿಸಿದ್ದ ಮಲ್ಲಮ್ಮನ ಸೈನ್ಯ, ನಂತರ ಮರಾಠರ ಯುದ್ಧತಂತ್ರಗಳ ಎದುರು ಸೋಲುತ್ತದೆ. ಆದರೆ, ಮಲ್ಲಮ್ಮಳ ಧೈರ್ಯ, ಸಾಹಸ, ಶೌರ್ಯವನ್ನು ಶಿವಾಜಿ ಮಹಾರಾಜ ಮೆಚ್ಚುತ್ತಾನೆ. ಅಲ್ಲದೆ ಈ ಯುದ್ಧ ನಡೆದದ್ದೇ ತಪ್ಪು ಅಭಿಪ್ರಾಯ ಮತ್ತು ಪಿತೂರಿಯಿದ ಎಂದು ತಿಳಿದು ಮಲ್ಲಮ್ಮನಿಗೆ ಸಹೋದರಿಯ ಪಟ್ಟ ನೀಡುತ್ತಾರೆ. ಅರಮನೆಗೆ ಕರೆಸಿಕೊಂಡು ಗೌರವಾದರ ಬಗ್ಗೆ ನೀಡಿ ಸನ್ಮಾನಿಸುತ್ತಾನೆ. ಮಾತ್ರವಲ್ಲ, ಬೆಳವಡಿಯ ಕೋಟೆಗೆ ಭದ್ರತೆಯೊಂದಿಗೆ ಮರಳಿ ಕಳುಹಿಸುತ್ತಾನೆ. ಜತೆಗೆ ಮಲ್ಲಮ್ಮನ ಸಹೋದರಿಗೆ ಸಾವಿತ್ರಿ ಎಂಬ ಬಿರುದನ್ನು ನೀಡುತ್ತಾನೆ. ಇದು ಇತಿಹಾಸ.
ಇನ್ನು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದು, ಶಿವಾಜಿ ಸೈನ್ಯದ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟ ನಡೆಸಿದ್ದು ಕೂಡಾ ಇತಿಹಾಸದಲ್ಲಿದೆ. ಇವುಗಳಿಂದಾಗಿಯೇ ರಿಷಬ್ ಶೆಟ್ಟಿ ವಿರುದ್ಧ ಮಾತುಗಳು ಕೇಳಿ ಬಂದಿದ್ದು, ಇವುಗಳನ್ನು ಚಿತ್ರತಂಡ ಹೇಗೆ ನಿಭಾಯಿಸಲಿದೆ ಎನ್ನುವ ಕುತೂಹಲ ಇದೆ.