ಸುದೀಪ್ ನಟನೆಯ ‘ಮಾಣಿಕ್ಯ’, ಅಪ್ಪು ನಟಿಸಿದ್ದ ‘ಅಂಜನಿಪುತ್ರ’ ಸೇರಿದಂತೆ ಹಲವು ಬಿಗ್ ಬಜೆಟ್ ಕನ್ನಡ ನಿರ್ಮಾಪಕ ಎಂಎನ್ ಸುರೇಶ್ ಅವರನ್ನು ಉಪ್ಪಾರಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎನ್ ಕುಮಾರ್ ನಿರ್ದೇಶಿಸಿದ್ದು ಬಹುತೇಕ ಸ್ಟಾರ್ ನಟರ ಚಿತ್ರಗಳನ್ನೇ. ರನ್ನ, ಮಾಣಿಕ್ಯ, ಮುಕುಂದ ಮುರಾರಿ, ಅಂಜನಿಪುತ್ರ, ವಾಸ್ತುಪ್ರಕಾರ, ನರಸಿಂಹ, ಐಶ್ವರ್ಯಾ, ಕಾಶಿ ಫ್ರಂ ವಿಲೇಜ್, ರಂಗ ಎಸ್ ಎಸ್ ಎಲ್ ಸಿ.. ಹೀಗೆ ಬಹುತೇಕ ದೊಡ್ಡ ದೊಡ್ಡ ನಟರ ಚಿತ್ರಗಳಿಗೆ ಎನ್ ಕುಮಾರ್ ಬಂಡವಾಳ ಹೂಡಿದ್ದವರು. ಅಂತಹ ಎನ್ ಕುಮಾರ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಕರಣ ಏನು..?
ಎನ್ ಕುಮಾರ್ ಅವರು ನಟ ಜಗ್ಗೇಶ್ ಬಳಿ 1.25 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ವಾಪಸ್ ಕೊಟ್ಟಿರಲಿಲ್ಲ. ಇದು ಅಂಜನಿಪುತ್ರ ನಿರ್ಮಾಣದ ವೇಳೆ ಮಾಡಿದ್ದ ಸಾಲ. ಪುನೀತ್ ಸಿನಿಮಾ ಕೈಕಚ್ಚಿರಲಿಲ್ಲ. ತಕ್ಕಮಟ್ಟಿಗೆ ಲಾಭವೂ ಬಂದಿತ್ತು. ಆದರೆ ಎನ್ ಕುಮಾರ್ ಕೊಟ್ಟಿರಲಿಲ್ಲವಂಎ. ಸಾಲ ಹಿಂದಿರುಗಿಸದ ಸಂಬಂಧ ನಟ ಜಗ್ಗೇಶ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ವಿಶೇಷವೆಂದರೆ ಕೆಳಹಂತದ ಕೋರ್ಟಿನಲ್ಲಿ ಕುಮಾರ್ ಕೇಸು ಗೆದ್ದಿದ್ದರು. ಜಗ್ಗೇಶ್ ಅವರಿಗೆ ಇದು ಇನ್ನಷ್ಟು ಸಿಟ್ಟಿಗೆ ಕಾರಣವಾಗಿತ್ತಂತೆ. ಹೀಗಾಗಿ ಹೈಕೋರ್ಟಿಗೆ ಮೇಲ್ಮನವಿ ಹೋದರು. ಹೈಕೋರ್ಟ್ ನವೆಂಬರಿನಲ್ಲೇ ಆದೇಶ ನೀಡಿತ್ತು.
ಸಾಲವನ್ನು ವಾಪಸ್ ಕೊಡುವುದಕ್ಕೆ 8 ವಾರಗಳ ಸಮಯ ಕೊಟ್ಟಿತ್ತು. ಈ 8 ವಾರಗಳಲ್ಲಿ ಎನ್ ಕುಮಾರ್, ಕನಿಷ್ಠ ಅರ್ಧದಷ್ಟಾದರೂ ಸಾಲ ವಾಪಸ್ ಕಟ್ಟಬೇಕಿತ್ತು. ಕಟ್ಟಿರಲಿಲ್ಲ.
