ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದರಿಂದ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಇನ್ನೇನು ಮುಗಿಯಿತು ಎಂದುಕೊಂಡಿದ್ದು ತಪ್ಪು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಫೆಬ್ರವರಿ 20 ಕೂಡಾ ಮುಗಿದಿದೆ. ವಿವಾದ, ಭಿನ್ನಮತ, ಬೈಗುಳ, ಬೀದಿಜಗಳ ಮುಗಿದಿಲ್ಲ. ಈ ತಿಂಗಳ 20ರೊಳಗಾಗಿ ಗೊಂದಲ ಬಗೆಹರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಕೊಟ್ಟ ಬೆನ್ನಲ್ಲೇ, ಅದೇ 20ನೇ ತಾರೀಕು ಭಿನ್ನರು ಸಭೆ ನಡೆಸಿ ಚಾಲೆಂಜ್ ಹಾಕಿದ್ದಾರೆ.
ವಿಜಯೇಂದ್ರ ಬದಲಾವಣೆ ಮಾಡಬೇಕು ಎಂಬ ತಮ್ಮ ಬೇಡಿಕೆಯ ವಿಚಾರದಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎನ್ನುವುದು ಯತ್ನಾಳ್ ಬಣದ ನಾಯಕರ ಸಂದೇಶ. ಈ ಸಭೆ ನಡೆಸುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಗಟ್ಟಿಯಾಗಿ ನಿಲ್ಲುತ್ತೇವೆ. ನೋಟಿಸ್‌ಗೆ ಹೆದರುವುದಿಲ್ಲ ಎಂಬ ಮೆಸೇಜ್ ಕೊಟ್ಟಿದ್ಧಾರೆ.
ಸದಾಶಿವನಗರದಲ್ಲಿನ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಪ್ರತಾಪ್ ಸಿಂಹ, ಎನ್.ಆರ್.ಸಂತೋಷ್, ಬಿ.ವಿ.ನಾಯಕ್ ಮತ್ತಿತರರು ಭಾಗಿಯಾಗಿ ಏನ್ ಇವಾಗ.. ಎಂದು ಚಾಲೆಂಜ್ ಹಾಕ್ತಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತಂಡದಿಂದ ಹೊರತರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಯತ್ನಾಳ್ ತಂಡದ ಶಕ್ತಿಯೇ ರಮೇಶ್ ಜಾರಕಿಹೊಳಿ. ಅವರನ್ನು ಸೆಳೆದು ಸಮಾಧಾನ ಮಾಡಿದರೆ ಯತ್ನಾಳ್ ಬಣದ ಶಕ್ತಿಗುಂದುತ್ತದೆ ಎಂಬುದು ವಿಜಯೇಂದ್ರ ಬಣದ ಚಿಂತನೆ. ಹೀಗಾಗಿ ನಮ್ಮ ತಂಡ ಒಗ್ಗಟ್ಟಿನಲ್ಲಿರಬೇಕು. ತಂಡ ಒಡೆಯುವ ಪ್ರಯತ್ನವನ್ನು ಬಿಜೆಪಿಯಲ್ಲೇ ಬೇರೆ ಬೇರೆ ರೀತಿ ನಡೆಸಲಾಗುತ್ತಿದೆ. ಇದಕ್ಕೆಲ್ಲ ಆಸ್ಪದ ನೀಡಬಾರದು ಎಂಬ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ಹೆದರುತ್ತಿರುವುದು ಏಕೆ..?
ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಬಿಜೆಪಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದನ್ನು ಗಮನಿಸಿದರೆ, ಒಂದು ವೇಳೆ ಶಿಸ್ತು ಕ್ರಮ ಕೈಗೊಳ್ಳಲೇಬೇಕಾದ ಪ್ರಸಂಗ ಬಂದರೆ ಯತ್ನಾಳ್ ಅವರನ್ನು ಪಕ್ಷದಿಂದ ಅಮಾನತು ಮಾಡಬಹುದು. ಕನಿಷ್ಠ 3 ತಿಂಗಳಿಂದ ಗರಿಷ್ಠ 6 ವರ್ಷದವರೆಗೆ ಅವರನ್ನು ಅಮಾನತು ಮಾಡುವ ಆಯ್ಕೆ ಬಿಜೆಪಿ ಹೈಕಮಾಂಡ್ ಮುಂದಿದೆ. ಜೊತೆಗೆ ಒಂದು ಚುನಾವಣೆವರೆಗೆ ಯತ್ನಾಳ್‌ಗೆ ಅಮಾನತು ಶಿಕ್ಷೆಯನ್ನು ವಿಧಿಸಬಹುದು. ಪಕ್ಷದಿಂದಲೇ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದರೆ ಅವರು ಸಂಪೂರ್ಣ ಸ್ವತಂತ್ರರಾಗಿ, ಪಕ್ಷದ ವಿರುದ್ಧವೇ ಸಮರ ಸಾರುವ ಸಾಧ್ಯತೆ ಇದೆ. ಹೈಕಮಾಂಡ್ ಹೆದರುತ್ತಿರುವುದು ಇದೊಂದೇ ಕಾರಣಕ್ಕೆ. ಪಕ್ಷದಿಂದ ಅಮಾನತಾದರೆ ಆನಂತರ ಯತ್ನಾಳ್ ಮೇಲೆ ಯಾವುದೇ ಹಿಡಿತ ಇರುವುದಿಲ್ಲ. ಇದೊಂದು ರೀತಿಯಲ್ಲಿ ಬಿಜೆಪಿ ಹೈಕಮಾಂಡಿಗೆ ಉಗುಳಲೂ ಆಗದ, ನುಂಗಲೂ ಆಗದ ಬಿಸಿಬಿಸಿ ತುಪ್ಪ. ಶಿಸ್ತು ಕ್ರಮವಾದರೆ ಯತ್ನಾಳ್ ಸುಮ್ಮನೇ ಕೂರುವ ಜಾಯಮಾನದವರಲ್ಲ. ಆಗ ಬಿಜೆಪಿ ನಾಯಕರ ವಿರುದ್ಧ, ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ಧ ನಡೆಸುವ ವಾಗ್ದಾಳಿ ಮತ್ತಷ್ಟು ಮೊನಚು ಪಡೆಯುವ ಸಾಧ್ಯತೆ ಇದೆ.
