ನಾವು ಕೇಂದ್ರ ಮತ್ತು ರಾಜ್ಯದ ಕೆಲ ನಾಯಕರ ಜತೆಗೆ ಸಂಪರ್ಕದಲ್ಲಿದ್ದೇವೆ. ಸಂಘಟನೆ ಸರಿ ಮಾಡಬೇಕು ಎಂಬುದು ನಮ್ಮ ಹೋರಾಟ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇದು ಕುಮಾರ್ ಬಂಗಾರಪ್ಪ ನೀಡಿರುವ ಹೇಳಿಕೆ. ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಸಭೆ ನಡೆಸಿದ್ದು, ಕುಮಾರ್ ಬಂಗಾರಪ್ಪ ಮನೆಯಲ್ಲೇ ಸಭೆ ನಡೆದಿದೆ. ಹಾಗಾದರೆ ಯತ್ನಾಳ್ ಹೋರಾಟವನ್ನು ಇನ್ನು ಮುಂದೆ ಕುಮಾರ್ ಬಂಗಾರಪ್ಪ ಮುಂದುವರೆಸತ್ತಾರಾ..?
ನಮ್ಮ ಪ್ರಕಾರ ಉಚ್ಚಾಟನೆ ತಪ್ಪು. ಹಾಗಂತ ನಾವು ವರಿಷ್ಠರ ನಿರ್ಧಾರ ಪ್ರಶ್ನಿಸುವುದಿಲ್ಲ. ಆದರೆ, ವರಿಷ್ಠರು ಒಂದು ಬಾರಿ ಯತ್ನಾಳ್ ಅವರನ್ನು ಖುದ್ದು ಕರೆಸಿ ಮಾತನಾಡಬೇಕಿತ್ತು. ಅವರೊಬ್ಬ ಪ್ರಾಮಾಣಿಕ, ಶುದ್ಧ ಹಾಗೂ ನಿಷ್ಕಳಂಕ ನಾಯಕ. ಅವರ ಉತ್ತರ ಕರ್ನಾಟಕದ ಭಾಷೆ ತುಸು ಕಟುವಾಗಿ ಕೇಳುತ್ತದೆ, ಅಷ್ಟೇ, ಈ ಬಗ್ಗೆ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ ಕುಮಾರ್ ಬಂಗಾರಪ್ಪ.
ವಿಜಯೇಂದ್ರ ನೇತೃತ್ವ ಆದರೆ ಬಂಡಾಯ ಫಿಕ್ಸ್..!
ವಿಜಯೇಂದ್ರ ಮುಖಂಡತ್ವದಲ್ಲೇ ಪಕ್ಷ ಸಂಘಟನೆ ಎಂದರೆ ಮತ್ತೆ ಗುಂಪು ಸೃಷ್ಟಿಯಾಗುತ್ತದೆ. ಹೀಗೆ ಮುಂದುವರೆಸಿದರೆ, ಅವರು ವಿಫಲರಾಗುತ್ತಾರೆ, ನಾವೂ ವಿಫಲರಾಗುತ್ತೇವೆ. ಪಕ್ಷ ಮತ್ತಷ್ಟು ಹಾಳಾಗಲಿದೆ. ವಿಜಯೇಂದ್ರಗೆ ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ಸಾಮರ್ಥ್ಯ ಮತ್ತು ಆಲೋಚನಾ ಶಕ್ತಿ ಇಲ್ಲ ಎನ್ನುವ ಕುಮಾರ್ ಬಂಗಾರಪ್ಪ, ಯತ್ನಾಳ್ ಅವರಂತೆ ಯಡಿಯೂರಪ್ಪ ಅವರನ್ನೂ ಟೀಕೆ ಮಾಡುತ್ತಿಲ್ಲ. ಬದಲಿಗೆ ವಿಜಯೇಂದ್ರರನ್ನು ಮಾತ್ರವೇ ಟೀಕಿಸುತ್ತಿದ್ದಾರೆ.
