ಮೊದಲಿಗೆ ಪಾರ್ವತಮ್ಮ. ಅದಾದ ಮೇಲೆ ಅಶ್ವಿನಿ. ಆಮೇಲೆ ಗೀತಾ. ಇದೀಗ ನಿವೇದಿತಾ. ಡಾ.ರಾಜ್ ಕುಟುಂಬದಿಂದ ಹೊರಬರುತ್ತಿರುವ ನಾಲ್ಕನೇ ನಿರ್ಮಾಪಕಿ ನಿವೇದಿತಾ. ಕನ್ನಡ ಚಿತ್ರರಂಗದ ಹೆಮ್ಮೆಯಾಗಿರುವ ಡಾ.ಪಾರ್ವತಮ್ಮ ರಾಜ್ ಕುಮಾರ್, 80ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ಮಾಪಕಿಯಾಗಿದ್ದರು. ಇದರಲ್ಲಿನ ವಿಶೇಷತೆ ಎಂದರೆ ಪಾರ್ವತಮ್ಮ ನಿರ್ಮಾಣದ ಶೇಕಡ ಶೇ.99 ಚಿತ್ರಗಳು ಯಶಸ್ಸು ಕಂಡಿವೆ. ಕಥೆ, ಚಿತ್ರಕಥೆ, ಪ್ರೆಸೆಂಟೇಷನ್ ಮೇಲೆ ಅಷ್ಟು ಹಿಡಿತವಿದ್ದ ಪಾರ್ವತಮ್ಮನವರ ಶಕ್ತಿ, ಡಾ.ರಾಜ್ ಕುಟುಂಬದ ಶಕ್ತಿಯೂ ಆಗಿತ್ತು.
ಪಾರ್ವತಮ್ಮನವರ ನಂತರ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಗೀತಾ ಶಿವರಾಜ್ ಕುಮಾರ್ ಗೀತಾ ಪಿಕ್ಚರ್ಸ್ ನಡೆಸುತ್ತಿದ್ದಾರೆ. ಇಬ್ಬರೂ ನಿರ್ಮಾಪಕಿಯಾಗಿ ಯಶಸ್ಸು ಕಂಡಿದ್ದಾರೆ. ಇದೀಗ ನಿವೇದಿತಾ ಕೂಡಾ ಪ್ರೊಡ್ಯೂಸರ್ ಆಗಿದ್ದಾರೆ. ನಿವೇದಿತಾ ಶಿವರಾಜ್ ಕುಮಾರ್, ನಿರ್ಮಾಪಕಿಯಾಗಿರುವುದು ಹೊಸ ವಿಷಯ ಏನಲ್ಲ.
ಇದೀಗ ಅವರ ನಿರ್ಮಾಣದ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಮುಂದಿನ ತಿಂಗಳು ಏಪ್ರಿಲ್ 24ರಂದು ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಅಂದು ಡಾ.ರಾಜ್ ಕುಮಾರ್ ಹುಟ್ಟುಹಬ್ಬವೂ ಹೌದು.
ನಮ್ಮ ತಂದೆಯ ಹುಟ್ಟುಹಬ್ಬದ ದಿನವೇ ನನ್ನ ಮಗಳು ನಿರ್ಮಾಣ ಮಾಡಿರುವ ಮೊದಲ ಸಿನಿಮಾ ರಿಲೀಸ್ ಆಗುತ್ತಿರುವುದು ನನಗೆ ಖುಷಿ ನೀಡಿದೆ. ನಮ್ಮ ಕುಟುಂಬದ ಮೇಲೆ ಜನರು ತೋರಿಸಿರುವ ಎಲ್ಲಾ ಪ್ರೀತಿಯು ಅಪ್ಪಾಜಿಯಿಂದ ಬಂದಿದೆ. ಎಲ್ಲಾ ಅಭಿಮಾನಿಗಳು ಮತ್ತು ಕನ್ನಡ ಸಿನಿಪ್ರೇಮಿಗಳ ನಿರಂತರ ಬೆಂಬಲಕ್ಕೆ ಧನ್ಯವಾದಗಳು” ಎನ್ನುತ್ತಾರೆ ಶಿವರಾಜ್ ಕುಮಾರ್.
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾದ ಹೀರೋ ವಂಶಿ. ಅವರೇ ನಿರ್ದೇಶಕರೂ ಹೌದು. ರಚನಾ ಇಂದರ್ ನಾಯಕಿಯಾಗಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಳಾ ಬಿರಾದರ್, ಮೂಗು ಸುರೇಶ್ ಮುಂತಾದವರು ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ. ರಘು ನಿಡುವಳ್ಳಿ ಅವರ ಸಂಭಾಷಣೆ ಬರೆದಿದ್ದಾರೆ.
ನಿವೇದಿತಾ ಅವರಿಗೆ ಇರುವುದು ನಿರೀಕ್ಷೆಯ ಭಾರ. ಇದನ್ನು ನಿವೇದಿತಾ ಅವರ ಅಪ್ಪ, ಚಿಕ್ಕಪ್ಪ ಹಾಗೂ ಅಣ್ಣಂದಿರೂ ಕೂಡಾ ಎದುರಿಸಿದ್ದವರೇ. ಏಕೆಂದರೆ ನಟರಾಗಿ ಅವರಿಡುವ ಪ್ರತಿ ಹೆಜ್ಜೆಯನ್ನೂ, ಪ್ರತಿ ಚಿತ್ರವನ್ನೂ ಡಾ.ರಾಜ್ ಅವರೊಂದಿಗೆ ಹೋಲಿಸಿ ನೋಡ್ತಾರೆ. ಆ ನಿರೀಕ್ಷೆ ಮುಟ್ಟುವುದು ಅಸಾಧ್ಯದ ಮಾತು.
ಇನ್ನು ನಿರ್ಮಾಪಕಿಯಾಗಿ ಬಂದರೆ, ಅಜ್ಜಿ ಪಾರ್ವತಮ್ಮ. ಪ್ರತಿಯೊಂದನ್ನೂ ಅಜ್ಜಯ ನಿರ್ಮಾಣದ ಬಗ್ಗೆ ಹೋಲಿಸಿ ನೋಡ್ತಾರೆ. ಅಶ್ಚಿನಿ ಮತ್ತು ಗೀತಾ ಇಬ್ಬರೂ ಕೂಡಾ ಒಂದು ಹಂತದವರೆಗೆ ಗೆದ್ದಿದ್ದಾರೆ. ಇದೀಗ ನಿವೇದಿತಾ ಈ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ. ನಿವೇದಿತಾ ಶಿವರಾಜ್ ಕುಮಾರ್ ಅವರು ಈ ಹಿಂದೆ ಕಿರುತೆರೆಯಲ್ಲಿ ನಿರ್ಮಾಣ ಮಾಡಿದ್ದರು. ಅದು ದೊಡ್ಡ ಯಶಸ್ಸು ಕಂಡಿಲ್ಲವಾದರೂ, ಓಕೆ ಓಕೆ ಎಂಬಲ್ಲಿಗೆ ಗೆದ್ದಿತ್ತು. ಈಗ ಸಿನಿಮಾ. ಪ್ರೇಕ್ಷಕರ ತೀರ್ಪು ಅತ್ಯಂತ ವೇಗವಾಗಿ ಸಿಗಲಿದೆ. ನಿವೇದಿತಾ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.