ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಸೋಕೆ ಒಂದು ದೊಡ್ಡ ಯುದ್ಧವೇ ನಡೆಯುತ್ತಿದೆ. ಆದರೆ ಯುದ್ಧ ಯಶಸ್ವಿಯಾಗೋದು ಅಷ್ಟು ಸುಲಭವಿಲ್ಲ. ಒಂದು ಕಡೆ ಸಿಎಂ ಸ್ಥಾನದ ಮೇಲೆ ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ. ಮತ್ತೊಂದು ಕಡೆ ಡಿಕೆಶಿ ಅವರಿಗೆ ತಪ್ಪಿಸಲು ದೊಡ್ಡ ಹೋರಾಟವೇ ನಡೆಯುತ್ತಿದೆ. ಡಿಕೆಶಿ ಬಣದಲ್ಲಿ ಒಂದಿಪ್ಪತ್ತು ಇಪ್ಪತ್ತೈದು ಶಾಸಕರಿದ್ದರೆ, ಡಿಕೆ ವಿರೋಧಿ ಬಣದಲ್ಲಿ 100ಕ್ಕೂ ಹೆಚ್ಚು ಶಾಸಕರಿದ್ದಾರೆ. ಅದು ಓಪನ್ ಸೀಕ್ರೆಟ್. ಸಿದ್ದರಾಮಯ್ಯ ಅವರನ್ನು ಇಳಿಸುವುದೇ ಆದರೆ, ಅನಿವಾರ್ಯವಾದರೆ ಸಿಎಂ ಸ್ಥಾನ ನಮಗೆ ಕೊಡಿ ಎನ್ನುತ್ತಿದ್ದಾರೆ ಗೃಹ ಸಚಿವ ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಎಚ್‌ಸಿ ಮಹದೇವಪ್ಪ. ಇನ್ನು ಬಿಜೆಪಿಯಲ್ಲಿ ಯತ್ನಾಳ್ ಅವರಂತೆ ಕಾಂಗ್ರೆಸ್ಸಿನಲ್ಲಿ ಕೆಎನ್ ರಾಜಣ್ಣ ಗುಡುಗುತ್ತಲೇ ಇದ್ಧಾರೆ. ಇದೆಲ್ಲದರ ನಡುವೆ ಅಚ್ಚರಿ ಎಂಬಂತೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ ಒಬ್ಬ ಜ್ಯೋತಿಷಿ. ಆ ಜ್ಯೋತಿಷಿಯ ಹೆಸರು ಪ್ರಶಾಂತ್ ಕಿಣಿ.
ಪ್ರಶಾಂತ್ ಕಿಣಿ. ಪ್ರಸಿದ್ಧ ಜ್ಯೋತಿಷಿ. ಹಸ್ತಸಾಮುದ್ರಿಕ ಪ್ರವೀಣ. ಟೈಂ ಟ್ರಾವೆಲ್ಲರ್ ಎಂದು ಹೇಳಿಕೊಳ್ತಾರೆ. ಟೈಂ ಟ್ರಾವೆಲ್ಲರ್ ಎಂದರೆ ಮುಂದಿನ ಭವಿಷ್ಯದ ದಿನಗಳಿಗೆ ಪ್ರಯಾಣ ಮಾಡುವ ಶಕ್ತಿ ಇರುವವರು ಎಂದರ್ಥ. ಈತನಿಗೆ ಕೆಲವು ವಿಶೇಷ ಶಕ್ತಿಗಳು ಒಲಿದಿವೆ. ಹೀಗಾಗಿಯೇ ಈತ ಹೇಳಿದ್ದೆಲ್ಲ ಸತ್ಯವಾಗುತ್ತದೆ ಎನ್ನುತ್ತಾರೆ. ಅಂದಹಾಗೆ ಈತ ಹೈದರಾಬಾದಿನವನು. ಈ ಪ್ರಶಾಂತ್ ಕಿಣಿ ಪ್ರಕಾರ ಈ ವರ್ಷದ ಏಪ್ರಿಲ್ ನಂತರ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ನೂತನ ಮುಖ್ಯಮಂತ್ರಿಯಾಗ್ತಾರೆ. ಹೌದು, ಈತನ ಭವಿಷ್ಯ ನಿಜವಾಗುವುದಕ್ಕೆ ತುಂಬಾ ದಿನಗಳೇನೂ ಕಾಯಬೇಕಿಲ್ಲ. ಜಸ್ಟ್ ಇನ್ನೊಂದು ಮೂರು ತಿಂಗಳಷ್ಟೇ.
