ದೆಹಲಿ ಬಿಜೆಪಿ ಹೈಕಮಾಂಡ್ ನಿದ್ರೆಯಿಂದ ಎದ್ದಂತೆ ಕಾಣುತ್ತಿದೆ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ನಾಯಕರ ಓಪನ್ ಯುದ್ಧಕ್ಕೆ ಕೊನೆಗೂ ರಿಯಾಕ್ಟ್ ಮಾಡಿದೆ. ಇಬ್ಬರು ಮಾಜಿ ಸಚಿವರು ಹಾಗೂ ಮೂವರು ಹಾಲಿ ಶಾಸಕರಿಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ.. ಎರಡೂ ಬಣದ ನಾಯಕರಿಗೆ ನೋಟಿಸ್ ಕೊಟ್ಟಿದ್ದು, 72 ಗಂಟೆ ಡೆಡ್ ಲೈನ್ ಕೊಟ್ಟಿದೆ.
ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಹಾಲಿ ಶಾಸಕರಾದ ಬಿ.ಪಿ.ಹರೀಶ್, ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ.
ಎಲ್ಲರ ನೊಟೀಸಿನಲ್ಲೂ ಒಂದೇ ಮಂತ್ರ..!
ಐವರು ಮುಖಂಡರಿಗೂ ನೀಡಿರುವ ನೋಟಿಸ್‌ಗಳಲ್ಲಿ ಒಂದೇ ರೀತಿಯ ಮಂತ್ರಪಠಣ ಇದೆ. ‘ಪಕ್ಷದ ಬೆಳವಣಿಗೆಗಳ ಬಗ್ಗೆ ಬಹಿರಂಗ ವೇದಿಕೆಗಳಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ನೀವು ಪಕ್ಷದ ಶಿಸ್ತು ಉಲ್ಲಂಘನೆ ಮಾಡ್ತಿದ್ದೀರಿ. ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ಕೊಡಿ. ಈ ನೋಟಿಸ್ ತಲುಪಿದ 72 ಗಂಟೆಯೊಳಗಾಗಿ ನಿಮ್ಮ ವಿವರಣೆ ತಲುಪಬೇಕು. ಒಂದು ವೇಳೆ ನಿಗದಿತ ಸಮಯದಲ್ಲಿ ನಿಮ್ಮ ವಿವರಣೆ ತಲುಪದೇ ಇದ್ದಲ್ಲಿ ಪಕ್ಷದ ಶಿಸ್ತು ಸಮಿತಿ ತನ್ನ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬಹುದುʼʼ ಎಂದು ಹೇಳಲಾಗಿದೆ.
ಈ ಹಿಂದಿನ ನೊಟೀಸ್ ಕಥೆ ಏನು..?
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಳೆದ ತಿಂಗಳು ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿಗೊಳಿಸಿತ್ತು. ಬಳಿಕ ಯತ್ನಾಳ ಅವರು ವಿವರಣೆಯನ್ನೂ ನೀಡಿದ್ದರು. ಆದರೆ ವಾಗ್ದಾಳಿ ಕಂಟಿನ್ಯೂ ಮಾಡಿದ್ದರು. ಈಗ ನೋಟಿಸ್ ನೀಡಿರುವವರ ಪೈಕಿ ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಸಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಅಲ್ಲಿಗೆ ಬಿಜೆಪಿ ಹೈಕಮಾಂಡ್ ನೊಟೀಸ್ ಅರ್ಥ ಮತ್ತು ಮಹತ್ವ ಎರಡನ್ನೂ ಕಳೆದುಕೊಂಡಿದೆ.
ಅಷ್ಟೇ ಅಲ್ಲ, ಈಗ ನೊಟೀಸ್ ಪಡೆದಿರುವ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಇಬ್ಬರೂ ಬಹಿರಂಗವಾಗಿಯೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಅವರಿಬ್ಬರೂ ಅಧಿಕೃತವಾಗಿ ಬಿಜೆಪಿಯಲ್ಲಿದ್ದಾರಷ್ಟೇ. ಅವರ ದೇಹ, ಮನಸ್ಸು ಎಲ್ಲವೂ ಈಗ ಕಾಂಗ್ರೆಸ್ಸಿನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವೇ ಪ್ರಚಾರ ಮಾಡಿದ್ದವರಿಗೂ ಕೂಡಾ ಈಗ ನೊಟೀಸ್ ಕೊಟ್ಟಿದೆ. ಈ ಎಲ್ಲದರ ಫಲಿತಾಂಶ ಏನೆಂದರೆ ಬಿಜೆಪಿಯ ನೊಟೀಸುಗಳು ಅರ್ಥ ಮತ್ತು ಮಹತ್ವ ಎರಡನ್ನೂ ಕಳೆದುಕೊಂಡಿವೆ. ಈ ನೊಟೀಸ್ ಬಂದು, ವಿಚಾರಣೆ ಆದ ಮೇಲೂ ಕೂಡಾ ಯಾವ ಬದಲಾವಣೆಯೂ ಆಗುವುದಿಲ್ಲ. ಅದಂತೂ ಗ್ಯಾರಂಟಿ.