ಇದೇ ಪ್ರಕರಣದಲ್ಲಿ ಎಂ.ಎನ್ ಕುಮಾರ್ ಅವರನ್ನ ಪೊಲೀಸರು ಬಂಧಿಸಿದ್ದಾರೆ. 4ನೇ ACMM ಕೋರ್ಟ್ ಚೆಕ್ ಬೌನ್ಸ್ ಕೇಸ್ ಸಂಬಂಧ ಕನ್ವಿಕ್ಷನ್ ವಾರೆಂಟ್ ಹೊರಡಿಸಿತ್ತು. ನಿರ್ಮಾಪಕ ಎಂ.ಎನ್ ಕುಮಾರ್ ಅವರ ಕಚೇರಿ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿದೆ. ಹೀಗಾಗಿ ಉಪ್ಪಾರಪೇಟೆ ಪೊಲೀಸರಿಗೆ ಅರೆಸ್ಟ್ ಮಾಡುವಂತೆ ಆದೇಶಿಸಲಾಗಿತ್ತು. ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸರು ನಿರ್ಮಾಪಕ ಎಂ.ಎನ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಮಧ್ಯರಾತ್ರಿ 2-3 ಗಂಟೆ ಸುಮಾರಿನಲ್ಲಿ ಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಎನ್ ಕುಮಾರ್ ನಿರ್ಮಾಣದ ಮಾಣಿಕ್ಯ ಚಿತ್ರದ ನಾಯಕಿ ನಟಿ ರನ್ಯಾ ರಾವ್ ಜೈಲಿನಲ್ಲಿರುವಾಗಲೇ, ಎನ್ ಕುಮಾರ್ ಕೂಡಾ ಅರೆಸ್ಟ್ ಆಗಿರುವುದು ಕಾಕತಾಳೀಯ ಎನ್ನಬಹುದು. ಕಿಚ್ಚ ಸುದೀಪ್ ಅವರು ತಮ್ಮಿಂದ ಅಡ್ವಾನ್ಸ್ ಪಡೆದು ಸಿನಿಮಾ ಮಾಡಿಕೊಡ್ತಿಲ್ಲ ಎಂದು ರಂಪರಾಮಾಯಣ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಫಿಲ್ಮ್ ಚೇಂಬರ್ ಕೈಸೋತ ಮೇಲೆ, ರವಿಚಂದ್ರನ್ ಕೂಡಾ ಸಂಧಾನಕ್ಕೆ ಯತ್ನಿಸಿದ್ದರು. ಕೊನೆಗೆ ಸುದೀಪ್, ನ್ಯಾಯಾಲಯದ ಮೊರೆ ಹೋಗಿ ಕುಮಾರ್ ಬಾಯಿಗೆ ಬೀಗ ಹಾಕಿಸಿದ್ದರು. ಈಗಲೂ ಆ ಕೇಸ್ ವಿಚಾರಣೆ ಹಂತದಲ್ಲಿದೆ. ಎನ್ ಕುಮಾರ್ ವಿರುದ್ಧ ಚೆಕ್ ಬೌನ್ಸ್ ಕೇಸುಗಳು ಹೊಸದೇನಲ್ಲ. ಹಲವು ಕೇಸುಗಳು ಕೋರ್ಟಿನಲ್ಲಿವೆ. ಜಗ್ಗೇಶ್ ಹಾಕಿದ್ದ ಕೇಸು ಬಂಧನದ ಹಂತಕ್ಕೆ ಬಂದಿದೆ. ಅಂದಹಾಗೆ ತಪ್ಪಿಸಿಕೊಳ್ಳಬೇಕು ಎಂದರೆ ಕುಮಾರ್, ಸುಪ್ರೀಂಕೋರ್ಟಿಗೆ ಹೋಗಬಹುದು. ಆದರೆ ಅಲ್ಲಿ ಕೋರ್ಟಿಗೆ ಚೆಕ್ ಬೌನ್ಸ್ ಕೇಸಿನ ಅರ್ಧದಷ್ಟು ದುಡ್ಡನ್ನು ಕಟ್ಟಿಯೇ ಕೇಸು ಹಾಕಬೇಕು.
ಒಟ್ಟಿನಲ್ಲಿ ಕುಮಾರ್ ಎದುರು ಮಾರ್ಗಗಳಿವೆ. ಜಗ್ಗೇಶ್ ಅವರ ಕೈಯ್ಯೋ.. ಕಾಲೋ ಹಿಡಿದು ಕೇಸು ವಾಪಸ್ ತೆಗೆದುಕೊಳ್ಳುವಂತೆ ಮಾಡಬೇಕು. ಇಲ್ಲವೇ ಚೆಕ್ ಬೌನ್ಸ್ ಕೇಸಿನ ಅರ್ಧದಷ್ಟಾದರೂ ದುಡ್ಡು ಕಟ್ಟಿ ಜೈಲಿಂದ ಹೊರಗೆ ಬರಬೇಕು.