ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರದ ಒಂದು ಝಲಕ್ ವಿಡಿಯೋ ಹೊರಬಿದ್ದಿದೆ. ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಪಾತ್ರಧಾರಿಯಾಗಿ ನಟಿಸಿರೋದ್ರಿಂದ ವೀರಮದಕರಿ, ಕೆಂಪೇಗೌಡ ಚಿತ್ರ ನೆನಪಾಗುವುದು ಸಹಜ. ಆ ಚಿತ್ರಗಳ ಖದರ್ ರಿಪೀಟ್ ಆಗುವ ರೀತಿಯಲ್ಲಿದೆ ಮ್ಯಾಕ್ಸ್ ಸಿನಿಮಾದ ಸ್ನೀಕ್ ಪೀಕ್ ವಿಡಿಯೋ.
ಇದು ಕಿಚ್ಚನ ಫ್ಯಾನ್ಸ್ ಹೇಳ್ತಿರೋ ಮಾತು. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲಿದ್ದು, ಚಿತ್ರದ ಪ್ರಚಾರ ಈಗ ಶುರುವಾಗಿದೆ. ವೀರ ಮದಕರಿ ಹಾಗೂ ಕೆಂಪೇಗೌಡ ಚಿತ್ರಗಳಲ್ಲಿ ಸುದೀಪ್ ಖಾಕಿ ತೊಟ್ಟು ಅಬ್ಬರಿಸಿದ್ದರು. ಕೆಂಪೇಗೌಡದಲ್ಲಿ ಖಡಕ್ ಆಫೀಸರ್ ಆಗಿದ್ದರೆ, ವೀರಮದಕರಿಯಲ್ಲಿ ಕಳ್ಳ ಮತ್ತು ಪೊಲೀಸ್ ದ್ವಿಪಾತ್ರಗಳಲ್ಲಿ ಮೋಡಿ ಮಾಡಿದ್ದರು. ಈಗ ಮ್ಯಾಕ್ಸ್.
ಮ್ಯಾಕ್ಸ್ ಚಿತ್ರದಲ್ಲಿಯೂ ಸ್ಟೈಲ್, ಆ್ಯಕ್ಷನ್ ಭರ್ಜರಿಯಾಗಿಯೇ ಇದೆ.
ಪ್ರಾಮಾಣಿಕ ಪೊಲೀಸ್ ಆಫೀಸರ್ ಪಾತ್ರದಲ್ಲಿಯೇ ಸುದೀಪ್ ಜೊತೆ ಸಂಯುಕ್ತಾ ಹೊರನಾಡು ಹಾಗೂ ಸುಕೃತಾ ವಾಗ್ಲೆ ಕೂಡ ಇಲ್ಲಿ ಪೊಲೀಸ್ ಪಾತ್ರದಲ್ಲೇ ನಟಿಸಿದ್ದಾರೆ.
‘ನಿಮ್ಮ ಸಾಹೇಬ್ರು ನಾಳೆ ತಾನೆ ಡ್ಯೂಟಿಗೆ ಜಾಯಿನ್ ಆಗೋದು. ಇವತ್ ಯಾಕೆ ಇಷ್ಟೆಲ್ಲ ಬಿಲ್ಡಪ್’ ಎಂದು ಉಗ್ರಂ ಮಂಜು ಪೊಲೀಸ್ ಪೇದೆ ಬಳಿ ಕೇಳುವುದರೊಂದಿಗೆ ಸ್ನೀಕ್ ಪೀಕ್ ವಿಡಿಯೋ ಶುರುವಾಗುತ್ತೆ. ಮುಂದಿನದ್ದು ಸುದೀಪ್ ಸೃಷ್ಟಿಸುವ ಸ್ಟೈಲಿಷ್ ದೀಪಾವಳಿ.
ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿರುವ ಮ್ಯಾಕ್ಸ್ ಚಿತ್ರಕ್ಕೆ ಕಲೈಪುಲಿ ಧಾನು ನಿರ್ಮಾಣ ಇದೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಅವರಷ್ಟೇ ಅಲ್ಲದೆ ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಕರಿಸುಬ್ಬು, ವಿಜಯ್ ಚೆಂಡೂರು, ನಾಗರಾಜ್, ಅನಿರುದ್ದ್, ಪ್ರವೀಣ್ ಸೇರಿದಂತ ಬಹುತಾರಾಗಣವಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮ್ಯೂಸಿಕ್ ನೀಡಿದ್ದಾರೆ. ಛಾಯಾಗ್ರಾಹಕ ಶೇಖರ್ ಚಂದ್ರ ಕ್ಯಾಮರಾ ವರ್ಕ್ ತೋರಿಸಿದ್ರೆ, ಚೇತನ್ ಡಿ’ಸೋಜ ಸಾಹಸ ನಿರ್ದೇಶನ ಮಾಡಿದ್ದಾರೆ. ಸುದೀಪ್ ಮ್ಯಾಕ್ಸ್ ಸಿನಿಮಾಗಾಗಿ ಅಭಿಮಾನಿಗಳು 3 ವರ್ಷಗಳಿಂದ ಕಾಯ್ತಿದ್ದಾರೆ.
ಅಂದ ಹಾಗೆ ಚಿತ್ರದ ಒಟ್ಟಾರೆ ಅವಧಿ ಕೇವಲ ಒಂದೂವರೆ ಗಂಟೆ ಎನ್ನಲಾಗುತ್ತಿದೆ. ಅಂದರೆ ಚಿತ್ರದ ಲೆಂಗ್ತ್ ಚಿಕ್ಕದಾಗಿದೆ. ಚಿತ್ರವನ್ನು ಎಲ್ಲಿಯೂ ಲಂಭಿಸಿಲ್ಲ. ಹೀಗಾಗಿ ಪ್ರೇಕ್ಷಕರು ಫಠಾಫಠ್ ನೋಡಬಹುದಾದ ಸಿನಿಮಾ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಚಿತ್ರದ ಬಗ್ಗೆ ಇನ್ನಷ್ಟು ಮತ್ತಷ್ಟು ಅಪ್‌ಡೇಟ್ ಇನ್ನೂ ಬರಬೇಕಿದೆ.