ಯತ್ನಾಳ್ ವಿರುದ್ಧ ಕ್ರಮ ಕೈಗೊಂಡರೆ ಪಕ್ಷಕ್ಕೆ ಹಿಂದುತ್ವದ ಮತಗಳು ದೂರವಾಗುತ್ತವೆ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳು ದೂರವಾಗಬಹುದು ಎಂಬ ಆತಂಕವೇನೂ ಬಿಜೆಪಿ ಹೈಕಮಾಂಡಿಗೆ ಇದ್ದಂತಿಲ್ಲ. ಏಕೆಂದರೆ ಯತ್ನಾಳ್ ಮೊನಚು ಮಾತುಗಳು ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಇನ್ನು ಯತ್ನಾಳ್ ಜೊತೆಯಲ್ಲಿರುವ ನಾಯಕರು ಪಕ್ಕದ ಕ್ಷೇತ್ರದಲ್ಲಿಯೂ ಪ್ರಭಾವ ಬೀರುವಷ್ಟು ಪ್ರಭಾವಿಗಳಲ್ಲ. ಇಷ್ಟಿದ್ದರೂ, ಒಂದು ದೊಡ್ಡ ಸಮೂಹದ ವಿರುದ್ಧ ಕ್ರಮ ಕೈಗೊಂಡರೆ ಆಗುವ ಪರಿಣಾಮಗಳು ದೊಡ್ಡದು ಎನ್ನುವ ಕಾರಣಕ್ಕೆ ಹೈಕಮಾಂಡ್ ಹಿಂದುಮುಂದು ನೋಡುತ್ತಿದೆ.
ಏಕವಚನದಲ್ಲೇ ಯತ್ನಾಳ್ ಬೈಗುಳ :
ನನಗೆ ನೋಟಿಸ್ ಬಂದಿದೆ ಎಂಬುದಾಗಿ ಹೇಳೋಕೆ ವಿಜಯೇಂದ್ರ ಯಾರು? ನನಗೆ ನೋಟಿಸ್ ಬಂದಿದೆ ಎಂಬುದು ಅವನಿಗೆ ಹೇಗೆ ಗೊತ್ತು? ಹಾಗಾದರೆ ಅವನೇ ತಾನೇ ನೋಟಿಸ್ ಹಿಂದಿರುವ ಶಕ್ತಿ. ನಾನು ನೋಟಿಸ್‌ಗೆ ಉತ್ತರ ಕೊಟ್ಟಿದ್ದೀನೋ ಇಲ್ಲವೋ ವಿಜಯೇಂದ್ರನನ್ನೇ ಕೇಳಿ ಎಂದು ಏಕವಚನದಲ್ಲೇ ಕೌಂಟರ್ ಕೊಟ್ಟಿದ್ದಾರೆ ಯತ್ನಾಳ್.
ವಿಜಯೇಂದ್ರ ರಿಯಾಕ್ಷನ್ :
ಯತ್ನಾಳ್ ಮಾತನಾಡಿದ್ದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ಎಲ್ಲದ್ದಕ್ಕೂ ಒಂದೇ ಬಾರಿ ಉತ್ತರ ಕೊಡುತ್ತೇನೆ. ನಾನು ಪಕ್ಷದ ರಾಜ್ಯಾಧ್ಯಕ್ಷ. ಮಾಡಲು ಬೇಕಾದಷ್ಟು ಕೆಲಸ ಇದೆ. ಯತ್ನಾಳ್ ಹಿರಿಯರು. ಅವರು ನನಗೆ ಕೇಳಿದ ಪ್ರಶ್ನೆಗೆ ನಾನೇ ಸಮಯ ಬಂದಾಗ ಉತ್ತರಿಸುತ್ತೇನೆ ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ.
ಒಟ್ಟಿನಲ್ಲಿ ಫೆಬ್ರವರಿ 20 ಮುಗಿದಿದೆ. ವಿವಾದ ಮುಗಿದಿಲ್ಲ. ಹೈಕಮಾಂಡ್ ತಣ್ಣಗಾಗಿದೆ.