ದರ್ಶನ್ ಅವರ ಗ್ಯಾಂಗ್ ಹುಚ್ಚಾಟ ಮತ್ತು ಪವಿತ್ರಾ ಗೌಡ ಅವರಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿ ಕೊಲೆಯಾದ ರೇಣುಕಾಸ್ವಾಮಿ ಅವರ ಪತ್ನಿ ಸಹನಾ ತಾಯಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ನಡೆದಾಗ ಸಹನಾ 5 ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಳಗಿನ ಜಾವ 6 ಗಂಟೆ 55 ನಿಮಿಷದಲ್ಲಿ ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ಸಹನಾ ಮಗುವಿಗೆ ಜನ್ಮ ನೀಡಿದ್ದಾರೆ. ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗು ಜನನ ಹಿನ್ನೆಲೆ , ವೈದ್ಯಾಧಿಕಾರಿಗಳು ಮಗುವನ್ನು ಅಬ್ಜರ್ವೇಶನ್ ನಲ್ಲಿ ಇಟ್ಟಿದ್ದಾರೆ.
ಮೃತ ರೇಣುಕಾಸ್ವಾಮಿ ಮನೆಗೆ ಮೊಮ್ಮಗನ ಆಗಮನ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಸಂಭ್ರಮ ಸೃಷ್ಟಿಯಾಗಿದೆ. ಮೊಮ್ಮಗ ಜನ್ಮ ಸಂಭ್ರಮದ ವೇಳೆ ಮಾಧ್ಯಮಗಳ ಮುಂದೆ ಮೊದಲ ಬಾರಿಗೆ ಕಾಶೀನಾಥ ಶಿವನಗೌಡ ಅವರು ನಮ್ಮ ಮಗನೇ ಹುಟ್ಟಿ ಬಂದಷ್ಟು ಸಂತೋಷವಾಗಿದೆ ಎಂದಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತುಂಬಾ ಕಾಳಜಿ ವಹಿಸಿದ್ದು, ಅವರೆಲ್ಲರಿಗೂ ಚಿರಋಣಿ ಎಂದಿದ್ದಾರೆ ಕಾಶೀನಾಥ ಶಿವನಗೌಡ್ರ.
ಪತಿಯ ಸಾವಿನ ಬಳಿಕ ಮಾನಸಿಕವಾಗಿ ಸಹನಾ ಕುಗ್ಗಿ ಹೋಗಿದ್ದ ಸಹನಾ ಅವರು ಮಾತನ್ನೇ ಕಡಿಮೆ ಮಾಡಿದ್ದರು. ಅವರನ್ನು ಸಂತೋಷವಾಗಿಟ್ಟುಕೊಳ್ಳೋದಕ್ಕೆ ರೇಣುಕಾಸ್ವಾಮಿಯವರ ತಂದೆ ತಾಯಿ ಶ್ರಮ ವಹಿಸಿದ್ದರು. ಇದೀಗ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಅವರು ಗಂಡು ಮಗುವಿಗೆ ಜನನ ನೀಡಿದ್ದಾರೆ. ರೇಣುಕಾಸ್ವಾಮಿ ಮಗನ ರೂಪದಲ್ಲಿ ಮತ್ತೆ ಹುಟ್ಟಿಬಂದ ಎಂದು ಕುಟುಂಬಸ್ಥರು ಸಮಾಧಾನ ಮಾಡಿಕೊಂಡಿದ್ದಾರೆ.
ನಾರ್ಮಲ್ ಡೆಲಿವರಿ ಆಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಕೀರ್ತಿ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ ಅವರಿಂದ ಉಚಿತ ಟ್ರೀಟ್ ಮೆಂಟ್ ಸಿಕ್ಕಿದೆ. ಕೀರ್ತಿ ಆಸ್ಪತ್ರೆ, ವೈದ್ಯ ಮಲ್ಲಿಕಾರ್ಜುನ ಅವರಿಗೆ ಧನ್ಯವಾದ ಹೇಳಿರುವ ಕಾಶೀನಾಥಯ್ಯ ರೇಣುಕಾಸ್ವಾಮಿಯೇ ಹುಟ್ಟಿಬಂದಷ್ಟು ಖುಷಿ ಆಗಿದೆ ಎಂದು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಅವರ ತಂದೆ ಕಾಶಿನಾಥ್ , ತಾಯಿ ಸೇರಿದಂತೆ ಕುಟುಂಬ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿತ್ತು. ಅಲ್ಲದೆ ಆರೋಪಿಗಳಿಗೆ ಶಿಕ್ಷೆಯಾಗಬೇಕು, ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದರು.
ಈ ಮಧ್ಯೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಆಗಿದೆ. ಪ್ರಕರಣದಲ್ಲಿ ಕೆಲವರಿಗೆ ಜಾಮೀನು ಸಿಕ್ಕಿದೆ. ಕೆಲವರಿಗೆ ಸಿಕ್ಕಿಲ್ಲ. ದರ್ಶನ್ ಅವರಷ್ಟೇ ಅಲ್ಲ, ಪವಿತ್ರಾ, ಲಕ್ಷ್ಮಣ್, ರವಿಶಂಕರ್ ಅವರ ಜಾಮೀನು ಅರ್ಜಿಯೂ ತಿರಸ್ಕರಿಸಲ್ಪಟ್ಟಿದೆ. ಮೊದಲ ಬಾರಿ ಜಾಮೀನು ಪಡೆದಿದ್ದ ಮೂವರ ಜೊತೆ ದೀಪಕ್‌ಗೂ ಜಾಮೀನು ದೊರೆತಿದೆ.
ಜೂನ್ 11ರಂದು ಅರೆಸ್ಟ್ ಆಗಿರುವ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಪ್ರಕರಣದ ಬಹುತೇಕ ಆರೋಪಿಗಳು ಇನ್ನೂ ಜೈಲಲ್ಲಿಯೇ ಇದ್ದಾರೆ. ಕೆಳ ಹಂತದ ಕೋರ್ಟ್ ಜಾಮೀನಿಗೆ ಅರ್ಜಿ ತಿರಸ್ಕರಿಸಿದೆ. ಅವರು ಈಗ ಈ ಅರ್ಜಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಸಮಯದಲ್ಲಿ ಪತ್ನಿ ಸಹನಾ ಗರ್ಭಿಣಿಯಾಗಿದ್ದು, ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು. ಇದೇ ಸಮಯದಲ್ಲಿ ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಕೊಲೆ ಮಾಡಿದ್ದರು.