ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಬೇಳೆ ನೋಡಿರುವವರಿಗೆ ರಾಗಿ ಮುದ್ದೆಗೂ ಅಂಟಿಕೊಂಡ ಪ್ಲಾಸ್ಟಿಕ್ ವಿಷಯವನ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಏಕೆಂದರೆ ಮುಕ್ಕಾಲು ಕರ್ನಾಟಕದ ದಿನನಿತ್ಯ ಆಹಾರ ರಾಗಿ ಮುದ್ದೆ. ರಾಗಿ ಮುದ್ದೆ ಅತ್ಯಂತ ಆರೋಗ್ಯಕರ ಹಾಗೂ ಇದರಲ್ಲಿ ಯಾವುದೇ ಕೆಮಿಕಲ್ ಮಿಕ್ಸ್ ಮಾಡೋಕೆ ಆಗಲ್ಲ ಅನ್ನೋದೇ ಅತ್ಯಂತ ಹೆಮ್ಮೆ ಹಾಗೂ ಸುರಕ್ಷತೆಯ ವಿಷಯವಾಗಿತ್ತು. ಈಗ ನೋಡಿದರೆ.. ರಾಗಿ ಮುದ್ದೆಗೂ ಪ್ಲಾಸ್ಟಿಕ್ ಎಂಟ್ರಿ ಕೊಟ್ಟಿದ್ಯಂತೆ.
ಪ್ಲಾಸ್ಟಿಕ್ ಮುದ್ದೆ ಬಳಕೆ ಎಲ್ಲಿ..?
ಸದ್ಯಕ್ಕೆ ಇದು ನಾವು ಮನೆಯಲ್ಲಿ ತಿನ್ನುವ ರಾಗಿ ಮುದ್ದೆ ಊಟಕ್ಕೆ ಬಂದಿಲ್ಲ. ಮನೆಯಲ್ಲಿ ಆಗ ಮಾಡಿಕೊಂಡು ತಿನ್ನುವ ಅಥವಾ ನುಂಗುವ ಮುದ್ದೆಯಲ್ಲಿ ಯಾವ ಪ್ಲಾಸ್ಟಿಕ್ಕೂ ಇಲ್ಲ. ಆದರೆ.. ಹೋಟೆಲ್ ಮುದ್ದೆಯಲ್ಲಿ ಪ್ಲಾಸ್ಟಿಕ್ ಅಂಶ ಕಂಡು ಬಂದಿದೆಯಂತೆ. ಕೇಟರಿಂಗ್ ಮೂಲಕ ವಿತರಣೆಯಾಗುವ ಆಹಾರದಲ್ಲಿ ರಾಗಿ ಮುದ್ದೆ ತಣ್ಣಾಗಾಗದಂತೆ ಬಿಸಿಯಾಗಿಡಲು ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿ ಬಡಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಅರ್ಥಾತ್, ಹೋಟೆಲ್ಲುಗಳಲ್ಲೂ ಅಷ್ಟೆ, ಬಿಸಿ ಬಿಸಿ ಮುದ್ದೆ ಕಟ್ಟಿ, ನೇರವಾಗಿ ತಟ್ಟೆಗೆ ಹಾಕೋ ಹೋಟೆಲ್ಲುಗಳ ಮುದ್ದೆ ನೋ ಪ್ರಾಬ್ಲಂ. ಬಾಕ್ಸುಗಳಲ್ಲಿ ತರುವ ಮುದ್ದೆಯಲ್ಲೂ ಪ್ಲಾಸ್ಟಿಕ್ ಇಲ್ಲ. ಆದರೆ..ಕೇಟರಿಂಗ್ ಮೂಲಕ ಸಪ್ಲೈ ಆಗುತ್ತಿರುವ ಮುದ್ದೆಗಳಲ್ಲಿ ಪ್ಲಾಸ್ಟಿಕ್ ಇದೆ.
