ಎಳನೀರು. ಕೇವಲ ಅಡುಗೆ, ಸಿಹಿ ತಿಂಡಿ, ಆರೋಗ್ಯ ಕೆಟ್ಟಾಗ ಗ್ಲೂಕೋಸ್‌ನಂತೆ ಕೆಲಸ ಮಾಡುತ್ತದೆ ಎಂದಷ್ಟೇ ಅಲ್ಲ, ಅದರಿಂದ ವೈನ್ ಕೂಡಾ ತಯಾರಿಸಬಹುದು. ಹೌದು, ಇಂಥಾದ್ದೊಂದು ಪ್ರಯೋಗ ಈಗ ಯಶಸ್ವಿಯಾಗಿದೆ. ಕಾಸರಗೋಡು ಜಿಲ್ಲೆಯ ಭೀಮನಡಿಯ 82ರ ಹರೆಯದ ಸೆಬಾಸ್ಟಿಯನ್ ಪಿ.ಆಗಸ್ಟಿನ್ ಎಳನೀರಿನಿಂದ ವೈನ್ ತಯಾರಿಸಿದ್ದಾರೆ. ಎಳನೀರಿನಿಂದ ಜ್ಯೂಸ್, ಶೇಕ್ ಮತ್ತು ಐಸ್‌ಕ್ರೀಮ್ ತಯಾರಿಸಲಾಗುತ್ತಿದ್ದರೂ, ಉತ್ತಮ ವೈನ್ ಪಡೆಯಬಹುದು ಎಂದು ಸೆಬಾಸ್ಟಿಯನ್ ಸಾಧಿಸಿ ತೋರಿಸಿದ್ದಾರೆ.
ಇಂಥಾದ್ದೊಂದು ಪ್ರಯೋಗ ಭಾರತದಲ್ಲೇ ಮೊದಲು. ಜಗತ್ತಿನಲ್ಲೇ ಮೊದಲು ಎನ್ನುವಂತಿಲ್ಲ. ಏಕೆಂದರೆ ಚೀನಾದಲ್ಲಿ ತೆಂಗಿನ ಕಾಯಿ ನೀರಿನಿಂದ ವೈನ್ ತಯಾರಿಸಲಾಗುತ್ತಿದೆ.
ಎಳನೀರು ವೈನ್ ತಯಾರಿ ಹೇಗೆ..?
250 ಲೀ. ವೈನ್ ಬ್ಯಾಚ್ ತಯಾರಿಸಲು ಸುಮಾರು 1,000 ಎಳನೀರು ಹಾಗೂ 250 ಕೆಜಿ ಹಣ್ಣುಗಳನ್ನು ಬಳಸಲಾಗುತ್ತದೆ. ನೀರಿನ ಬದಲು ತಾಜಾ ಎಳನೀರು ಬಳಸುವುದರಿಂದ ವೈನ್ ರುಚಿಯಾಗಿರುತ್ತದೆ. ಕೇವಲ ಶೇ.8-10ರಷ್ಟು ಆಲ್ಕೋಹಾಲ್ ಕಂಟೆಂಟ್ ಹೊಂದಿರುವ ಈ ವೈನ್, ದ್ರಾಕ್ಷಿ ವೈನ್‌ಗಿಂತ ಭಿನ್ನವಾದ ಟೇಸ್ಟ್ ಹೊಂದಿದೆ. ಸುಮಾರು 20 ವರ್ಷಗಳ ನಿರಂತರ ಪರಿಶ್ರಮ, ಪ್ರಯೋಗಳಿಂದಾಗಿ ಸೆಬಾಸ್ಟಿಯನ್ ಈ ಎಳನೀರು ವೈನ್ ಮಾರುಕಟ್ಟೆಗೆ ತರುತ್ತಿದ್ದಾರೆ. 2004ರಲ್ಲಿ ತಮ್ಮ ತೋಟದಲ್ಲಿ ಬೆಳೆದ ವಿದೇಶಿ ಹಣ್ಣುಗಳ ರಸಗಳ ಮಿಶ್ರಣದೊಂದಿಗೆ ಎಳನೀರು ಬೆರೆಸಿ ವೈನ್ ತಯಾರಿಸಿದ್ದರು. 2007ರಲ್ಲಿ ಪೇಟೆಂಟ್ ಪಡೆದಿದ್ದರು. ಕೇರಳದ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ನೀಡಲಾಗುವ ಕೇರ ಕೇಸರಿ ಪ್ರಶಸ್ತಿಗೆ ಸೆಬಾಸ್ಟಿಯನ್ ಭಾಜನರಾಗಿದ್ದರು.