ವಿಜಯೇಂದ್ರಗೆ ಯಡಿಯೂರಪ್ಪ ರೀತಿ ಪಕ್ಷ ಸಂಘಟಿಸಿ ಮುನ್ನಡೆಸಲು ಸಾಧ್ಯವಿಲ್ಲ. ಯಡಿಯೂರಪ್ಪ ಪಕ್ಷ ಮುನ್ನಡೆಸಿದ ಕಾಲ ಬೇರೆ. ಅವರಲ್ಲಿ ಅನುಭವ, ಜಾಣತನ, ಎಲ್ಲರ ವಿಶ್ವಾಸ ಗಳಿಸುವ ಗುಣವಿತ್ತು. ಪಕ್ಷವನ್ನು ಅಧಿಕಾರಕ್ಕೆ ತರುವ ಕನಸಿತ್ತು. ವಿಜಯೇಂದ್ರಗೆ ಏನಿದೆ? ಎಲ್ಲವನ್ನೂ ದುಡ್ಡಿನಿಂದ ಮಾಡುತ್ತೇನೆ ಎಂದರೆ ಆಗುವುದಿಲ್ಲ ಎನ್ನುತ್ತಾರೆ.
ಯತ್ನಾಳ್ ಜೊತೆ ಮೀಟಿಂಗ್ ಸಾಧ್ಯವಿಲ್ಲ
ಯತ್ನಾಳ್ ಉಚ್ಚಾಟನೆ ತಪ್ಪು ಎನ್ನುತ್ತಲೇ ಕುಮಾರ್ ಬಂಗಾರಪ್ಪ ಇನ್ನು ಮುಂದೆ ಯತ್ನಾಳ್ ಜೊತೆ ಭೇಟಿ ಮತ್ತು ಮಾತುಕತೆ ಸಾಧ್ಯವಿಲ್ಲ. ಯತ್ನಾಳ್ ಅವರನ್ನು ಮಾಡಿರುವುದರಿಂದ ನ್ನು ಮುಂದೆ ಯತ್ನಾಳ್ ಅವರೊಂದಿಗೆ ನಾವು ಸಭೆ ಮಾಡುವಂತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಆರೋಪ ಬರುತ್ತದೆ ಎನ್ನುವ ಕುಮಾರ್ ಬಂಗಾರಪ್ಪ, ಯತ್ನಾಳ್ ಅವರನ್ನು ತಡೆಯುವುದು ಕಷ್ಟ. ಅವರೊಂದಿಗೆ ಸಭೆ ನಡೆಸುವುದೂ ಕಷ್ಟ ಎಂದು ಹೇಳಿದ್ದಾರೆ.
ಈ ವೇಳೆ ತಮ್ಮ ಜೊತೆ ಯಾರೆಲ್ಲ ಇದ್ದಾರೆ ಎಂಬ ಸುಳಿವು ಕೊಟ್ಟಿರುವ ಕುಮಾರ್ ಬಂಗಾರಪ್ಪ, ತಟಸ್ಥ ಬಣದ ಅನೇಕರು ತಮ್ಮ ಜೊತೆ ಇದ್ದಾರೆ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ ಸೇರಿ ಅನೇಕರೊಂದಿಗೆ ನಾವು ಮಾತನಾಡಿದ್ದೇವೆ. ಆ ಪೈಕಿ ಯಾರೊಬ್ಬರೂ ನಾವು ಮಾಡುತ್ತಿರುವುದು ಸರಿ ಅಲ್ಲ ಎಂದು ಹೇಳಿಲ್ಲ. ಹೈಕಮಾಂಡ್, ಸಂಘದಲ್ಲಿ ನಮ್ಮ ಪರ ವಾದ ಮಾಡಿದ್ದಾರೆ. ಯತ್ನಾಳ್ ಅಮಾನತು ಸರಿಯಲ್ಲ ಎಂದು ಹೇಳಿದ್ದಾರೆ ಎನ್ನುವ ಮೂಲಕ, ತಮ್ಮ ಜೊತೆ ಇರುವ ನಾಯಕರು ಎಂಬ ಸುಳಿವನ್ನೂ ಕೊಟ್ಟಿದ್ದಾರೆ.