1919, ಏಪ್ರಿಲ್ 13. 105 ವರ್ಷಗಳ ಹಿಂದೆ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ರೊವಾಲ್ಟ್ ಆಕ್ಟ್ ಎಂದೇ ಫೇಮಸ್ ಆಗಿರುವ ಕಾನೂನೊಂದನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ಆ ಕಾನೂನು ಪ್ರಕಾರ ಪೊಲೀಸರು ಯಾರನ್ನು ಬೇಕಾದರೂ, ಯಾವಾಗ ಬೇಕಾದರೂ.. ಕಾರಣವನ್ನೇ ಕೊಡದೆ ಅರೆಸ್ಟ್ ಮಾಡಬಹುದಾಗಿತ್ತು. ಇದರ ವಿರುದ್ಧ ದೇಶದೆಲ್ಲೆಡೆ ಹೋರಾಟಗಳು ನಡೆಯುತ್ತಿದ್ದವು. ಆಗ ಜಲಿಯನ್ ವಾಲಾಬಾಗ್ನಲ್ಲಿ ಸಿಖ್ಖರು ವಾರ್ಷಿಕ ಉತ್ಸವಕ್ಕಾಗಿ ಸೇರಿದ್ದು ಬ್ರಿಟಿಷ್ ವಿರೋಧಿ ಕೃತ್ಯ ಎಂದು ರೊಚ್ಚಿಗೆದ್ದಿದ್ದ ಜನರಲ್ ಡಯರ್ ಸಾವಿರಾರು ಜನರನ್ನು ಕೊಂದು ಹಾಕಿದ್ದ.
ಒಂದೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಕೊಂದು ಹಾಕಲಾಗಿತ್ತು. ಚಿಕ್ಕ ಚಿಕ್ಕ ಮಕ್ಕಳನ್ನೂ ಬಿಡದೆ ಎದೆಗೇ ಗುಂಡು ಹೊಡೆಯಲಾಗಿತ್ತು. ಅದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲೊಂದು ಕರಾಳ ಅಧ್ಯಾಯ. ಬಹುತೇಕ ಭಾರತೀಯರಿಗೆ ದುರಂತದ ನಂತರ ಏನಾಯ್ತು ಎನ್ನುವ ಕಥೆ ಗೊತ್ತಿಲ್ಲ. ಜನರಲ್ ಡಯರ್ ನಡೆಸಿದ ಆ ಮಾರಣಹೋಮದ ಕಥೆಯಷ್ಟೇ ಗೊತ್ತು. ಆನಂತರ ಏನಾಯ್ತು..? ಆ ಕಥೆ ಹೇಳೋಕೆ ಬಂದಿರುವ ಚಿತ್ರವೇ ಕೇಸರಿ 2.
ಕೇಸರಿ 2 ಚಿತ್ರದಲ್ಲಿ ಜನರಲ್ ಡಯರ್ʻನನ್ನು ಕಟಕಟೆಗೆ ಎಳೆದು ತಂದ ಕಥೆ ಇದೆ. ಅಂದಹಾಗೆ ಇದು ಕಾಲ್ಪನಿಕ ಕಥೆಯಲ್ಲ. ವಾಸ್ತವ. ಬಹುತೇಕರಿಗೆ ಗೊತ್ತಿಲ್ಲ ಎನ್ನುವುದಷ್ಟೇ ವಿಶೇಷ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಂಕರನ್ ನಾಯರ್ ಎಂಬ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನರಲ್ ಡಯರ್ʻನನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಲು ಪಂಜಾಬ್ ಕೌನ್ಸಿಲ್ಗೆ ರಾಜೀನಾಮೆ ನೀಡಿ ಬಂದ ವಕೀಲನ ಪಾತ್ರ. ಜನರಲ್ ಡಯರ್ ಪರ ವಾದ ಮಾಡುವ ವಕೀಲನಾಗಿ ನೆವಿಲ್ಲೆ ಮೆಕಿನ್ಲೆ ಪಾತ್ರಲ್ಲಿ ಮಾಧವನ್ ನಟಿಸಿದ್ದಾರೆ. 3 ನಿಮಿಷದ ಟ್ರೇಲರ್, ಹತ್ಯಾಕಾಂಡದ ದೃಶ್ಯಗಳೊಂದಿಗೆ ಶುರುವಾಗುತ್ತದೆ. ನಂತರದ ವಿನಾಶ ಮತ್ತು ಅದು ಭಾರತದಾದ್ಯಂತ ಬೀರಿದ ಪರಿಣಾಮ ಹಾಗೂ ಕಾನೂನು ಹೋರಾಟವನ್ನೊಳಗೊಂಡಿದೆ. ಅಕ್ಷಯ್ ಕುಮಾರ್ ಅವರು ಟ್ರೇಲರ್ನ ಕೊನೆಯಲ್ಲಿ ಜನರಲ್ ಡಯರ್ ಪಾತ್ರಕ್ಕೆ ಟಾಯ್ಲೆಟ್ಟಿನಲ್ಲಿ ಹೇಳುವ ಬ್ರಿಟಿಷ್ ರಾಜ್ ಕುಸಿಯುತ್ತಿದೆ ಎನ್ನುವ ಡೈಲಾಗ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅಂದಹಾಗೆ ಇದು ಸತ್ಯಕಥೆ.
