ಮಲೆ ಮಹಾದೇಶ್ವರನನ್ನು ಏಳು ಹೆಡೆಗಳ ಸರ್ಪ ಕಾಯುತ್ತದೆ ಎನ್ನವುದು ನಂಬಿಕೆ. ಮಲೆ ಮಹದೇಶ್ವರ ಬೆಟ್ಟದಿಂದ ಸುಮಾರು 14 ಕಿಮೀ ದೂರದಲ್ಲಿರುವ ನಾಗಮಲೆ ಬೆಟ್ಟ, ಮಾದಪ್ಪನ ಸರ್ಪದ ವಾಸಸ್ಥಾನ ಎನ್ನುವುದು ಒಂದು ನಂಬಿಕೆ. ಈ ಪ್ರದೇಶಕ್ಕೆ ಹೋಗುವುದಕ್ಕೆ ಸ್ಪೆಷಲ್ ಅನುಮತಿ ಬೇಕು. ಆಗಾಗ್ಗೆ ಮಾದಪ್ಪ, ಸರ್ಪದ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಂಡು ಸಂದೇಶ ನೀಡುತ್ತಾನೆ ಎನ್ನುವುದು ಭಕ್ತರ ನಂಬಿಕೆ. ಅಂತಹದ್ದೊಂದು ಸರ್ಪ, ನಟ ಪ್ರಭುದೇವ ಅವರ ತಾಯಿಗೆ ಸುಮಾರು 39 ವರ್ಷಗಳ ಹಿಂದೆ ಕಾಣಿಸಿತ್ತಂತೆ. ಆಗ ಪ್ರಭುದೇವ ತಾಯಿ ಮಹಾದೇವಮ್ಮ, ಮಾದಪ್ಪನ ದೇಗುಲ ಕಟ್ಟಿಸೋದಾಗಿ ಹರಕೆ ಹೊತ್ತಿದ್ದರಂತೆ. ತಾಯಿಯ ಆ ಕನಸನ್ನು ಈಡೇರಿಸಿದ್ದಾರೆ ಪ್ರಭುದೇವ.
ಪ್ರಭುದೇವ ಅವರು ಇಂಡಿಯಾ ಲೆವೆಲ್ ಸ್ಟಾರ್ ಆದರೂ, ಮೂಲತಃ ಕನ್ನಡದವರು. ಮೈಸೂರು ಸಮೀಪದ ಮೂಗೂರಿನವರು. ಪ್ರಭುದೇವ ಅವರಿಗೆ ಕನ್ನಡ ಚೆನ್ನಾಗಿಯೇ ಬರುತ್ತದೆ. ಅದೂ ಚಾಮರಾಜನಗರದ ಕನ್ನಡ. ಪ್ರಭುದೇವ ಅವರ ತಾಯಿ ಮಹಾದೇವಮ್ಮ, ಮಾದಪ್ಪನ ಭಕ್ತೆ. ಅವರದ್ದು ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮ. ಮೈಸೂರ ಭಾಗದ ಬಹುತೇಕರು ಮಲೆಮಹಾದೇಶ್ವರನ ಭಕ್ತರು. ಮಹಾದೇವಮ್ಮ ಕೂಡಾ ಸುಮಾರು 39 ವರ್ಷಗಳ ಹಿಂದೆ, ಮಾದಪ್ಪನಿಗೆ ಹರಕೆ ಹೊತ್ತಿದ್ದರಂತೆ. ಆ ಹರಕೆಯನ್ನು ಈಗ ಅವರ ಮಗ ಪ್ರಭುದೇವ ಈಡೇರಿಸಿದ್ದಾರೆ.
