ಡಿಕೆ ಶಿವಕುಮಾರ್, ಜೆಡಿಎಸ್ ಪಕ್ಷವನ್ನು ಆಪೋಶನ ತೆಗೆದುಕೊಳ್ತಾರೆ ಅನ್ನೋದು ಗುಟ್ಟೇನಲ್ಲ. ಜನತಾ ದಳ ಇದ್ದಾಗ ಎಸ್ ಎಂ ಕೃಷ್ಣ, ನಂತರ ಸಿದ್ದರಾಮಯ್ಯ.. ಮತ್ತೀಗ ಡಿಕೆ ಶಿವಕುಮಾರ್.. ಎಲ್ಲರೂ ಜನತಾದಳದ ಬುಡ ಅಲ್ಲಾಡಿಸಿದವರೇ. ಇದೀಗ ಜೆಡಿಎಸ್ ಶಾಸಕರ ರಕ್ಷಣೆಗಾಗಿ ಬೆಳಗಾವಿಯ ಸಾಹುಕಾರ್ ನೆರವು ಕೇಳುತ್ತಿದ್ದಾರೆ ಕುಮಾರಸ್ವಾಮಿ. ದೆಹಲಿಯಲ್ಲಿ ಯತ್ನಾಳ್ ಬಣದ ಪರ ರಾಯಭಾರಿಯಾಗಿ ಹೋಗಿದ್ದ ರಮೇಶ್ ಜಾರಕಿಹೊಳಿ, ವಿಜಯೇಂದ್ರ ವಿರುದ್ಧದ ತಂತ್ರಗಾರಿಕೆಗೆ ಕುಮಾರಸ್ವಾಮಿ ನೆರವು ಕೇಳಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ, ತಮ್ಮ ಶಾಸಕರ ರಕ್ಷಣೆಯ ಹೊಣೆಯನ್ನು ರಮೇಶ್ ಜಾರಕಿಹೊಳಿಗೆ ವರ್ಗಾಯಿಸಿದ್ದಾರೆ.
ಈಗಾಗಲೇ ಶಿವಕುಮಾರ್ ನಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಿ ಭಾರಿ ಪ್ರಮಾಣದ ಆಮಿಷ ಒಡ್ಡಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಹೋಗುವುದಿಲ್ಲ ಎಂಬುದಾಗಿ ನಮ್ಮ ಶಾಸಕರು ಹೇಳುತ್ತಿದ್ದಾರೆ. ಆದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ನಂಬುವುದು ಕಷ್ಟವಾಗುತ್ತಿದೆ. ಇದನ್ನು ಹೇಗಾದರೂ ತಡೆಗಟ್ಟಬೇಕು ಎಂದಿರುವ ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿ ಸಹಾಯ ಕೇಳಿದ್ದಾರೆ. ಡಿಕೆ ಶಿವಕುಮಾರ್ ವಿರುದ್ಧ ಜಿದ್ದಿಗೆ ಬಿದ್ದಿರುವ ರಮೇಶ್ ಜಾರಕಿಹೊಳಿ, ಈ ಪ್ರಸ್ತಾಪಕೆಕ ಓಕೆ ಎಂದಿದ್ದಾರಂತೆ.
ಆದರೆ ಡಿಕೆ ಶಿವಕುಮಾರ್ ತಂತ್ರಗಾರಿಕೆ ಬೇರೆಯೇ ಇದೆ. ಪಕ್ಷಾಂತರ ಕಾಯ್ದೆಗೆ ಧಕ್ಕೆಯಾಗದಂತೆ, ಉಪಚುನಾವಣೆಗಳ ಗೊಡವೆಯೇ ಎದುರಾಗದಂತೆ ಜೆಡಿಎಸ್‌ನ ಮೂರನೇ ಎರಡು ಭಾಗದಷ್ಟು ಶಾಸಕರ ಸೆಳೆಯಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಪ್ರಯತ್ನ ನಡೆಸಿದ್ದಾರೆ.
ಒಟ್ಟು 18 ಶಾಸಕರ ಪೈಕಿ ಮೂರನೇ ಎರಡು ಭಾಗ ಅಂದರೆ, 12ಕ್ಕಿಂತ ಶಾಸಕರನ್ನು ಸೆಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಿವಕುಮಾರ್ ಪ್ರಯತ್ನ ನಡೆಸಿದ್ದು, ಇದರ ಕೊನೆ ಹಂತದಲ್ಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಎಷ್ಟೇ ತಡಕಾಡಿದರೂ ಮೂರ್ನಾಲ್ಕು ಹೆಸರು ಬಿಟ್ಟು ಉಳಿದವರ ಲೆಕ್ಕ ಸಿಗುತ್ತಿಲ್ಲ.
ಇನ್ನು ಡಿಕೆ ಶಿವಕುಮಾರ್ ನಡೆಸುತ್ತಿರುವ ಈ ಪ್ರಯತ್ನದ ಹಿಂದೆ ತಮ್ಮ ವಿರುದ್ಧ ಕಾಂಗ್ರೆಸ್ಸಿನಲ್ಲಿ ಭುಗಿಲೇಳುತ್ತಿರುವ ಬಂಡಾಯವೂ ಕಾರಣ ಎನ್ನಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕರೆದಿದ್ದ ಎಸ್ಸಿ, ಎಸ್ಟಿ ಸಚಿವರು, ಶಾಸಕರ ಔತಣ ಕೂಟ ರದ್ದು ಮಾಡಿಸಿದ್ದರೂ, ಪರಮೇಶ್ವರ್.. ಸಭೆ ರದ್ದಾಗಿಲ್ಲ. ಮುಂದೂಡಿಕೆಯಾಗಿದೆ, ಅಷ್ಟೇ ಎನ್ನುತ್ತಿದ್ಧಾರೆ. ಕೆಎನ್ ರಾಜಣ್ಣ ಅವರಂತೂ.. ಏನಿವಾಗ ಎನ್ನುತ್ತಿದ್ಧಾರೆ. ಮಾತು ಹತೋಟಿ ತಪ್ಪಿದೆ. ಸತೀಶ್ ಜಾರಕಿಹೊಳಿ, ಡಿನ್ನರ್ ಮೀಟಿಂಗ್ ಮಾಡಿಸಿ, ಸಿಎಂ ಸಿದ್ದು ಅವರನ್ನೇ ಕರೆಸಿದ್ದಾರೆ. ಮಹದೇವಪ್ಪ ಕೂಡಾ ಬಂಡಾಯದ ಧ್ವನಿಯಲ್ಲಿದ್ದಾರೆ. ಜಮೀರ್ ಅಹ್ಮದ್, ಎಂಬಿ ಪಾಟೀಲ್ ಅವರಂತಹ ನಾಯಕರು ಇರುವುದು ಕೂಡಾ ಸಿದ್ದರಾಮಯ್ಯ ಜೊತೆ.ಹೀಗಿರುವಾಗ ಯಾವುದಕ್ಕೂ ಇರಲಿ ಎಂದು ಜೆಡಿಎಸ್ ಶಾಸಕರಿಗೆ ಡಿಕೆ ಗಾಳ ಹಾಕಿದ್ದರೆ, ಕುಮಾರಸ್ವಾಮಿ ಡಿಕೆ ಶತ್ರವನ್ನೇ ಗುರಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಸಮರ ಇಂದು ನಿನ್ನೆಯದ್ದಲ್ಲ.