ಎಳನೀರು ವೈನ್ ಫ್ಯಾಕ್ಟರಿ ಮಾಡಬಹುದಾ..?
ದೊಡ್ಡ ಪ್ರಮಾಣದಲ್ಲಿ ಎಳನೀರು ವೈನ್ ತಯಾರಿಸಿ ಮಾರಾಟ ಮಾಡಲು ರಾಜ್ಯ ಅಬಕಾರಿ ಇಲಾಖೆಯ ಪರವಾನಗಿ ಪಡೆಯಲಾಗಿದೆ. ವಿದೇಶಗಳಲ್ಲೂ ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ರೈತ ಉದ್ಯಮಿ ಸೆಬಾಸ್ಟಿಯನ್ ಪಿ.ಆಗಸ್ಟಿನ್ ತಿಳಿಸಿದ್ದಾರೆ. ಕೃಷಿಕ ಮತ್ತು ಉದ್ಯಮಿಯಾಗಿರುವ ಸೆಬಾಸ್ಟಿಯನ್ ಭೀಮನಡಿಯ 15 ಎಕರೆ ತೆಂಗಿನ ತೋಪಿನಲ್ಲಿ ಬೆಳೆದ ಎಳನೀರಿನಿಂದ ಮೊದಲು ವೈನ್ ತಯಾರಿಸಿದ್ದಾರೆ.
ಸದ್ಯಕ್ಕೆ ಇದು ಸೆಬಾಸ್ಟಿಯನ್ ಗಾರ್ಡನ್ನಿನಲ್ಲಿ ಮಾತ್ರವೇ ತಯಾರಾಗುತ್ತಿದೆ. 250 ಲೀ. ವೈನ್ ತಯಾರಿಸಲು ಸಾವಿರಕ್ಕೂ ಹೆಚ್ಚು ಎಳನೀರು ಬೇಕು ಎನ್ನುವುದು ಸದ್ಯಕ್ಕೆ ಎಳನೀರು ವೈನ್ʻನ ಅತಿದೊಡ್ಡ ಚಾಲೆಂಜ್. ಇದನ್ನು ಇನ್ನಷ್ಟು ಸರಳೀಕರಿಸಿ ದೊಡ್ಡ ದೊಡ್ಡ ಫ್ಯಾಕ್ಟರಿ ರೀತಿ ತಯಾರಿಕೆ ಶುರುವಾದರೆ ತೆಂಗು ಬೆಳೆಗಾರರಿಗೆ ಎಳನೀರು ದರ ಕುಸಿಯುವ ಆತಂಕವೇ ಇರುವುದಿಲ್ಲ. ಆದರೆ, ಎಳನೀರು ಹೆಚ್ಚಾಗಿ ಬಳಕೆಯಾಗುವುದು ರೋಗಿಗಳಿಗೆ. ಎಳನೀರು, ಗ್ಲುಕೋಸ್ ರೀತಿ ಕೆಲಸ ಮಾಡುತ್ತದೆ. ಆ ಎಳನೀರಿನ ದರ ದುಬಾರಿಯಾಗಬಹುದು.
ಒಂದು ತೆಂಗಿನಮರಕ್ಕೆ ಕಡಿಮೆ ಎಂದರೂ 60-70 ವರ್ಷ ಆಯಸ್ಸು ಇರುತ್ತದೆ. 100 ವರ್ಷ ದಾಟಿರುವ ಆರೋಗ್ಯವಂತ ಮರಗಳನ್ನೂ ನೋಡಬಹುದು. ಹೀಗಾಗಿ ಇದು ಸಕ್ಸಸ್ ಆದರೆ ತೆಂಗಿನ ಕೃಷಿ ಇನ್ನಷ್ಟು ಹೆಚ್ಚುವ ದಿನಗಳು ಹತ್ತಿರದಲ್ಲಿವೆ.
ಅಂದಹಾಗೆ ಎಳನೀರು ಹಾಗೆಯೇ ಕುಡಿದರೆ ಗ್ಲುಕೋಸ್. ಪ್ರಜ್ಞೆ ಬರುವಂತೆ ಮಾಡುತ್ತದೆ. ವೈನ್ ಮಾಡಿ ಕುಡಿದರೆ.. ಪ್ರಜ್ಞೆ ತಪುವಂತೆ ಮಾಡುತ್ತದೆ ಎನ್ನುವುದು ಜೋಕು.