ಕನಸು. ಅದು ಮನುಷ್ಯನ ಸುಪ್ತಮನಸ್ಸಿನ ಕಲ್ಪನೆಯೋ.. ಆಗಿ ಹೋದ ಘಟನೆಗಳ ಫ್ಲಾಶ್ ಬ್ಯಾಕೋ.. ಆಗಲಿರುವ ಭವಿಷ್ಯದ ಸೂಚನೆಯೋ.. ಗೊತ್ತಿಲ್ಲ. ಇದೇ ಸರಿ ಎಂದು ಹೇಳಿದವರಿಲ್ಲ. ಆದರೆ.. ಕನಸುಗಳಿಗೆ ಅರ್ಥ ಇದೆ ಎಂದು ಹೇಳಿದವರಿಗೇನೂ ಕಮ್ಮಿ ಇಲ್ಲ. ಒಬ್ಬ ವ್ಯಕ್ತಿಯು ನಿದ್ದೆ ಮಾಡುವಾಗ ಅನೇಕ ರೀತಿಯ ಕನಸುಗಳನ್ನು ನೋಡುತ್ತಾನೆ. ಅದು ಅವನಿಗೆ ಜೀವನದಲ್ಲಿ ಶುಭ ಮತ್ತು ಅಶುಭ ಚಿಹ್ನೆಗಳನ್ನು ನೀಡುತ್ತದೆ. ಅಂತಹ ಚಿಹ್ನೆಗಳಲ್ಲಿ ಹಾವುಗಳ ಕನಸೂ ಇವೆ.
ಸ್ವಪ್ನ ಶಾಸ್ತ್ರದ ಪ್ರಕಾರ, ಹಾವುಗಳಿಗೆ ಸಂಬಂಧಿಸಿದ ಕನಸುಗಳಲ್ಲಿ ಶುಭವೂ ಇದೆ. ಅಶುಭವೂ ಇದೆ. ಅಂದರೆ ಒಂದೊಂದು ರೀತಿಯ ಹಾವುಗಳ ಕನಸಿಗೆ ಒಂದೊಂದು ರೀತಿಯ ಅರ್ಥ.
ಕನಸಿನಲ್ಲಿ ಹಾವು ಕಚ್ಚಿದರೆ..
ನಮಗೆ ಯಾರ ಮೇಲಾದರೂ ಅತಿಯಾದ ಕೋಪವಿದ್ದಾಗ ಅಥವಾ ದ್ವೇಷವಿದ್ದಾಗ ಇಂಥಹ ಕನಸುಗಳು ಬೀಳುತ್ತವೆ. ಇದು ಸೈಕಾಲಜಿ. ಅನಾರೋಗ್ಯದ ಸೂಚನೆ ಇದೆ ಎನ್ನುತ್ತದೆ ಸ್ವಪ್ನ ಶಾಸ್ತ್ರ. ಮುಂದಿನ ದಿನಗಳಲ್ಲಿ ನೀವು ಯಾವುದಾದರೂ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಿಬರಬಹುದು ಎಂಬುದನ್ನು ಈ ಕನಸು ಹೇಳುತ್ತದೆ. ಇದಲ್ಲದೇ ಇಂತಹ ಕನಸುಗಳು ಇನ್ನಿತರ ಅಶುಭ ಸೂಚನೆಗಳನ್ನು ಕೂಡ ನೀಡುತ್ತದೆ.
ಕನಸಿನಲ್ಲಿ ಹಾವನ್ನು ಕೊಲ್ಲುತ್ತಿದ್ದರೆ..
ಸೈಕಾಲಜಿ ಪ್ರಕಾರ ಇದು ಮತ್ತೊಮ್ಮೆ ಕೋಪ, ದ್ವೇಷಕ್ಕೆ ಹೋಲಿಸುತ್ತದೆ ಸೈಕಾಲಜಿ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಹಾವನ್ನು ಕೊಲ್ಲುವುದನ್ನು ನೋಡುವುದು ಅತ್ಯಂತ ಶುಭ. ಅದು ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆದುಕೊಳ್ಳಲಿದ್ದೀರಿ ಎಂಬುದನ್ನು ಹೇಳುತ್ತದೆ. ನಿಮಗೆ ಇಂತಹ ಕನಸು ಬಿದ್ದರೆ ಒಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಶತ್ರುಗಳಿಂದ ಮುಕ್ತಿ ಪಡೆಯುವ ಸಾಧ್ಯತೆ ಎನ್ನಲಾಗುತ್ತದೆ.
