ನಟ ಶಿವಣ್ಣ ಅವರು ಆಸ್ಪತ್ರೆ ಸೇರಿದಾಗಿನಿಂದ, ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಬಂದಾಗಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸುಳ್ ಸುದ್ದಿ, ಉತ್ಪ್ರೇಕ್ಷಿತ ಸುದ್ದಿಗಳೂ ರಾರಾಜಿಸುತ್ತಿದೆ. ಇದಕ್ಕೆ ಬ್ರೇಕ್ ಹಾಕಲೆಂದು ಸ್ವತಃ ಶಿವಣ್ಣ ತಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ಹೇಳಿಕೊಂಡರು. ಅದನ್ನೂ ತಿರುಚಿ ತಿರುಚಿ ಸುಳ್ಳು ಸುದ್ದಿ ಹಬ್ಬಿಸಲಾಯ್ತು. ಶಿವಣ್ಣಗೀಗ ವಯಸ್ಸು 62. ಇನ್ನು ಶಿವಣ್ಣ ಬಗ್ಗೆ ಊಹಾಪೋಹ, ಕಪೋಲಕಲ್ಪಿತ ವರದಿ ಮಾಡುವುದನ್ನೇ ಪ್ಯಾಷನ್ ಮಾಡಿಕೊಂಡಿರುವವರೂ ಇದ್ದಾರೆ. ಇವುಗಳಿಗೆಲ್ಲ ಬ್ರೇಕ್ ಹಾಕುವುದಕ್ಕೆ ಎಂದೇ ಮಧು ಬಂಗಾರಪ್ಪ ಖಚಿತ ಮಾಹಿತಿ ಕೊಟ್ಟಿದ್ದಾರೆ.
ನಟ ಶಿವರಾಜ್ ಕುಮಾರ್ ಅಮೆರಿಕದಲ್ಲಿ ಮಿಯಾಮಿ ಕ್ಯಾನ್ಸರ್ ಇನ್ಸ್ ಟಿಟ್ಯೂಟ್ ನಲ್ಲಿ ಸರ್ಜರಿ ಕೂಡ ಮಾಡಿಸಿಕೊಂಡಿದ್ದಾರೆ. ಗುಣಮುಖರಾಗುತ್ತಿದ್ದು ಜನವರಿ 25ರಂದು ಭಾರತಕ್ಕೆ ವಾಪಸ್ ಬರುತ್ತಿರುವ ಶಿವಣ್ಣ ರಿಕವರ್ ಆಗುತ್ತಾರೆ. ಮಧು ಬಂಗಾರಪ್ಪ ಶಿವಣ್ಣನ ಬಾಮೈದ, ಗೀತಾ ಅವರ ತಮ್ಮ, ಶಿಕ್ಷಣ ಸಚಿವರೂ ಹೌದು. ಅಲ್ಲದೆ ಸದ್ಯಕ್ಕೆ ಶಿವಣ್ಣ ಅವರನ್ನು ಆಪರೇಷನ್ ಆದ ನಂತರ ಭೇಟಿಯಾಗಿ ವಾಪಸ್ ಬಂದಿರುವ ವ್ಯಕ್ತಿಯೂ ಹೌದು. ಶಿವಣ್ಣನ ಸರ್ಜರಿ ವಿವರಗಳನ್ನು ಕೇಳುತ್ತಿದ್ದರೆ, ಶಿವಣ್ಣ ಇಷ್ಟೆಲ್ಲ ನೋವು ತಡ್ಕೊಂಡು ಆಪರೇಷನ್ ಮಾಡಿಸಿಕೊಂಡರಾ ಎನ್ನುವ ಆತಂಕ ಕಣ್ಣ ಮುಂದೆ ಥಟ್ಟಂತ ಬರುತ್ತದೆ.
ಶಿವಣ್ಣ ಅವರಿಗೆ ಆಗಿರೋದು ರೊಬಾಟಿಕ್ ಸರ್ಜರಿ ಅಲ್ಲ, ಮ್ಯಾನ್ಯುಯಲ್ ಆಪರೇಷನ್. ನಾಲ್ಕು ಮಕ್ಕಾಲು ತಾಸು ನಡೆದ ಸರ್ಜರಿಯಲ್ಲಿ ಒಟ್ಟು ಆರು ಆಪರೇಷನ್ ಮಾಡಿದ್ದಾರೆ. ಒಳಗಡೆ ಅವರಿಗೆ ಒಟ್ಟು 180 ಹೊಲಿಗೆಗಳನ್ನು ಹಾಕಲಾಗಿದೆ.
ಶಿವಣ್ಣನ ಹೃದಯ ಹಾಗೂ ತಲೆಯ ಭಾಗದಲ್ಲೂ ಸ್ಟಂಟ್ ಅಳವಡಿಸಿದ್ದಾರಂತೆ. ತಲೆಯ ಭಾಗದಲ್ಲಿ ಸ್ಟಂಟ್ ಎಂದರೆ ಅರ್ಥವಾಗುತ್ತಿಲ್ಲ. ಇದು ಹೊಸ ವೈದ್ಯಕೀಯ ಮಾಹಿತಿ. ತಲೆಗೆ ಸ್ಟಂಟ್ ಹಾಕುವುದು ಹೇಗೆ.. ಎಂಬುದು ಅರ್ಥವಾಗದ ಸಂಗತಿ. ಆದರೆ ವಿಷಯ ಗಂಭೀರವಾಗಿಯೇ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು.
