ಗಂಡನ ಚಿಕಿತ್ಸೆಗಾಗಿ ಇಷ್ಟು ದಿನ ತಮ್ಮ ನೋವು ನುಂಗಿಕೊಂಡಿದ್ದ ಗೀತಾ ಶಿವರಾಜ್ ಕುಮಾರ್, ಪತಿ ಹುಷಾರಾದ ನಂತರ ತಾವು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಗೊಳಗಾಗಿ ಗುಣಮುಖರಾಗಿ ಬಂದಿದ್ದರು. ಈ ವೇಳೆ ಪತಿಯ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದ ಗೀತಾ ಅವರಿಗೂ ಈಗ ಆಪರೇಷನ್ ಆಗಿದೆ. ಬೆನ್ನು ನೋವು ಹಿನ್ನೆಲೆಯಲ್ಲಿ ಕುತ್ತಿಗೆಯ ಭಾಗದಲ್ಲಿ ಆಪರೇಷನ್ ಆಗಿದೆ.
ಸುದೀರ್ಘ ಕಾಲದಿಂದ ಗೀತಾ ಕತ್ತು ಹಾಗೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ವೇಳೆ ಶಿವರಾಜ್ ಕುಮಾರ್ ಅವರಿಗೆ ಬ್ಲಾಡರ್ ಕ್ಯಾನ್ಸರ್ ಇರುವ ವಿಷಯ ಗೊತ್ತಾಗಿದೆ. ಇದೇ ವೇಳೆ ತಾವೂ ಆಪರೇಷನ್ ಮಾಡಿಸಿಕೊಂಡರೆ, ಪತಿಯನ್ನು ನೋಡಿಕೊಳ್ಳೋದು ಯಾರು ಎಂದು ತನಗೆ ತಾನೇ ಹೇಳಿಕೊಂಡ ಗೀತಾ ಅವರು, ಆಪರೇಷನ್ನಿಗೆ ಸಲಹೆ ನೀಡಲಾಗಿತ್ತಾದರೂ, ಮುಂದೂಡಿಕೊಂಡೇ ಬಂದಿದ್ದರು. ಇದೀಗ ಕುತ್ತಿಗೆ ನೋವು ಉಲ್ಬಣವಾದ ಕಾರಣ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಗೀತಾ ಶಿವರಾಜ್ ಕುಮಾರ್ ಅವರ ಆರೋಗ್ಯ ಸ್ಥಿರವಾಗಿದೆ.
ಶಿವಮೊಗ್ಗದಲ್ಲಿ ಮಾತನಾಡಿದ್ದ ಗೀತಾ ಅವರ ಸಹೋದರ ಹಾಗೂ ಸಚಿವ ಮಧು ಬಂಗಾರಪ್ಪ, ಗೀತಕ್ಕನಿಗೆ ಸರ್ಜರಿ ಆಗಿದೆ ಎನ್ನುವ ಮಾಹಿತಿ ನೀಡಿದ್ದರು. ಆದರೆ, ಸರ್ಜರಿಯ ಕಾರಣ ಏನು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಈಗ ಅವರ ಆಪ್ತ ಮೂಲಗಳಿಂದ ಸರ್ಜರಿ ಹಿಂದಿನ ಕಾರಣ ರಿವೀಲ್ ಆಗಿದೆ. ಅಂದಹಾಗೆ ಈಗ ಪತ್ನಿಯನ್ನು ಆಸ್ಪತ್ರೆಯಲ್ಲಿದ್ದುಕೊಂಡು ನೋಡಿಕೊಳ್ಳುತ್ತಿರುವುದು ಪತಿ ಶಿವರಾಜ್ ಕುಮಾರ್.
ಬ್ಲಾಡರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಕಳೆದ ವರ್ಷಾಂತ್ಯದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್‌ಗೆ ಸರ್ಜರಿ ಮಾಡಲಾಗಿತ್ತು. ಶಿವರಾಜ್ ಕುಮಾರ್ ಅವರಿಗೆ ಬ್ಲಾಡರ್ ರಿಮೂವ್ ಮಾಡಲಾಗಿದೆ. ಸಣ್ಣ ಕರುಳಿನಲ್ಲೇ ಬ್ಲಾಡರ್ ಮಾಡಲಾಗಿದೆ. ಅದಿನ್ನೂ ಬೆಳೆಯೋಕೆ 6 ತಿಂಗಳಷ್ಟು ಸಮಯ ಬೇಕಾಗಬಹುದು ಎಂದು ಶಿವರಾಜ್ ಕುಮಾರ್ ತಿಳಿಸಿದ್ದರು. ಒಟ್ಟು 6 ಸರ್ಜರಿಗಳಿಗೆ ಶಿವಣ್ಣ ಒಳಗಾಗಿದ್ದರು. ಸತತವಾಗಿ 5 ಗಂಟೆ 30 ನಿಮಿಷಗಳ ಕಾಲ ಈ ಸರ್ಜರಿ ನಡೆದಿತ್ತು.
ಇದೆಲ್ಲ ಆಗಿ ಶಿವಣ್ಣ ಗುಣಮುಖರಾಗಿದ್ದಾರೆ. ಚಿತ್ರೀಕರಣಕ್ಕಾಗಿ ಹೈದರಾಬಾದಿಗೆ ಹೋಗಿ ಬಂದಿದ್ದಾರೆ. ದಯಾನಂದ್ ಸಾಗರ್ ಕಾಲೇಜ್ ಕಾರ್ಯಕ್ರಮದಲ್ಲಿ ಹಾಡಿ ಕುಣಿದಿದ್ದಾರೆ. ಆಗಿರುವ ಚಿಕಿತ್ಸೆ ನೋಡಿದರೆ.. ಕ್ಯಾನ್ಸರ್ ಕೂಡಾ ಶಾಕ್ ಆಗುವಂತೆ ರಿಕವರ್ ಆಗಿದ್ದಾರೆ. ಆದರೆ.. ಕುಟುಂಬದಲ್ಲಿ ಮಾತ್ರ ಒಂದಲ್ಲ ಒಂದು ಅನಾರೋಗ್ಯದ ಸಮಸ್ಯೆ. ಶಿವರಾಜ್ ಕುಮಾರ್ ಇದೀಗ ಚೇತರಿಕೆಯ ಹಾದಿಯಲ್ಲಿದ್ದಾರೆ. ವಿಶ್ರಾಂತಿಯ ಜೊತೆ ಜೊತೆಗೆ ವರ್ಕ್ ಕಮಿಟ್‌ಮೆಂಟ್‌ಗಳ ಕಡೆಗೂ ಗಮನ ಹರಿಸಿದ್ದಾರೆ. ಮತ್ತೆ ಬಣ್ಣ ಹಚ್ಚಿ ಶೂಟಿಂಗ್ ಸೆಟ್‌ಗೆ ಶಿವಣ್ಣ ವಾಪಸ್ ಆಗಿದ್ದಾರೆ. ಹೀಗಿರುವಾಗಲೇ, ಗೀತಾ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಆದಷ್ಟು ಬೇಗ ಗೀತಾ ಶಿವರಾಜ್ ಕುಮಾರ್ ಚೇತರಿಸಿಕೊಳ್ಳಲಿ ಅನ್ನೋದೇ ಅಭಿಮಾನಿಗಳ ಹಾರೈಕೆ. ಪತ್ನಿಯ ಜೊತೆ ಶಿವಣ್ಣ ನಿಂತಿದ್ದಾರೆ.