ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿನಲ್ಲಿ ಕೊಲೆ ಮಾಡಿ, ನಂತರ ಮೃತದೇಹವನ್ನು ಅರೆಸ್ಟ್ ಆಗಿರುವ ದರ್ಶನ್ & ಗ್ಯಾಂಗಿನವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಲೇ ಇದೆ. ನಟ ದರ್ಶನ್ ತೂಗುದೀಪ ಅವರಿಗೇ ಇನ್ನೂ ಜಾಮೀನು ಸಿಕ್ಕಿಲ್ಲ. ಜಾಮೀನು ವಿಚಾರಣೆ ವೇಳೆ ದರ್ಶನ್ ಪರ ಸಿವಿ ನಾಗೇಶ್ ವಾದ ಕೇಳಿದವರಿಗೆ ಹೌದಾ.. ಚಾರ್ಜ್‌ಶೀಟ್ ಹೀಗಿದ್ಯಾ ಅನ್ನೋ ಪ್ರಶ್ನೆ ಹುಟ್ಟಿತ್ತು. ಇದೀಗ ಅದಕ್ಕೆ ಪ್ರತಿಯಾಗಿ ಪ್ರಸನ್ನ ಕುಮಾರ್ ವಾದ ಮಂಡಿಸುತ್ತಿದ್ದರೆ, ಇಬ್ಬರು ಮದಗಜಗಳ ಕಾನೂನು ಸಮರ ಹೇಗಿರುತ್ತೆ ಅನ್ನೋದ್ರ ಅಂದಾಜು ಸಿಕ್ಕಿದೆ.
ಸಿವಿ ನಾಗೇಶ್ ವಾದ.. ಪ್ರಸನ್ನ ಕುಮಾರ್ ಪ್ರತಿವಾದ :
ಸಿವಿ ನಾಗೇಶ್ ತಮ್ಮ ವಾದದಲ್ಲಿ ‘ರೇಣುಕಾ ಸ್ವಾಮಿ ಎಂಬ ಒಬ್ಬ ವ್ಯಕ್ತಿ ಇದ್ದಾನೆ ಎಂಬುದೇ ಆರೋಪಿಗಳಿಗೆ ಗೊತ್ತಿರಲಿಲ್ಲ’ ಎಂದು ವಾದಿಸಿದ್ದರು.
ಅದಕ್ಕೆ ಪ್ರತಿಯಾಗಿ ವಾದಿಸಿರುವ ಪ್ರಸನ್ನ ‘ರೇಣುಕಾಸ್ವಾಮಿ ಮುಂಚೆಯೇ ಪವಿತ್ರಾಗೆ ಇನ್ಸ್ಟಾಗ್ರಾಂನಲ್ಲಿ ಸಂದೇಶ ಕಳಿಸಿದ್ದ. ಮರ್ಮಾಂಗದ ಚಿತ್ರ ಕಳಿಸಿ ಹೇಗಿದೆ ಎಂದು ಕೇಳಿದ್ದ. ಅದಕ್ಕೆ ಪವಿತ್ರಾ ‘ಸೂಪರ್’ ಎಂದು ಮೆಸೇಜ್ ಮಾಡಿದ್ದರು. ಅದಾದ ಬಳಿಕ ಡ್ರಾಪ್ ಯುವರ್ ನಂಬರ್ ಎಂದು ಕೇಳಿ, ನಂಬರ್ ತರಿಸಿಕೊಂಡಿದ್ದರು. ಅದಾದ ಮೇಲೆ ಪವಿತ್ರಾ ಅವರಂತೆ ಮೆಸೇಜ್ ಮಾಡಿದ್ದ ಪ್ರಕರಣದ ಮೂರನೇ ಆರೋಪಿ ಪವನ್, ರೇಣುಕಾ ಸ್ವಾಮಿಯ ವಿಳಾಸ, ಕೆಲಸ ಮಾಡುವ ಸ್ಥಳ ಮುಂತಾದ ಮಾಹಿತಿ ತರಿಸಿಕೊಂಡಿದ್ದ. ಮಾಹಿತಿಗಳನ್ನೆಲ್ಲ ಚಿತ್ರದುರ್ಗದ ದರ್ಶನ್ ಸೇನೆಯ ಸದಸ್ಯರಿಗೆ ಕಳಿಸಿ, ಮತ್ತೊಮ್ಮೆ ಕನ್ಫರ್ಮ್ ಮಾಡ್ಕೊಂಡಿದ್ದ. ದರ್ಶನ್ ಸೇನೆಯವರು ಆಟೋನಲ್ಲಿ ರೇಣುಕಾ ಸ್ವಾಮಿಯನ್ನು ಫಾಲೋ ಮಾಡಿ ಕನ್ಫರ್ಮ್ ಮಾಡಿದ್ದರು. ಆಮೇಲೆ ಜೂನ್ 8 ರಂದು ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದರು. ಪ್ರಕರಣದ ಬಗ್ಗೆ ಇನ್ನೂ ಕೆಲವು ಆರೋಪಿಗಳಿಗೆ ಮೊದಲೇ ಮಾಹಿತಿ ಇತ್ತು ಎಂದು ವಾದಿಸಿದ್ದಾರೆ.
