ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ದ ಹೋರಾಟ ಆರಂಭಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಿನ್ನಮತದ ಕಾವು, ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಸಲಹೆಯ ಮೇರೆಗೆ ಯತ್ನಾಳ್ ’ ಕದನ ವಿರಾಮ’ ಘೋಷಿಸಿದ್ದಾರೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಬಸನಗೌಡ ಪಾಟೀಲ್ ಯತ್ನಾಳ್ ಅವರಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಅವರ ಸೂಚನೆಯ ಮೇರೆಗೆ ಯತ್ನಾಳ್ ಸದ್ಯ ಮೌನ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆ ಎಂಟ್ರಿ ಆಗಿರುವುದು ಆರ್ ಎಸ್ ಎಸ್ ನಂ.3 ನಾಯಕ ಮುಕುಂದ್ ಜೀ ಎನ್ನಲಾಗಿದೆ.
ಮುಕುಂದ್ ಜೀಗೆ ಹೊಣೆ ಹೊರಿಸಿದ ಅಮಿತ್ ಶಾ..!
“ಇವತ್ತಿನ ಪರಿಸ್ಥಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸಲು ಸಾಧ್ಯವಿಲ್ಲ. ಹೀಗಾಗಿ ಅವರ ಪದಚ್ಯುತಿಗಾಗಿ ಹೋರಾಡುತ್ತಿರುವವರು ಪಕ್ಷದ ಹಿತದೃಷ್ಟಿ ಯಿಂದ ಹೊಂದಿಕೊಂಡು ಹೋಗಬೇಕು ಮತ್ತು ಹೀಗೆ ಹೊಂದಿಕೊಂಡು ಹೋಗುವಂತೆ ನೀವು ಅವರ ಮನವೊಲಿಸಬೇಕುʼʼ ಇಂತಾದ್ದೊಂದು ಸಂದೇಶ ಬರುತ್ತಿದ್ದಂತೆಯೇ ಆರ್ ಎಸ್ ಎಸ್ ಪ್ರಮುಖರಾದ ಮುಕುಂದ್ ಜೀ ಆಕ್ಟಿವ್ ಆಗಿದ್ದಾರೆ. ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಮತ್ತಿತರರ ಜತೆ ಸಭೆ ನಡೆಸಿದ ಆರೆಸ್ಸೆಸ್‌ನ ಅಖಿಲ ಭಾರತ ಸಹ ಸರಕಾರ್ಯವಾಹ ಮುಕುಂದ್‌ಜೀ ಅವರು ಕೆಲವು ಸಲಹೆಗಳನ್ನು ನೀಡಿದೆ ಎನ್ನಲಾಗಿದೆ.
ಯಾರು ಈ ಮುಕುಂದ್ ಜೀ (ಈ ಜೀ ಎನ್ನುವುದು ಆರ್ ಎಸ್ ಎಸ್ ಪ್ರಮುಖರಿಗೆ ಸಾಧಾರಣವಾಗಿ ಬಳಸವು ಗೌರವ ಸೂಚಕ ಪದ. ಸಂತೋಷ್ ಜೀ, ಮುಕುಂದ್ ಜೀ, ಜಯದೇವ್ ಜೀ.. ಇತ್ಯಾದಿಗಳಂತೆ.. ಈ ಜೀ ಅನ್ನೋದು ಸೇರಿಸದಿದ್ದರೆ ಬಹುತೇಕರಿಗೆ ಅರ್ಥವೇ ಅಗುವುದಿಲ್ಲ.) ಎಂದರೆ ಆರ್ ಎಸ್ ಎಸ್ ನಲ್ಲಿ ಮೋಹನ್ ಭಾಗವತ್ ನಂ.1 ಸ್ಥಾನದಲ್ಲಿದ್ದಾರೆ. ನಂ.2 ಸ್ಥಾನದಲ್ಲಿರುವುದು ಶಿವಮೊಗ್ಗದವರೇ ಆದ ದತ್ತಾತ್ರೇಯ ಹೊಸಬಾಳೆ. ಅವರ ನಂತರದ ಸ್ಥಾನದಲ್ಲಿರುವು ಮುಕುಂದ್.
ಸಂಘ ಪರಿವಾರದ ‘ನಂಬರ್ 3’ ಆಗಿರುವ ಮುಕುಂದ್‌ಜೀ ಈ ಹಿಂದಿದ್ದ ಜಯ ದೇವ್ ಅವರಂತೆ ಪವರ್ ಫುಲ್ ಆಗಿದ್ದಾರೆ. ದತ್ತಾತ್ರೇಯ ಹೊಸಬಾಳೆ ಅವರ ನಂತರದ ಪೊಸಿಷನ್ನಿನಲ್ಲಿರುವ ಮುಕುಂದ್‌ಜೀ ಒಂದು ಮಾತು ಹೇಳಿದರು ಎಂದರೆ ರಾಜ್ಯ ಬಿಜೆಪಿಯ ಯಾವುದೇ ನಾಯಕ ಅದನ್ನು ನಿರ್ಲಕ್ಷಿಸುವುದು ಕಷ್ಟ. ಅವರು ಯತ್ನಾಳ್ ಪಡೆಗೆ ʻʻಸದ್ಯಕ್ಕೆ ವಿಜಯೇಂದ್ರ ಪೊಸಿಷನ್ ಅಲುಗಾಡಿಸುವುದಕ್ಕೆ ಆಗುತ್ತಿಲ್ಲ. ಆಗುವುದಿಲ್ಲ. ಹಾಗಂತ ನಿಮ್ಮನ್ನು ನಿರ್ಲಕ್ಷಿಸುವ ಹಾಗೂ ಇಲ್ಲ. ಯತ್ನಾಳ್ ಅವರಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಅರವಿಂದ ಲಿಂಬಾವಳಿಯವರಿಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ಕೊಡಲಾಗುವದುʼʼ ಎಂದು ಹೇಳೀದ್ದಾರಂತೆ.
ತಮಗೆ ಇಷ್ಟ ವಾಗದ ಮಾತನ್ನು ಅವರು ಹೇಳಿದರೆ ಒಪ್ಪುವುದು ಹೇಗೆ? ಹಾಗಂತಲೇ ಯತ್ನಾಳ್ ಆಂಡ್ ಗ್ಯಾಂಗು ಪ್ರತಿಕ್ರಿಯಿಸಿ, “ಈ ಕುರಿತು ಎಲ್ಲರ ಜತೆ ಮಾತನಾಡುತ್ತೇವೆ ಸರ್” ಅಂತ ಹೇಳಿ ಮೇಲೆದ್ದು ಬಂದಿದೆ. ಒಟ್ಟಾರೆಯಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡದ ವಿಜಯೇಂದ್ರ ವಿರುದ್ದದ ಹೋರಾಟದ ಕಾವು ಕಮ್ಮಿಯಾಗುತ್ತಿದೆ. ಇದರ ಜೊತೆಗೆ, ಇವರೊಂದಿಗೆ ಇದ್ದ ಹಲವು ನಾಯಕರೂ ಅಷ್ಟಾಗಿ ಇವರ ಜೊತೆ ಕಾಣಿಸಿಕೊಳ್ಳುತ್ತಿಲ್ಲ. ಯಡಿಯೂರಪ್ಪನವರ ಕುಟುಂಬದ ವಿರುದ್ದ ಏಕಾಂಗಿ ಹೋರಾಟ ಆರಂಭಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಏಕಾಂಗಿಯಾಗುತ್ತಿದ್ದಾರಾ ಎನ್ನುವ ಚರ್ಚೆ ಆರಂಭವಾಗಿದೆ.