ʻರಾಜ್ಯಾಧ್ಯಕ್ಷರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಸಭೆಯಲ್ಲಿ ಚರ್ಚೆಯೇ ಆಗಿಲ್ಲ’’ ಇದು ಜೆಡಿಎಸ್ ಮುಖಂಡರ ಜೊತೆಗಿನ ಸಭೆಯ ಬಳಿಕ ಕುಮಾರಸ್ವಾಮಿ ಹೇಳಿರೋ ಮಾತು. ಆದರೆ ಜೆಡಿಎಸ್ ಮೂಲಗಳ ಪ್ರಕಾರ, ನಿಖಿಲ್ ಅವರಿಗೆ ಪಟ್ಟ ಕಟ್ಟುವ ಬಗ್ಗೆ ಪಕ್ಷದ ಶಾಸಕರು, ಮುಖಂಡರ ಒಂದು ವಲಯದಲ್ಲಿ ಒಪ್ಪಿಗೆಯಿದೆ. ದೇವೇಗೌಡರ ಕುಟುಂಬದವರ ಕೈಯ್ಯಲ್ಲೇ ಪಕ್ಷದ ಚುಕ್ಕಾಣಿಯಿದ್ದರೆ ಸೂಕ್ತ ಎಂಬ ಭಾವನೆ ಹಲವರಲ್ಲಿದೆ. ಆದರೆ, ಈ ಗುಟ್ಟನ್ನು ಕುಮಾರಸ್ವಾಮಿ ಬಿಟ್ಟು ಕೊಟ್ಟಿಲ್ಲ.
ಇನ್ನು ಸಭೆಯಲ್ಲಿ ಜೆಡಿಎಸ್‌ಗೆ ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆಗೆ ಚುನಾವಣೆ ನಡೆಸಲು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ಮತ್ತು ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಸ್ಥಾನಕ್ಕೆ ಸೂಕ್ತ ಎಂದು ಒಲವು ವ್ಯಕ್ತವಾಗಿದೆ.
ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ ಎಂದಿರುವ ಕುಮಾರಸ್ವಾಮಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಆದ್ಯತೆ ಎಂದು ಘೋಷಿಸಿದರು.
ವಾರದಲ್ಲಿ 4 ದಿನ ದಿಲ್ಲಿಯ ಸಚಿವಾಲಯದಲ್ಲಿ ಕೆಲಸ, ಒಂದರಿಂದ ಎರಡು ದಿನ ನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಕಾರ್ಖಾನೆಗಳಿಗೆ ಭೇಟಿ ನೀಡುತ್ತೇನೆ. ಉಳಿದೆಲ್ಲ ಸಮಯ ಪಕ್ಷದ ಸಂಘಟನೆಗೆ ಮೀಸಲು ಎಂದ ಕುಮಾರಸ್ವಾಮಿ, ಪಕ್ಷದ ಸಂಘಟನೆ, ಸಭೆ, ಪ್ರವಾಸ, ಮಂಡ್ಯ ಕ್ಷೇತ್ರಕ್ಕೆ ಭೇಟಿ ನೀಡುವುದಕ್ಕೆ ವೇಳಾಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆಎಂದರು.
ಇನ್ನು ಸಭೆಯಲ್ಲಿ ಮಾತನಾಡಿದ ದೇವೇಗೌಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತು ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕಾಂಗ್ರೆಸ್ ಹೊಂಚು ಹಾಕುತ್ತಿದೆ. ಯಾವುದೇ ಕಾರಣಕ್ಕೂ ಅದರ ಕನಸು ಈಡೇರುವುದಿಲ್ಲ ಎಂದು ಗುಡುಗಿದ್ದಾರೆ.
ಮುಂದಿನ ಮಾರ್ಚ್ ತಿಂಗಳಿಂದ ನಾನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಕಾರ್ಯಕರ್ತರ ಮನೆಗಳಲ್ಲಿಯೇ ವಾಸ್ತವ್ಯ ಹೂಡಿ ಪಕ್ಷ ಕಟ್ಟುತ್ತೇನೆ ಎಂದಿರುವ ದೇವೇಗೌಡ ನಮ್ಮದು ಸಮರ್ಥ ನಾಯಕರ ಹಾಗೂ ಸಮರ್ಥ ಕಾರ್ಯಕರ್ತರ ಪಕ್ಷ. ನಮ್ಮ ಪಕ್ಷವನ್ನು ಬೇರೆಯವರು ಮುಗಿಸುವುದು ಅಸಾಧ್ಯ. ಮಾರಸ್ವಾಮಿ ಅವರನ್ನು ಮುಗಿಸಿದರೆ ಜೆಡಿಎಸ್ ಮುಗಿದು ಹೋಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಅದಕ್ಕೆ ಕಾರಣ ಇಷ್ಟೇ. ಕುಮಾರಸ್ವಾಮಿ ಅವರ ಹಿಂದೆ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಅವರು ಬಲಿಷ್ಠವಾಗಿ ನಿಂತಿದ್ದಾರೆ. ಹೀಗಾಗಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ ಎಂದಿದ್ದಾರೆ.
ಇದೆಲ್ಲದರ ಮಧ್ಯೆ ನಿಖಿಲ್ ರಾಜ್ಯಾಧ್ಯಕ್ಷರಾಗಬಹುದು ಎಂಬುದಕ್ಕೆ ಸುಳಿವು ಕೊಟ್ಟಿರುವ ದೇವೇಗೌಡ ಜೆಡಿಎಸ್ ಕುಟುಂಬ ಆಧಾರಿತ ಪಕ್ಷ ಎಂದು ಕಾಂಗ್ರೆಸ್ ಹೇಳುತ್ತದೆ. ಯಾರಾದರೂ ಒಮ್ಮೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಿ ಅಲ್ಲಿ ಗೋಡೆಗಳ ಮೇಲೆ ನೇತು ಹಾಕಿರುವ ಫೋಟೋಗಳನ್ನು ಒಮ್ಮೆ ನೋಡಿ. ಕುಟುಂಬ ಆಧಾರಿತ ಪಾರ್ಟಿ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದಿದ್ದಾರೆ. ಅದು ಪರೋಕ್ಷವಾಗಿ ಗೌಡರು ಕೊಟ್ಟಿರುವ ಸೂಚನೆ ಎಂದು ಜೆಡಿಎಸ್ ನಾಯಕರು ಅರ್ಥ ಮಾಡಿಕೊಳ್ತಿದ್ದಾರೆ.