ವೈದ್ಯರೇನೋ ಕ್ಯಾನ್ಸರ್ ಮುಕ್ತ ಎಂದು ಹೇಳಿದ್ದಾರೆ. ಬ್ಲಾಡರ್ ರೀ ಕನ್ಸ್ಟ್ರಕ್ಷನ್ ಶಸ್ತ್ರ ಚಿಕಿತ್ಸೆಯನ್ನು ಐದೂವರೆ ತಾಸು ಮಾಡಬೇಕಿತ್ತು. ಆದರೆ ಆಪರೇಷನ್ ನಾಲ್ಕು ಮುಕ್ಕಾಲು ತಾಸುಗಳಲ್ಲೇ ಮುಗಿಯಿತು. ಶಿವಣ್ಣ ಅವರಿಗೀಗ 62 ವರ್ಷ ಎಂದು ಹೇಳಿರುವ ಮಧು ಬಂಗಾರಪ್ಪ, ಶಿವಣ್ಣ ಅವರೀಗ ದಿನಕ್ಕೆ ಐದಾರು ಸಾವಿರ ಸ್ಟೆಪ್ಸ್ ನಡೀತಿದ್ದಾರೆ. ಅಂದರೆ ದಿನಕ್ಕೆ ಐದಾರು ಕಿಲೋ ಮೀಟರ್ ವಾಕಿಂಗ್. ಹಾಸ್ಪಿಟಲ್ ಎದುರು ಒಂದು ಲೇಕ್ ಇದೆಯಂತೆ. ಅಲ್ಲಿಯೇ ಐದಾರು ರೌಂಡ್ ಹಾಕ್ತಿದ್ದಾರಂತೆ. ಶಿವಣ್ಣ ಅವರಿಗೆ ಒಟ್ಟಾರೆಯಾಗಿ 6 ಆಪರೇಷನ್ ಆಗಿವೆ. ಅದೂ ಏಕಕಾಲಕ್ಕೆ ಆಗಿವೆ ಎಂದು ಮಾಹಿತಿ ನೀಡಿದ್ದಾರೆ ಮಧು ಬಂಗಾರಪ್ಪ.
ಇನ್ನು, ಶಿವಣ್ಣನಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಬೇಲೂರಿನವರಂತೆ. ಆದರೆ ಓದಿ ಬೆಳೆದಿದ್ದು ಎಲ್ಲಾ ಚೆನ್ನೈನಲ್ಲಿ. ಅವರು ವಿದೇಶದಲ್ಲಿ ಸೆಟ್ಲ್ ಆಗಿ 36 ವರ್ಷಗಳಾಗಿವೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ. ಆಪರೇಷನ್ ಆದ 4 ಗಂಟೆಗಳ ನಂತರ ಶಿವಣ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ ಎಂದು ಹೇಳಿದ್ದಾರೆ.
ಮಾಹಿತಿ ಗೊತ್ತಿಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಚರ್ಚೆ ಆಯ್ತು, ಕೆಲವರು ತಪ್ಪು ಮಾಡ್ತಾರೆ. ಅದೆಲ್ಲಾ ನಿಲ್ಲಿಸಬೇಕು. ಇದು ಬ್ಲಾಡರ್ ರೀ-ಕನ್‌ಸ್ಟ್ರಕ್ಷನ್ ಆಗಿದೆ ಅಷ್ಟೇ ಎಂದಿರುವ ಮಧು ಬಂಗಾರಪ್ಪ ತಪ್ಪು ಮತ್ತು ಸುಳ್ಳು ಮಾಹಿತಿ ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನಾದರೂ ಶಿವಣ್ಣ ಆರೋಗ್ಯದ ಬಗ್ಗೆ ಸುಳ್ ಸುಳ್ಳೇ ವರದಿ ನಿಲ್ಲಲಿ. ಹಾಗೆ ನೋಡಿದರೆ ಪ್ರತೀ ಬಾರಿ ಇಂತಹದ್ದು ಆದಾಗ ಮಾಧ್ಯಮಗಳೇ ಸುಳ್ಳು ಸುದ್ದಿ ಮಾಡುತ್ತಿದ್ದವು. ಸೋಷಿಯಲ್ ಮೀಡಿಯಾ ತಿದ್ದುತ್ತಿದ್ದವು. ಆದರೆ ಶಿವಣ್ಣನ ವಿಚಾರದಲ್ಲಿ ಮಾಧ್ಯಮಗಳು ಇನ್ನಿಲ್ಲದ ಸಂಯಮ ವಹಿಸಿದ್ದರೆ, ಸೋಷಿಯಲ್ ಮೀಡಯಾದಲ್ಲಿ ಮನಸೋಇಚ್ಚೆ ಸುದ್ದಿಗಳು ಹರಿದಾಡುತ್ತಿವೆ.