ಇನ್ನು ವಾಸ್ತವ ಇತಿಹಾಸಕ್ಕೆ ಬಂದರೆ ಕೋರ್ಟಿನಲ್ಲಿ ಶಿಕ್ಷೆಯಾದರೂ ಕೂಡಾ ಜನರಲ್ ಡಯರ್ ಬ್ರಿಟಿಷ್ ರಾಜ್ ವ್ಯವಸ್ಥೆಯಲ್ಲಿ ಸೆಲಬ್ರಿಟಿಯಾದರು. ಕೆಲವು ಬಿರುದುಬಾವಲಿಗಳೂ ಸಂದವು. ಕೊನೆಗೆ ಜನರಲ್ ಡಯರ್ʻನನ್ನು ಸ್ವಾತಂತ್ರ್ಯ ಹೋರಾಟಗಾರ ಉಧಾಮ್ ಸಿಂಗ್ ಲಂಡನ್ನಿನಲ್ಲೇ ಹತ್ಯೆ ಮಾಡಿದರು. ಆ ಹತ್ಯೆಗೆ ಸಾಥ್ ನೀಡಿದವರು ವೀರ್ ಸಾವರ್ಕರ್.
ಇದೀಗ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕೋರ್ಟ್ ಹೋರಾಟದ ಕಥೆ ಕೇಸರಿ 2 ಚಿತ್ರದಲ್ಲಿದೆ. ಕರಣ್ ಸಿಂಗ್ ತ್ಯಾಗಿ ಅವರು ‘ಕೇಸರಿ: ಚಾಪ್ಟರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದು, ಯಶ್ ಜೋಹರ್, ಅರುಣಾ ಭಾಟಿಯಾ, ಕರಣ್ ಜೋಹರ್, ಆಧಾರ್ ಪೂನಾವಾಲ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಅಕ್ಷಯ್ ಕುಮಾರ್, ಆರ್. ಮಾಧವನ್, ಅನನ್ಯಾ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟ್ರೇಲರ್ಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಕ್ಷಯ್ ಕುಮಾರ್ ಅವರಿಗೆ ಗೆಲುವು ತಂದು ಕೊಟ್ಟಿದ್ದವುಗಳಲ್ಲಿ ರಿಯಲಿಸ್ಟಿಕ್ ಕಥೆಗಳ ಪಾತ್ರ ದೊಡ್ಡದು. ಒಂದೆಡೆ ಕಮರ್ಷಿಯಲ್ ಚಿತ್ರಗಳನ್ನು ಮಾಡುತ್ತ, ಮತ್ತೊಂದು ಬ್ರಿಡ್ಜ್ ಸಿನಿಮಾಗಳನ್ನೂ ಮಾಡುತ್ತಿರುತ್ತಾರೆ.
ಅಕ್ಷಯ್ ಕುಮಾರ್ ಕಿಲಾಡಿ 786, ಸ್ಪೆಷಲ್ 26, ಬೇಬಿ, ಏರ್ ಲಿಫ್ಟ್, ನಾಮ್ ಶಬಾನಾ, ಕೇಸರಿ, ಮಿಷನ್ ಮಂಗಲ್, ಬೆಲ್ ಬಾಟಂ, ಸಾಮ್ರಾಟ್ ಪೃಥ್ವಿರಾಜ್, ರುಸ್ತುಂ, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಪ್ಯಾಡ್ ಮ್ಯಾನ್, ಗೋಲ್ಡ್.. ಹೀಗೆ ಸತ್ಯಕಥೆ ಆಧರಿತ ಚಿತ್ರಗಳು ಹೆಚ್ಚಾಗಿವೆ. ಈಗ ಕೇಸರಿ 2.