ಶಿವಣ್ಣ ಮನೆಯಲ್ಲಿ ಒಟ್ಟಿಗೇ ಸೇರಿದ ದೊಡ್ಮನೆ, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕ್ಯಾನ್ಸರ್ ಗೆದ್ದಿರುವ ಶಿವಣ್ಣ, ಮನೆಗೆ ವಾಪಸ್ ಬಂದಿದ್ದಾರೆ. ಆದರೆ ಶಿವಣ್ಣ ಅವರ ಈ ಚಿಕಿತ್ಸೆಯ ಹಂತದಲ್ಲಿ ಎಲ್ಲಿಯೂ ಕೂಡಾ ತಮ್ಮ ರಾಘವೇಂದ್ರ ರಾಜ್ ಕುಮಾರ್, ಅವರ ಮಕ್ಕಳಾದ ಯುವ, ವಿನಯ್, ಅಶ್ವಿನಿ ಪುನೀತ್ ಎಲ್ಲಿಯೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಏನಾದರೂ ಸಮಸ್ಯೆ ಇದೆಯಾ.. ದೊಡ್ಮನೆಯಲ್ಲಿ ಎಲ್ಲವೂ ಸರಿ ಇಲ್ಲವಾ.. ಎಂಬ ಪ್ರಶ್ನೆಗೆ ದೊಡ್ಮನೆ ಉತ್ತರ ಕೊಟ್ಟಿದೆ.
ಶಿವಣ್ಣನ ಅಭಿಮಾನಿಗಳು ಏರ್ ಪೋರ್ಟಿನಲ್ಲೇ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ, ಕಿಂಗ್ ಈಸ್ ಬ್ಯಾಕ್ ಎಂದು ಸಂಭ್ರಮಿಸಿದ್ದರೆ, ಶಿವಣ್ಣ ಮನೆಗೆ ದೊಡ್ಮನೆಯ ಸದಸ್ಯರೆಲ್ಲರೂ ಬಂದು ಮಾತನಾಡಿಸಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್, ಯುವ, ವಿನಯ್, ಅಶ್ವಿನಿ ಪುನೀತ್ ಮತ್ತು ಮಗಳು.. ಹೀಗೆ ಎಲ್ಲರೂ ಶಿವಣ್ಣ ಮನೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರಂತೂ ʻʻಶಿವಣ್ಣ ನನಗೆ ತಂದೆಯಿದ್ದಂತೆ. ಅಪ್ಪಾಜಿ ಕಾಡಿನಿಂದ ವಾಪಸ್ ಬಂದಾಗ ಎಷ್ಟು ಖುಷಿಯಾಗಿತ್ತೋ.. ಅಷ್ಟೇ ಸಂತೋಷವಾಗಿದೆ. ಶಿವಣ್ಣನನ್ನ ನೋಡಿ ನಾನು ಅಪ್ಪಾಜಿ ನೋಡಿದಂತೆ ಆಯ್ತು… ನನ್ನ ಅಯಸ್ಸು ಕೂಡ ಶಿವಣ್ಣನಿಗೆ ಇರಲಿʼʼ ಎಂದಿದ್ದಾರೆ.
ಇನ್ನು ದೊಡ್ಮನೆಯಲ್ಲಿ ಶಿವಣ್ಣ ಬಿಟ್ಟರೆ ಹೊರಗೆ ಮಾತನಾಡುವುದು ರಾಘಣ್ಣ ಮಾತ್ರ. ಅಶ್ವಿನಿ ಪುನೀತ್ ಎಂದಿನಂತೆ ಕ್ಯಾಮೆರಾ ಎದುರು ಮಹಾಮೌನಿ. ಯುವ, ವಿನಯ್ ಮಾತನಾಡಲ್ಲ. ಇನ್ನು ಗೀತಾ ಅವರೂ ಅಷ್ಟೇ, ಅನಿವಾರ್ಯ ಅಲ್ಲದಿದ್ದರೆ ಕ್ಯಾಮೆರಾ ಎದುರು ಅವರಿಗೂ ಮಾತು ಬರಲ್ಲ.