ಆಗಿರುವುದು ಒಂದೇ ಗಾಯ ಎಂದು ವಾದಿಸಿದ್ದ ಸಿವಿ ನಾಗೇಶ್ : ರೇಣುಕಾಸ್ವಾಮಿ ದೇಹದ ಮೇಲೆ ಆಗಿದ್ದುದು ಒಂದೇ ಗಂಭೀರ ಗಾಯ ಎಂಬ ವಾದಕ್ಕೆ ಉತ್ತರ ನೀಡಿರುವ ಪ್ರಸನ್ನ ಕುಮಾರ್ ಪೋಸ್ಟ್ ಮಾರ್ಟಂ ವರದಿಯನ್ನು ಡೀಟೈಲ್ ಆಗಿ ಓದಿದ್ದಾರೆ. ಪೋಸ್ಟ್ ಮಾರ್ಟಂ ಪ್ರಕಾರ, 13 ಗಾಯಗಳಿಂದ ರಕ್ತಸ್ರಾವ ಆಗಿತ್ತು. ಮರ್ಮಾಂಗದಲ್ಲೂ ಗಾಯವಾಗಿತ್ತು. ರೇಣುಕಾ ಸ್ವಾಮಿಯ ಎದೆಯ ಮೂಳೆ ಮುರಿದು ಹೋಗಿದ್ದನ್ನು ಹೇಳಿ ಎದೆ ಭಾಗದಲ್ಲಿಯೇ 17 ಒಳಗಾಯಗಳಾಗಿವೆ ಎಂಬ ದಾಖಲೆ ಮುಂದಿಟ್ಟಿದ್ದಾರೆ.
ಧನರಾಜ್, ಪವನ್ ಮತ್ತು ನಂದೀಶ್ ಕಟ್ಟಿಗೆಯಲ್ಲಿ ರೇಣುಕಾ ಸ್ವಾಮಿಗೆ ಹೊಡೆದಿದ್ದಾರೆ. ಧನರಾಜ್, ಶಾಕ್ ಕೊಟ್ಟಿದ್ದಾನೆ. ಆಗ ರೇಣುಕಾ ಸ್ವಾಮಿ ಕೈ ಮುಗಿಯುತ್ತಿರುವ ಫೋಟೊವನು ವಿನಯ್‌ಗೆ ಕಳಿಸಲಾಗಿದೆ. ಆ ಫೋಟೊವನ್ನು ನೋಡಿ ದರ್ಶನ್ ಬಂದಿದ್ದಾರೆ. ಆಗ ರೇಣುಕಾ ಸ್ವಾಮಿಯನ್ನು ಎದ್ದು ನಿಲ್ಲಿಸಿ ದರ್ಶನ್ ಎದೆಗೆ ಒದ್ದಿದ್ದಾರೆ. ರೇಣುಕಾ ಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಆ ಬಳಿಕ ಮೆಸೇಜ್ಗಳನ್ನು ಓದುವಂತೆ ಹೇಳಿದ್ದಾರೆ. ಪವನ್ ಆ ಮೆಸೇಜ್ ಮೆಸೇಜ್ ಓದುತ್ತಿದ್ದಂತೆ ರೇಣುಕಾ ಸ್ವಾಮಿಯನ್ನು ಹೊಡೆದು ಮನಬಂದಂತೆ ಒದ್ದಿದ್ದಾರೆ. ಆಗ ರೇಣುಕಾಸ್ವಾಮಿಯ ಮರ್ಮಾಂಗಕ್ಕೂ ಒದ್ದಿದ್ದಾರೆ. ಕೆಳಗೆ ಬಿದ್ದ ರೇಣುಕಾಸ್ವಾಮಿ ಎದೆಯ ಮೇಲೆ ಹತ್ತಿ ನಿಂತಿದ್ದಾರೆ. ಆಗ ಬಹುಷಃ ರೇಣುಕಾ ಸ್ವಾಮಿ ಎದೆ ಮೂಳೆ ಮುರಿದಿದೆ ಎಂದು ವಿವರಿಸಿದ್ದಾರೆ.