ಪ್ರಶಾಂತ್ ಕಿಣಿ ಹೇಳಿದ್ದ ಭವಿಷ್ಯಗಳು 90% ಸತ್ಯ :
ಈತ ಹೇಳಿದ್ದ ಭವಿಷ್ಯಗಳು ಒಂದೆರೆಡಲ್ಲ.
ಎರಡು ವರ್ಷಗಳ ಹಿಂದೆ 2023ರಲ್ಲಿ ಆಪ್ ಸರ್ಕಾರ ಪತನವಾಗುತ್ತದೆ.ಅರವಿಂದ ಕೇಜ್ರಿವಾಲ್‌ಗೆ ಕೆಟ್ಟ ಸಮಯ ಶುರುವಾಗುತ್ತೆ. ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ ಎಂದು ಹೇಳಿದ್ದರು. ಎಲ್ಲವೂ ಸತ್ಯವಾಯಿತು.
ಕಳೆದ ವರ್ಷ ಅಕ್ಟೋಬರ್ 13ರಂದು ದೆಹಲಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಮಹಿಳೆಯೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲ, ಅದಕ್ಕೂ ಮೊದಲು ಒಬ್ಬ ಮಹಿಳೆ ದೆಹಲಿ ಸಿಎಂ ಆಗಲಿದ್ದಾರೆ ಎಂದೂ ಹೇಳಿದ್ದರು. ಕೇಜ್ರಿವಾಲ್ ಸಿಎಂ ಆಗಿದ್ದಾಗಲೇ ಆತಿಷಿ ಸಿಎಂ ಆಗಿದ್ದರು. ಈಗ ಎಲೆಕ್ಷನ್ ಮುಗಿದು, ಬಿಜೆಪಿ ಗೆದ್ದಾದ ಮೇಲೆ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿದ್ದಾರೆ.
ಮಹಾರಾಷ್ಟ್ರಕ್ಕೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಆಗಲಿದ್ದಾರೆ, ಏಕನಾಥ್ ಶಿಂಧೆ ಸಿಎಂ ಆಗುವುದಿಲ್ಲ ಎಂದು ಹೇಳಿದ್ದರು. ಅದೂ ಕೂಡಾ ಸತ್ಯವಾಗಿದೆ.
ಬಾಂಗ್ಲಾದೇಶದ ಪರಿಸ್ಥಿತಿ ಹಾಗೂ ಶೇಖ್ ಹಸೀನಾ ಅವರ ರಾಜಕೀಯದ ಬಗ್ಗೆಯೂ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು ಪ್ರಶಾಂತ್ ಕಿಣಿ. ಆಗಿನ್ನೂ ಬಾಂಗ್ಲಾ ಪರಿಸ್ಥಿತಿ ನಾರ್ಮಲ್ ಎನ್ನುವಂತೆಯೇ ಇತ್ತು. ಅದಾದ ಮೇಲೆ ಬಾಂಗ್ಲಾದೇಶದ ಪರಿಸ್ಥಿತಿ ನೋಡಿದ್ದೀರಿ. ಇನ್ನು ಶೇಖ್ ಹಸೀನಾ ಅವರಿಗೆ ಭಾರತ ಆಶ್ರಯ ನೀಡಲಿದೆ ಎಂದಿದ್ದರು. ಆಗ ಹಲವು ತಜ್ಞರು ಇದೆಲ್ಲ ಸಾದ್ಯವಿಲ್ಲ ಎಂದಿದ್ದರು. ಆದರೆ ತಜ್ಞರ ವಾದ ಸುಳ್ಳಾಗಿ, ಈತನ ಭವಿಷ್ಯವೇ ಸತ್ಯವಾಗಿತ್ತು.