1986ರಲ್ಲಿ ಮಹಾದೇವಮ್ಮ ಕೆಂಬಾಲು ಗ್ರಾಮಕ್ಕೆ ಬಂದಿದ್ದಾಗ ಮಾದಪ್ಪನ ದೇಗುಲ ಚಿಕ್ಕದಾಗಿತ್ತಂತೆ. ಪಾಳು ಬಿದ್ದಿತ್ತಂತೆ. ಸಾವಿರಾರು ವರ್ಷಗಳಷ್ಟು ಪುರಾತನ ಎನ್ನಬಹುದಾಗಿದ್ದ ಆ ದೇವಸ್ಥಾನ ಇದ್ದ ಜಾಗದಲ್ಲಿ ಗಿಡಗಂಟೆಗಳು ಬೆಳೆದಿದ್ದವಂತೆ. ಆ ಗಿಡಗಂಟೆಗಳಿದ್ದ ಪೊದೆಯಲ್ಲಿ ಮಹಾದೇವಮ್ಮನವರ ಕಣ್ಣಿಗೆ ಒಂದು ಸರ್ಪ ಬಿದ್ದಿದ್ದಂತೆ. ಆಗಲೇ ದೇವಸ್ಥಾನ ಕಟ್ಟಿಸುವ ಮನಸ್ಸು ಮಾಡಿದ್ದ ಮಹಾದೇವಮ್ಮ, ಅದಕ್ಕೆ ಆಗ ಒಂದಿಷ್ಟು ಜಾಗವನ್ನೂ ಖರೀದಿಸಿದ್ದರಂತೆ ಮಹಾದೇವಮ್ಮ. ಆಗ ಒಂದು ಮಟ್ಟಿಗೆ ಪುಟ್ಟದೊಂದು ದೇವಸ್ಥಾನ ಕಟ್ಟಿಸಿದ್ದ ಮಹಾದೇವಮ್ಮನವರಿಗೆ ಅದು ಅಷ್ಟೇನೂ ಸಮಾಧಾನ ಕೊಟ್ಟಿರಲಿಲ್ಲ. ಈಗ ಮಗ ಅದನ್ನು ನನಸು ಮಾಡಿದ್ದಾನೆ.
ಮೈಸೂರಿನ ಕೆಂಬಾಲು ಗ್ರಾಮದಲ್ಲಿದ್ದ ಮಾದಪ್ಪನ ದೇಗುಲವನ್ನು ಜೀರ್ಣೋದ್ಧಾರ ಮಾಡಿಸಿರುವ ಪ್ರಭುದೇವ, ಇಡೀ ಊರಿಗೆ ಎರಡು ದಿನ ಅನ್ನಸಂತರ್ಪಣೆ ಮಾಡಿಸಿದ್ದಾರೆ. ಏಪ್ರಿಲ್ 14ರಂದು ಪ್ರಭುದೇವ ಪುತ್ರನ ಹುಟ್ಟುಹಬ್ಬ ಕೂಡ ಇತ್ತು. ಹೀಗಾಗಿ ಕೆಂಬಾಲು ಗ್ರಾಮದಲ್ಲಿ ಸತತ ಮೂರು ದಿನ ಹೋಮಹವನಗಳಲ್ಲಿ ಪಾಲ್ಗೊಂಡ ಪ್ರಭುದೇವ ದಂಪತಿ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಿದ್ದಾರೆ.
ಅವತ್ತು ಚಿಕ್ಕದಾಗಿ ನಿರ್ಮಿಸಿದ್ದ ದೇವಸ್ಥಾನವನ್ನ ಪ್ರಭುದೇವ ಅವರು ಇವತ್ತು ಪುನರ್ ನಿರ್ಮಾಣ ಮಾಡಿ ಅಮ್ಮನ ಆಸೆ ಪೂರೆಸಿದ್ದಾರೆ. ಈಗ ಮಗ ಮಾಡಿದ ಕೆಲಸ ಕಂಡು ತಾಯಿ ಮಹದೇವಮ್ಮ ಕೂಡ ಫುಲ್ ಖುಷ್ ಆಗಿದ್ದಾರೆ. ಅಂದುಕೊಂಡಂತೆ ಎಲ್ಲಾ ಕಾರ್ಯವನ್ನ ಮಗ ನೇರವೇರಿಸಿದ್ದಾನೆ ಅಂತ ಪ್ರಭುದೇವರನ್ನ ಹಾಡಿ ಹೊಗಳಿದ್ದಾರೆ.
ಅಂದಹಾಗೆ ಸುಮಾರು ಶತಮಾನಗಳ ಹಿಂದೆ ಮಾದೇಶ್ವರ ಬದುಕಿದ್ದರು. ಅವರಿಗೆ ಹುಲಿಯೇ ವಾಹನ ಎನ್ನುವುದು ಒಂದು ನಂಬಿಕೆ. ಮಾದಪ್ಪನ ಪವಾಡಗಳಿಗೆ ಆದಿಅಂತ್ಯಗಳಿಲ್ಲ. ಅಂತಹ ನಂಬಿಕೆಯೇ ಫಲವೇ ಪ್ರಭುದೇವ ಅವರ ತಾಯಿ ಕಟ್ಟಿಸಿದ ಮಾದಪ್ಪನ ದೇಗುಲ.