ಸಾವಿನ ಸಮಯ ಸರಿಯಾಗಿಲ್ಲ ಎಂದು ವಾದಿಸಿದ್ದ ಸಿವಿ ನಾಗೇಶ್ : ಇನ್ನು ಪೋಸ್ಟ್ ಮಾರ್ಟಂನಲ್ಲಿ ಸಾವಿನ ಸಮಯವನ್ನು ಸರಿಯಾಗಿ ತಿಳಿಸಿಲ್ಲ ಎಂಬ ವಾದಕ್ಕೆ ಉತ್ತರಿಸಿರುವ ಪ್ರಸನ್ನ ಕುಮಾರ್ ಹೊಟ್ಟೆಯಲ್ಲಿ ಸಿಕ್ಕ ಹಸಿರು ದ್ರವದ ಪ್ರಕಾರ ಇದಕ್ಕೆ ದೊಡ್ಡ ಸಾಕ್ಷಿ. ಸಾಯುವುದಕ್ಕೆ ಎರಡು ಗಂಟೆ ಮುನ್ನ ರೇಣುಕಾಸ್ವಾಮಿಗೆ ಊಟ ಮಾಡಿಸಿದ್ದಾರೆ. ಅದು ಪೋಸ್ಟ್ ಮಾರ್ಟಂ ರಿಪೋರ್ಟಿನಲ್ಲಿದೆ. ಎದೆಯ ಪಕ್ಕೆಲುಬು ಭಾಗದಲ್ಲಿಯೇ 17 ಗಾಯಗಳು ಸೇರಿದಂತೆ ಒಟ್ಟು 39 ಗಾಯಗಳಾಗಿವೆ ಎಂದು ವಾದಿಸಿದ್ದಾರೆ. ಊಟ ಆದ ನಂತರ ಎರಡು ಗಂಟೆಯಲ್ಲಿ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಅನ್ನೋದು ಪ್ರಸನ್ನ ಕುಮಾರ್ ವಾದ.
ಇದು ಅರೇಬಿಯನ್ ನೈಟ್ಸ್ ಸ್ಟೋರಿ ಅಲ್ಲ. ಟೆಕ್ನಿಕಲ್, ಐವಿಟ್ನೆಸ್ ಆಧರಿಸಿ ಮಾಡಿರುವ ಚಾರ್ಜ್‍ಶೀಟ್ ಎಂದು ವಾದಿಸಿದ್ದಾರೆ. ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಬುಧವಾರ ಮುಂದುವರೆಸಲಿದೆ. ಕುತೂಹಲವಂತೂ ಹಾಗೆಯೇ ಇದೆ. ಏಕೆಂದರೆ ಸಿವಿ ನಾಗೇಶ್ ಎತ್ತಿರುವ ಪ್ರತಿ ಪ್ರಶ್ನೆಗೂ ಪ್ರಸನ್ನ ಕುಮಾರ್ ಉತ್ತರ ಕೊಟ್ಟಿದ್ದಾರೆ. ವಿಶೇಷವಾಗಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗ್ತಿದೆ ಅನ್ನೋ ವಾದಕ್ಕೆ ಉತ್ತರ ಕೊಟ್ಟಿರುವ ಪ್ರಸನ್ನ ಕುಮಾರ್ ʻಪ್ರತಿ ಬಾರಿ ವಿಚಾರಣೆ ಮುಗಿದ ನಂತರ ದರ್ಶನ್ ಮತ್ತವರ ತಂಡದ ಪರ ವಾದಿಸುತ್ತಿರುವ ವಕೀಲರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆಯೇ, ಹೊರತು ನಾವು ಮಾತನಾಡಿಲ್ಲʼ ಎಂದು ಹೇಳಿದ್ದಾರೆ.