ಕನಸಿನಲ್ಲಿ ಜೋಡಿ ಹಾವುಗಳ ಮಿಲನ
ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ, ಆ ವ್ಯಕ್ತಿಯು ತನ್ನ ಜೀವನದಲ್ಲಿ ಅದೃಷ್ಟದ ಚಿಹ್ನೆಗಳನ್ನು ಪಡೆಯುತ್ತಾನೆ. ಆತನ ಜೀವನದಲ್ಲಿ ಒಂದಿಷ್ಟು ಒಳ್ಳೆಯ ಘಟನೆಗಳು ಸಂಭವಿಸಲಿದೆ. ಅಂತಹ ವ್ಯಕ್ತಿಯ ಎಲ್ಲಾ ಆಸೆಗಳನ್ನು ಆದಷ್ಟು ಬೇಗ ಈಡೇರುವುದು. ಅಲ್ಲದೆ ಜೋಡಿ ಹಾವುಗಳು ಎಂದರೆ ಸರ್ಪ ಮಿಥುನ. ಅದನ್ನು ನಿಜವಾಗಿ ನೋಡಿ ಸುಮ್ಮನಿದ್ದರೆ ಅದು ಶುಭ. ಮಿಲನದಲ್ಲಿರುವ ಹಾವುಗಳಿಗೆ ಕಲ್ಲು ಹೊಡೆಯುವ, ಮಿಥುನವನ್ನು ಕೆಡಿಸಿವು ಹುಂಭತನ ಮಾಡಬಾರದು. ವಾಸ್ತವದಲ್ಲಿ ಅಂತಹ ಹಾವುಗಳ ಮಿಲನ ಮಹೋತ್ಸವ ನೋಡಿದ್ದರೆ, ಅದು ಕನಸಿನಲ್ಲಿಯೂ ಕಾಣಿಸುತ್ತದೆ ಎನ್ನುತ್ತದೆ ಸೈಕಾಲಜಿ.
ಕಪ್ಪು ಹಾವು.. ಹಸಿರು ಹಾವು..
ಕನಸಿನಲ್ಲಿ ಕಪ್ಪು ಬಣ್ಣದ ಹಾವನ್ನು ನೋಡುವುದು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ. ಹಸಿರು ಬಣ್ಣದ ಹಾವನ್ನು ನೋಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಯಾವ ಬಣ್ಣದ ಹಾವೂ ಅಶುಭಾಲ್ಲ ಎನ್ನುವ ವಾದಗಳೂ ಇವೆ. ಡಿಸ್ಕವರಿ ಚಾನೆಲ್ಲುಗಳಲ್ಲಿ ಹಾವುಗಳನ್ನೇ ನೋಡುತ್ತಿದ್ದರೆ ಇಂತಹ ಕನಸುಗಳು ಬೀಳುತ್ತಲೇ ಇರುತ್ತವೆ ಎನ್ನುವುದು ಮನಃಶಾಸ್ತ್ರಜ್ಞರ ವಾದ.
ಕನಸಿನಲ್ಲಿ ಹಾವು ಹಲ್ಲು, ವಿಷ ಕಕ್ಕುವುದು ಕಂಡರೆ..
ನಾವು ನಮ್ಮ ಕನಸಿನಲ್ಲಿ ಹಾವಿನ ಹಲ್ಲುಗಳನ್ನು, ವಿಷ ಕಕ್ಕುವುದನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವ ವ್ಯಕ್ತಿ ತನ್ನ ಕನಸಿನಲ್ಲಿ ಹಾವಿನ ಹಲ್ಲುಗಳನ್ನು, ವಿಷ ಕಕ್ಕುವುದನ್ನು ನೋಡುತ್ತಾನೋ ಅವನು ತನ್ನ ಮುಂದಿನ ದಿನಗಳಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುತ್ತಾನೆ ಎಂಬುದಾಗಿದೆ. ಸೈಕಾಲಜಿಯಲ್ಲಿ ಇದು ಮನಸ್ಸಿನ ಭಯವೇ ಹೊರತು, ಏನೂ ಆಗಲ್ಲ ಎನ್ನುತ್ತಾರೆ.