ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಇದೀಗ ಎರಡು ಪ್ರಕರಣಗಳಲ್ಲಿ ಸಾಕ್ಷಿ ಸಿಕ್ಕಿದೆ. ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಕೇಸುಗಳಿಗೆ ದೊಡ್ಡ ಬಲ ಸಿಕ್ಕಿದೆ. ಇಬ್ಬರ ಕೇಸುಗಳಲ್ಲಿ ಡಿಎನ್‌ಎ ಪರೀಕ್ಷೆ ಪಾಸಿಟಿವ್ ಬಂದಿದೆ ಎಂದು ಮೂಲಗಳು ಹೇಳಿವೆ.
2 ದಿನಗಳ ಹಿಂದೆ ಡಿಎನ್‌ಎ ಪರೀಕ್ಷೆ ವರದಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ ಐಟಿ) ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಸಲ್ಲಿಸಿದ್ದಾರೆ. ಇಬ್ಬರು ಎಂದರೆ ಒಬ್ಬಾಕೆ ಮನೆ ಕೆಲಸದವರು. ಇನ್ನೊಬ್ಬ ವ್ಯಕ್ತಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದವರು. ಈ ವರದಿಯಲ್ಲಿ ಮನೆಕೆಲಸದವರು ಹಾಗೂ ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮನೆಯಲ್ಲಿ ಪತ್ತೆ ಯಾದ ಸೀರೆಗಳು, ಒಳ ಉಡುಪು ಗಳಲ್ಲಿ ಸಿಕ್ಕಿದ ವೀರ್ಯಕ್ಕೂ ಪ್ರಜ್ವಲ್ ಅವರ ವೀರ್ಯಕ್ಕೂ ಸಾಮ್ಯತೆ ಇದೆ ಎಂದು ಉಲ್ಲೇಖವಾಗಿದೆ ಎನ್ನಲಾಗಿದೆ.
ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ನಾಲ್ಕು ಪ್ರತ್ಯೇಕ ಪ್ರಕರಣಗಳ ಬಗ್ಗೆ ತನಿಖೆ ನಡೆಸಿರುವ ಸಿಐಡಿ ಎಸ್ ಐ ಟಿ, ಚಾರ್ಜ್‌ಶೀಟ್ ಸಲ್ಲಿಸಿತ್ತು. ಏಪ್ರಿಲ್ ಅಂತ್ಯದಲ್ಲಿ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೊಗಳು ವೈರಲ್ ಆಗಿದ್ದವು. ಪ್ರಜ್ವಲ್ ವಿರುದ್ಧ ಮೊದಲು ಹೊಳೆನರಸೀಪುರ ಠಾಣೆಯಲ್ಲಿ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದರು. ಇದಾದ ಬಳಿಕ ಹೊಳೆನರಸೀಪುರದಲ್ಲಿ ಎರಡು ಹಾಗೂ ಸಿ ಐ ಡಿ ಬಳಿ ಒಂದು ಕೇಸ್ ದಾಖಲಾಗಿದ್ದವು. ಆ ನಾಲ್ಕರಲ್ಲಿ ಎರಡು ಪ್ರಕರಣಗಲ್ಲಿ ಸಾಕ್ಷಿಗಳು ಸಿಕ್ಕಿವೆ.
ಅತ್ಯಾಚಾರಗಳು ನಡೆದಿವೆ ಎನ್ನಲಾದ ಹಾಸನದ ಸಂಸದರ ಅತಿಥಿ ಗೃಹ, ಹೊಳೆನರಸೀಪುರ ಮತ್ತು ಬೆಂಗಳೂರಿನ ಬಸವನಗುಡಿ ಮನೆಗಳು ಹಾಗೂ ತೋಟದ ಮನೆಗಳಲ್ಲಿ ಬೆಡ್ ಶೀಟ್, ಕೆಲ ಬಟ್ಟೆಗಳು ಹಾಗೂ ಸಂತ್ರಸ್ತೆಯರಿಂದ ಸೀರೆಗಳು, ಪೆಟ್ಟಿ ಕೋಟ್‌ಗಳನ್ನು ಜಪ್ತಿ ಮಾಡಿದ್ದರು. ಇವುಗಳಲ್ಲಿ ಪತ್ತೆಯಾದ ಕೂದಲು ಹಾಗೂ ವೀರ್ಯದ ಹೋಲಿಕೆಗೆ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಡಿಎನ್‌ಎ ಪರೀಕ್ಷೆಗೊಳಪಡಿಸಿದ್ದರು.
ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯರ ಸೀರೆಗಳು ಹಾಗೂ ಪೆಟ್ಟಿಕೋಟ್‌ಗಳು ಈಗ ಪ್ರಜ್ವಲ್‌ಗೆ ಕಂಟಕ ತಂದಿವೆ. ತೋಟದ ಮನೆಯಲ್ಲಿ ಕೆಲಸ ಗಾರರು ಉಳಿದುಕೊಳ್ಳಲು ಪ್ರತ್ಯೇಕ ಕೋಣೆ ಯನ್ನು ಪ್ರಜ್ವಲ್ ಕುಟುಂಬದವರು ನೀಡಿ ದ್ದರು. ಈ ಪ್ರಕರಣದ ತನಿಖೆ ವೇಳೆ ತೋಟದ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿದಾಗ ಕೆಲ ಸಗಾರರ ಕೋಣೆಯಲ್ಲಿ ನಾಲ್ಕು ಸೀರೆಗಳು ಹಾಗೂ ಪೆಟ್ಟಿಕೋಟ್‌ಗಳು ಸಿಕ್ಕಿದ್ದವು.
ಡಿಎನ್ಎ ವಿಶ್ಲೇಷಣೆಗೆ ಸಂತ್ರಸ್ತೆಯರು ಹಾಗೂ ಪ್ರಜ್ವಲ್ ಅವರಿಂದ ರಕ್ತ ಮಾದರಿ ಮತ್ತು ಕೂದಲನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಐಟಿ ಅಧಿಕಾರಿಗಳು ಕಳುಹಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಎಫ್ ಎಸ್ಎಎಲ್ ತಜ್ಞರು, ಎಸ್‌ಐಟಿಗೆ ಡಿಎನ್‌ಎ ವರದಿ ಸಲ್ಲಿಸಿ ದ್ದಾರೆ. ಕೆಲವೇ ದಿನಗಳಲ್ಲಿ ಡಿಎನ್‌ಎ ವರದಿ ಆಧರಿಸಿ ನ್ಯಾಯಾಲಯಕ್ಕೆ ಪ್ರಜ್ವಲ್ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿಯನ್ನು ಎಸ್‌ಐಟಿ ಅಧಿಕಾರಿಗಳು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.