ವಿಜಯೇಂದ್ರ ಗುಡುಗುತ್ತಿದ್ದಾರೆ. ಆ ಮಾತು ಕೇಳಿದರೆ ವಿಜಯೇಂದ್ರ ಇಷ್ಟು ದಿನ ಇಷ್ಟೊಂದು ಸುಮ್ಮನಿದ್ದರಾದರೂ ಏಕೆ ಎಂದು ಅವರ ಅಭಿಮಾನಿಗಳೇ ಬೆರಗು ಪಟ್ಟುಕೊಳ್ಳುವಂತೆ ಗುಡುಗುತ್ತಿದ್ದಾರೆ. ಅದಕ್ಕೆಲ್ಲ ಕಾರಣವಾಗಿರೋದು ರಮೇಶ್ ಜಾರಕಿಹೊಳಿ ಕೊಟ್ಟ ಒಂದೇ ಒಂದು ಹೇಳಿಕೆ.
ಯಡಿಯೂರಪ್ಪರವರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿದರೆ ಸ್ವಾಗತ. ಆದರೆ ಯಾಕೆ ಪ್ರವಾಸ ಮಾಡುತ್ತಿದ್ದಾರೆ ಅದನ್ನ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದ ರಮೇಶ್ ಜಾರಕಿಹೊಳಿ, ಮಗನ ಸ್ಥಾನ ಭದ್ರ ಮಾಡೋಕೆ ಮಾಡ್ತಿದಾರಾ? ಪಕ್ಷ ಭದ್ರ ಮಾಡೋಕೆ ಮಾಡ್ತಿದಾರಾ ಅದನ್ನು ಸ್ಪಷ್ಟಪಡಿಸಬೇಕು ಯಡಿಯೂರಪ್ಪರವರೇ ನಿಮ್ಮ ಬಗ್ಗೆ ಗೌರವ ಇದೆ, ವಯಸ್ಸಾಗಿದೆ ನಿಮಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ದಯವಿಟ್ಟು ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಬೇಡಿ. ವಿಜಯೇಂದ್ರ ಬೆನ್ನು ಹತ್ತಿದ್ರೆ ನೀವೂ ಹಾಳಾಗುತ್ತೀರಿ. ಮಗನಾಗಿ ನೋಡಬೇಡಿ, ಫೇಲಾದ ಅಧ್ಯಕ್ಷ ಅಂತಾ ನೋಡಿ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಹಕಾರ ಕೊಡಿ ಎಂದಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿರುವ ವಿಜಯೇಂದ್ರ ʻʻರಮೇಶ್ ಜಾರಕಿಹೊಳಿ ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಹಳ್ಳಿ ಹಳ್ಳಿ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಇದೀಗ ಪಕ್ಷಕ್ಕೆ ಬಂದಿದ್ದಾರೆ. ಅವರು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಅವರಿಗೆ ಸಮಸ್ಯೆ ಇದ್ರೆ ಹೈಕಮಾಂಡ್ ಜೊತೆ ಮಾತನಾಡಲಿ. ಹೀಗೆ ಬಹಿರಂಗವಾಗಿ ಮಾತನಾಡುವದು ಸರಿಯಲ್ಲ. ಇಲ್ಲಿ ನಾನು ರಾಜ್ಯಾಧ್ಯಕ್ಷ, ನೆನಪಿರಲಿʼʼ ಎಂದಿದ್ದಾರೆ.
ಯಡಿಯೂರಪ್ಪ ಈ ನಾಡು ಕಂಡ ಅಪ್ರತಿಮ ಹೋರಾಟಗಾರ, ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿಹಳ್ಳಿ ಸುತ್ತುತ್ತ ಪಕ್ಷ ಸಂಘಟನೆ ಮಾಡಿದ್ದಾರೆ, ಅವರ ಬಗ್ಗೆ ಹಗುರವಾಗಿ ಮಾತಾಡಿದರೆ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತದೆ ಮತ್ತು ಜಾರಕಿಹೊಳಿ ಹೊರಗಡೆ ತಿರುಗಾಡುವುದು ಕಷ್ಟವಾದೀತು ಎಂದು ಪರೋಕ್ಷವಾಗಿ ಬೇರೆಯದೇ ಧ್ವನಿಯಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ ವಿಜಯೇಂದ್ರ.
ಅಷ್ಟೇ ಅಲ್ಲ, ಯತ್ನಾಳ್ ಮತ್ತವರ ಬಣದ ಮಾತುಗಳಿಗೆ ಟಾಂಗ್ ಕೊಟ್ಟಿರುವ ವಿಜಯೇಂದ್ರ ನಾನೂ ಲಿಂಗಾಯತ, ಲಿಂಗಾಯತ ನಾಯಕ ಎಂದು ಹೇಳಿದ್ದಾರೆ. ಇತ್ತ ಯತ್ನಾಳ್ ಬಣದವರು ದಿನಕ್ಕೊಂದು ಹೇಳಿಕೆ ನೀಡುತ್ತಾ ವಿಜಯೇಂದ್ರರನ್ನು ಕೆಣಕುತ್ತಿದ್ದರೆ, ಅತ್ತ ವಿಜಯೇಂದ್ರ ಒಂದೇ ಹೇಳಿಕೆಯಲ್ಲಿ ತಿರುಗಿ ಬಿದ್ದಿದ್ದಾರೆ. ಅಂದಹಾಗೆ ವಿಜಯೇಂದ್ರ ಅವರ ಬಾಯಿ ಕಟ್ಟಿಹಾಕಿರುವುದು ಹೈಕಮಾಂಡ್. ಏಕೆಂದರೆ ಅವರು ರಾಜ್ಯಾಧ್ಯಕ್ಷ. ಆದರೆ ಈಗ ಓಪನ್ ಆಗಿ ಎಚ್ಚರಿಕೆ ಕೊಡುವ ಮೂಲಕ ಹೈಕಮಾಂಡ್ ನಾಯಕರಿಗೂ ಒಂದೋ.. ನೀವು ಸರಿ ಮಾಡಿ. ಇಲ್ಲದಿದ್ದರೆ ಬೀದಿ ಜಗಳಕ್ಕೂ ನಾವು ರೆಡಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಹೈಕಮಾಂಡ್ ನಾಯಕರು ವಿಜಯೇಂದ್ರ ವರ್ಸಸ್ ಯತ್ನಾಳ್, ಜಾರಕಿಹೊಳಿ ಜಗಳವನ್ನ ದಿನೇ ದಿನೇ ಕಾದು ನೋಡೋಣ ತಂತ್ರಕ್ಕೆ ಮೊರೆ ಹೋಗುತ್ತಲೇ ಇದೆ. ಹೀಗಾಗಿಯೇ ವಿಜಯೇಂದ್ರ ಮಾತನಾಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.