ಅಷ್ಟೇ ಅಲ್ಲ, ಪುಷ್ಪ 02 ಗೆದ್ದರೂ, ಅಲ್ಲು ಅರ್ಜುನ್ ಅವರಿಗೆ ಕೆಟ್ಟ ಹೆಸರು ಬರಲಿದೆ ಎಂದಿದ್ದರು. ಅದರಂತೆಯೇ ಆಯ್ತು. ಇನ್ನು ಯುಐಗಿಂತ ಸುದೀಪ್ ಅಭಿನಯದ ಮ್ಯಾಕ್ಸ್ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ ಎಂದಿದ್ದರು. ಅದೂ ನಿಜವಾಯ್ತು.
ಕನ್ನಡದ ಬಿಗ್ ಬಾಸ್ ಗೆಲ್ಲುವುದು ಹನುಮಂತ ಎಂದಿದ್ದರು. ಅದರಂತೆಯೇ ಆಯ್ತು. ನವೆಂಬರ್‌ನಲ್ಲಿ ದೊಡ್ಡ ಚಂಡಮಾರುತ ಅಪ್ಪಳಿಸಲಿದೆ ಎಂದಿದ್ದರು. ಅದೂ ಆಯ್ತು.
ಅಮೆರಿಕಕ್ಕೆ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುತ್ತಾರೆ, ಬೈಡನ್ ಸೋಲುವುದು ಗ್ಯಾರಂಟಿ ಎಂದಿದ್ದರು. ಅದೂ ನಿಜವಾಗಿದೆ.
ಹಾಗಂತ ಈತನ ಭವಿಷ್ಯ ಸುಳ್ಳಾಗಿಲ್ಲ ಎಂದೇನೂ ಇಲ್ಲ. ಭಾರತ ಏಕದಿನ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ಹೇಳಿದ್ದರು. ಸುಳ್ಳಾಯ್ತು. ತೆಲಂಗಾಣದಲ್ಲಿ ಕೆಸಿಆರ್ ಗೆಲ್ಲುತ್ತಾರೆ ಎಂದಿದ್ದರು. ಅದೂ ಸುಳ್ಳಾಯ್ತು.
ಇನ್ನೂ ಈಗ ಈತನ ಭವಿಷ್ಯವಾಣಿ ಎಂದರೆ ಕೆಎಲ್ ರಾಹುಲ್ ತಂಡದಲ್ಲಿ ಮತ್ತೆ ಸ್ಥಾನ ಗಿಟ್ಟಿಸುತ್ತಾರೆ ಎಂದಿದ್ದರು. ಅದು ನಿಜವಾಗಿದೆ. ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ಕೊಡ್ತಾರೆ ಎಂದಿದ್ದರು. ಅದು ಆಗಬೇಕಿದೆ. ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಲಿದೆ ಎಂದಿದ್ದಾರೆ. ಅದೂ ಆಗಬೇಕಿದೆ.
ಈಗ ಕಾಯುತ್ತಿರುವುದು ಏಪ್ರಿಲ್ ತಿಂಗಳಿಗೆ. ಪ್ರಶಾಂತ್ ಕಿಣಿ ಪ್ರಕಾರ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಆಗುತ್ತಾರೆ. ಡಿಕೆ ಶಿವಕುಮಾರ್ ಡಿಸಿಎಂ ಆಗಿಯೇ ಕಂಟಿನ್ಯೂ ಆಗುತ್ತಾರೆ. ಅದಾದ ಮೇಲೆ ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ಮತ್ತೊಮ್ಮೆ ಚುನಾವಣೆ ನಡೆಯುತ್ತದೆ. ಆಗ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.
ಇದು ಭವಿಷ್ಯದ ಕುತೂಹಲಕ್ಕಾಗಿ, ಅಷ್ಟೇ.