ಮದುವೆ, ಸಭೆ, ಸಮಾರಂಭಗಳಲ್ಲಿ ಜನರಿಗೆ ಕೇಟರಿಂಗ್ ಮೂಲಕ ಊಟದ ವ್ಯವಸ್ಥೆ ಮಾಡುವ ಪದ್ಧತಿ ಈಗ ನಗರ ಮಾತ್ರ ಅಲ್ಲ, ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿದೆ. ಕೇಟರಿಂಗ್ ಮೂಲಕ ಪೂರೈಕೆಯಾಗುವ ಊಟದಲ್ಲಿ ಮುದ್ದೆ ತಣ್ಣಾಗದಂತೆ ಬಿಸಿಯಾಗಿರಲು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಲಾಗುತ್ತದೆ. ಹೋಳಿಗೆಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಬಡಿಸಲಾಗುತ್ತಿದೆ. ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ತಟ್ಟೆಯ ತಳಭಾಗಕ್ಕೆ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಸಾಕಷ್ಟು ಹೋಟೆಲ್‌ಗಳಲ್ಲಿ ತಟ್ಟೆಯ ತಳಭಾಗಕ್ಕೆ ಪ್ಲಾಸ್ಟಿಕ್ ಕವರ್ ಹಾಕಿ ಊಟ, ಟಿಫನ್ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಮೇಲೆ ಬಿಸಿ ಆಹಾರ ಪದಾರ್ಥ ಹಾಕುವುದರಿಂದ ಆಹಾರದಲ್ಲಿ ಬೆರೆತ ಪ್ಲಾಸ್ಟಿಕ್ ಮನುಷ್ಯ ಹೊಟ್ಟೆಗೆ ಸೇರಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಸದ್ದಿಲ್ಲದೆ ಆವರಿಸಿಕೊಳ್ಳುತ್ತಿವೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಅಧಿಕಾರಿಗಳು, ಇದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ತಾಪಂ ಇಒ, ಗ್ರಾಪಂ ಪಿಡಿಒಗಳ ನೇತೃತ್ವದಲ್ಲಿತಂಡಗಳನ್ನು ರಚಿಸಿ, ನಿಷೇಧಿತ ಏಕಬಳಕೆ ವಸುಗಳನ್ನು ಸಂಗ್ರಹಿಸುತ್ತಿರುವ, ಉತ್ಪಾದಿಸುತ್ತಿರುವ ಹಾಗೂ ಮಾರಾಟ ಮಾಡುತ್ತಿರುವ ಮಳಿಗೆ, ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಕಂಡುಬಂದಲ್ಲಿ ಜಪ್ತಿ ಮಾಡಿ,ದಂಡ ಹಾಗೂ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿದೆ. ಆದರೆ, ಈ ಕಾರ‍್ಯ ಎಷ್ಟರಮಟ್ಟಿಗೆ ನಡೆಯುತ್ತೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಆದರೆ ಇವು ಕಣ್ಣು ಮುಚ್ಚಿ ಕುಳಿತಿವೆ. ಕೆಲವೊಮ್ಮೆ ಕಾಟಾಚಾರಕ್ಕೆ ದಾಳಿ ನಡೆಸಿ ಕೈ ತೊಳೆದುಕೊಳ್ಳುತ್ತಿರುವುದು ಬಿಟ್ಟರೆ ಮಾರಾಟವನ್ನು ಪೂರ್ಣ ಪ್ರಮಾಣದಲ್ಲಿತಡೆಯುವ ಕಾರ‍್ಯಕ್ಕೆ ಮುಂದಾಗಿಲ್ಲ. ಪ್ಲಾಸ್ಟಿಕ್ ಪರಿಸರ, ಮನುಷ್ಯ, ಪ್ರಾಣಿ ಪಕ್ಷಿಗಳ, ಕುಡಿಯವ ನೀರಿನ ಮೂಲಗಳು, ಜಲಚರಗಳ ಮೇಲೆ ವ್ಯತಿರಿಕ್ತ ದುಷ್ಪರಿಣಾಮ ಬೀರುತ್ತಿದ್ದರೂ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದ ವಿಷಯ ಎಂದು ಕೈಕಟ್ಟಿ ಕುಳಿತಿರುವುದು ಕಳವಳಕಾರಿಯಾಗಿದೆ.
ಒಂದಂತೂ ಸತ್ಯ.. ನಾವು ಯಾವ ಆಹಾರವನ್ನೇ ತಿನ್ನಲಿ.. ಅದಕ್ಕೆ ಪ್ಲಾಸ್ಟಿಕ್ ಸುತ್ತಿದ್ದರೆ.. ಅದರ ಮೂಲಕ ಪ್ಲಾಸ್ಟಿಕ್ ಕೂಡಾ ನಮ್ಮ ದೇಹ ಸೇರುತ್ತದೆ. ಈಗಾಗಲೇ ಕುಡಿಯುವ ನೀರಿನಲ್ಲಿ, ಅಕ್ಕಿ ಸೇರಿದಂತೆ ನಾನಾ ಆಹಾರ ಪದಾರ್ಥಗಳಲ್ಲಿ ಗೊತ್ತಿದ್ದೂ ಗೊತ್ತಿದ್ದೂ ಪ್ಲಾಸ್ಟಿಕ್ ತಿನ್ನುತ್ತಿದ್ದೇವೆ. ಈಗ ಹೊಸದಾಗಿ ಸೇರ್ಪಡೆಯಾಗಿರುವುದು ಅತ್ಯಂತ ಆರೋಗ್ಯಕರ ಆಹಾರವಾಗಿದ್ದ ರಾಗಿ ಮುದ್ದೆ.