ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧದ ಭೂಕಬಳಿಕೆ ಆರೋಪ ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗಿದೆ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ ಎದುರಿಸ್ತಾ ಇದ್ದಾರೆ ಕುಮಾರಸ್ವಾಮಿ. ಕುಮಾರಸ್ವಾಮಿ ಅವರಷ್ಟೇ ಅಲ್ಲ, ಸಂಬಂಧಿಕರೂ.. ಬೀಗರೂ ಆಗಿರುವ ಮಾಜಿ ಶಾಸಕ ಡಿಸಿ ತಮ್ಮಣ್ಣ ವಿರುದ್ಧವೂ ಭೂ ಕಬಳಿಕೆ ಆರೋಪ ಇದೆ. ಆದರೆ ಆ ಒತ್ತುವರಿ ತೆರವು ಮಾಡದ ಅಧಿಕಾರಿಗಳಿಗೀಗ ಜೈಲಿಗೆ ಹೋಗುವ ಭಯ ಎದುರಾಗಿದೆ. ಕಾರಣ ಹೈಕೋರ್ಟ್.
ಒತ್ತುವರಿ ತೆರವು ಮಾಡಿಸದೇ ಇದ್ದರೆ, ಇನ್ನೆರಡು ವಾರದಲ್ಲಿ ತೆರವು ಮಾಡಿಸದಿದ್ದರೆ ಅಧಿಕಾರಿಗಳನ್ನು ಜೈಲಿಗೆ ಕಳಿಸಬೇಕಾಗುತ್ತದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾಗೆ ಎಚ್ಚರಿಕೆ ನೀಡಿದೆ ಹೈಕೋರ್ಟ್. ಎಸ್ ಆರ್ ಹಿರೇಮಠ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಗರಂ ಆಗಿದೆ.
ಪ್ರತಿವಾದಿಗಳು ಉನ್ನತ ಸ್ಥಾನದಲ್ಲಿದ್ದಾರೆ ಎಂದು ಕ್ರಮ ಕೈಗೊಂಡಿಲ್ಲವೇ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಸುಮಾರು 5 ವರ್ಷಗಳ ಹಿಂದೆ ಲೋಕಾಯುಕ್ತ ಕೋರ್ಟ್ ಒತ್ತುವರಿ ತೆರವು ಮಾಡಿಸಲು ಸೂಚನೆ ಕೊಟ್ಟಿತ್ತು. ತಹಸೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಆಗಿದೆ ಎಂದು ವರದಿ ಕೊಟ್ಟಿದ್ದರು. ಆ ವರದಿ ನಂತರ ಲೋಕಾಯುಕ್ತ ನ್ಯಾಯಾಲಯ ಒತ್ತುವರಿ ತೆರವಿಗೆ ಆದೇಶ ನೀಡಿತ್ತು. ಆದರೆ 5 ವರ್ಷಗಳಿಂದಲೂ ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ ಆಗಿದೆ.
ʻʻಇನ್ನೆರಡು ವಾರ ಟೈಂ, ಕ್ರಮ ಕೈಗೊಂಡರೆ ಸರಿ.. ಸ್ವಲ್ಪ ದಿನ ಜೈಲಲ್ಲಿದ್ದು ಬಂದರೆ ಸರಿ ಹೋಗುತ್ತೆ. ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆ ಆರೋಪ ನಿಗದಿ ಪ್ರಕ್ರಿಯೆ ಆರಂಭಿಸಲಾಗುವುದು. ನಿಮಗೆಲ್ಲ ಕೋರ್ಟ್ ಆದೇಶ ಪಾಲಿಸುವವರೆಗೆ ಸಂಬಳ ಕಟ್ ಮಾಡಿದರೆ ಆಗ ಗೊತ್ತಾಗುತ್ತದೆ. ಅಧಿಕಾರಿಗಳಿಗೆ ನ್ಯಾಯಾಂಗದ ಭಾಷೆ ಅರ್ಥವಾಗುತ್ತಿಲ್ಲ, ನೀವು ಹೇಳಿದ್ದನ್ನೆಲ್ಲ ಬರೆದುಕೊಳ್ತಿದ್ದೇವೆ. ಸತ್ಯ ಹೇಳಿದ್ರೂ ಸರಿ, ಸುಳ್ಳು ಹೇಳಿದ್ರೂ ಸರಿ, ಅವಕಾಶ ಸಿಕ್ರೆ ನಿಮ್ಮನ್ನೆಲ್ಲ ಫಿಕ್ಸ್ ಮಾಡಿ ಬಿಡ್ತೀನಿʼʼ ಎಂದು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಬೆಂಕಿ ಮಳೆಯನ್ನೇ ಸುರಿಸಿದೆ ಹೈಕೋರ್ಟ್.
ಒತ್ತುವರಿ ತೆರವಿಗೆ ಆದೇಶ ನೀಡಿ ಫೆಬ್ರವರಿ 21ಕ್ಕೆ ವಿಚಾರಣೆ ಮುಂದೂಡಿದೆ. ಈಗ ಕುಮಾರಸ್ವಾಮಿ ಅವರು ಒತ್ತುವರಿ ಮಾಡಿಕೊಂಡಿರುವ 14 ಎಕರೆ ಸರ್ಕಾರಿ ಜಾಗ ತೆರವಾಗುತ್ತದಾ..? ಯಾವಾಗ..? ಅಥವಾ ಅಧಿಕಾರಿಗಳು ಈಗಲೂ ಸುಮ್ಮನಿರುತ್ತಾರಾ..? ಕಾದು ನೋಡಬೇಕಿದೆ.
ಕುಮಾರಸ್ವಾಮಿ ವಿರುದ್ಧದ ಕೇಸ್ ಏನು..?
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಯಾಗಿರುವ ಡಿಸಿ ತಮ್ಮನಣ್ಣ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೆ ನಂಬರ್ಗಳಲ್ಲಿ 14 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತರು 2014ರಲ್ಲಿ ಆದೇಶಿಸಿದ್ದರು. ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ದೂರಿ ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಬಳಿಕ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿನೆ ನೀಡಿತ್ತು. ಆದ್ರೆ, ಇದುವರೆಗೂ ಸರಿಯಾದ ವರದಿ ನೀಡದಿರುವುದರಿಂದ ಇದೀಗ ಹೈಕೋರ್ಟ್ ಗರಂ ಆಗಿದೆ.