ಗೀತಾ ಅವರನ್ನು ತಾಯಿಗೆ ಹೋಲಿಸಿ ಮಾತನಾಡಿದ್ದಾರೆ ಶಿವಣ್ಣ. ʻʻ ಗೀತಾ ಅವರ ಬಗ್ಗೆ ಮಾತಾಡೋಕೆ ಒಂದೆರಡು ಗಂಟೆ ಸಾಕಾಗಲ್ಲ. ಗೀತಾ ಅವರು ಹೆಂಡತಿನೂ, ತಾಯಿನೂ ಹೌದು. ತಂಗಿಯಾಗಿ, ಅಕ್ಕ ಆಗಿ ಎಲ್ಲ ತರದಲ್ಲಿ ಜೊತೆಯಾಗಿ ಇದ್ದರು. ಇದರ ಜೊತೆಗೆ ಮಗಳು ನಿವೇದಿತಾ ಕೂಡ ತಾಯಿಗಿಂತ ಹೆಚ್ಚು ನೊಡಿಕೊಂಡಳು. ಅನು ಅಂತಾ ನಿವೇದಿತಾ ಗೆಳತಿ ಒಂದು ತಿಂಗಳು ನಮ್ಮ ಜೊತೆನೇ ಇದ್ದರುʼʼ ಎಂದಿದ್ದಾರೆ.
ʻʻಇಲ್ಲಿಂದ ಹೋಗಬೇಕಾದರೆ ಸ್ವಲ್ಪ ಎಮೋಷನಲ್ ಆಗಿದ್ದೆ. ಆಪರೇಷನ್ ಅಂದರೆ ಅಷ್ಟು ಸುಲಭವಲ್ಲ. ಏನ್ ಆಗಬಹುದು, ಹೇಗೆ ಆಗುತ್ತೆ ಎಂಬ ಭಯ ಇತ್ತು. ಡಾಕ್ಟರ್ ಮನು ಅವರು ಹೇಳಿದಂತೆ ನಿಮ್ಮ ಧೈರ್ಯ ಮೆಚ್ಚಲೇಬೇಕು. ಆಸ್ಪತ್ರೆಯಲ್ಲಿ ಎಲ್ಲ ಸರ್ಜರಿ ಮುಗಿದ ಮೇಲೆ 3-4 ದಿನಗಳ ನಂತರ ವರದಿ ಬಂತು. ಅದರಲ್ಲಿ ಕ್ಯಾನ್ಸರ್ ಫ್ರೀ ಅಂತ ವರದಿ ಬಂದಿದ್ದರಿಂದ ಹೆಚ್ಚು ಖುಷಿ ಆಗಿತ್ತುʼʼ ಎಂದಿದ್ದಾರೆ ಶಿವಣ್ಣ.
ಒಟ್ಟಿನಲ್ಲಿ ಶಿವಣ್ಣ ಅವರನ್ನು ಯಾರು ಎಷ್ಟೇ ಅಕ್ಕರೆಯಿಂದ ಆರೋಗ್ಯ ವಿಚಾರಿಸಿಕೊಂಡರೂ, ಮನೆಯವರು ವಿಚಾರಿಸಿಕೊಳ್ಳುವುದು ಅತ್ಯಂತ ಮುಖ್ಯ. ಎಲ್ಲರೂ ಒಟ್ಟಾಗಿ ಬರುತ್ತಿರುವ ಒಂದು ವಿಡಿಯೋ, ರಾಘವೇಂದ್ರ ರಾಜ್ ಕುಮಾರ್ ಅವರ ಮಾತು ಎಲ್ಲ ಗೊಂದಲಗಳಿಗೂ ಪರಿಹಾರ ಕೊಟ್ಟಂತಾಗಿದೆ. ದೊಡ್ಮನೆ ಫ್ಯಾನ್ಸ್ ಫುಲ್ ಹ್ಯಾಪಿ.